ಸಾರಾಂಶ
ಶಿರಹಟ್ಟಿ: ಶಿರಹಟ್ಟಿ ಪಟ್ಟಣದ ಹೃದಯ ಭಾಗದಲ್ಲಿರುವ ಬೇಂದ್ರ ಭವನ ಸಾರ್ವಜನಿಕ ಬಳಕೆ ಇಲ್ಲದೇ ಪಾಳು ಬಿದ್ದಿದ್ದು, ಹಂದಿ, ನಾಯಿಗಳ ವಾಸ, ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಪಪಂ ವ್ಯಾಪ್ತಿಗೆ ಬರುವ ಈ ಬೇಂದ್ರೆ ಭವನ ಅಭಿವೃದ್ಧಿಪಡಿಸಿ ಸಾರ್ವಜನಿಕ ಸಭೆ, ಸಮಾರಂಭ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಜಾಪರ ವೇದಿಕೆ ವತಿಯಿಂದ ಶುಕ್ರವಾರ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಸಂಘಟನೆ ತಾಲೂಕು ಘಟಕದ ಅಧ್ಯಕ್ಷ ಹಸನ್ ಎನ್.ತಹಸೀಲ್ದಾರ್ ಮಾತನಾಡಿ, ದತ್ತಾತ್ರೆಯ ರಾಮಚಂದ್ರ ಬೇಂದ್ರೆ ಕನ್ನಡದ ಪ್ರಸಿದ್ಧ ಕವಿ ಹಾಗೂ ಕಾದಂಬರಿಕಾರರು. ಕರ್ನಾಟಕದಲ್ಲಿ ವರಕವಿ ಎಂದು ಪ್ರಸಿದ್ಧರಾಗಿದ್ದಾರೆ. ಇವರು ಮೂಲತಃ ಶಿರಹಟ್ಟಿ ಪಟ್ಟಣದವರೆಂದು ಹೇಳಲಾಗುತ್ತಿದ್ದು, ಮಾಜಿ ಸಂಸದ ಪ್ರೊ. ಐ.ಜಿ.ಸನದಿ ಅವಧಿಯಲ್ಲಿ ಲಕ್ಷಾಂತರ ಅನುದಾನ ಬಳಕೆ ಮಾಡಿ ಸುಸಜ್ಜಿತ ಬೇಂದ್ರ ಭವನ ಕಟ್ಟಡ ನಿರ್ಮಾಣ ಮಾಡಿದ್ದು, ಸರಿಯಾದ ನಿರ್ವಹಣೆ ಇಲ್ಲದೇ ಕಾಲಾಂತರದಲ್ಲಿ ಪಾಳುಬಿದ್ದು, ಅನೈತಿಕ ಚಟುವಟಿಕೆಗಳಿಗೆ ಉಪಯೋಗವಾಗುತ್ತಿದೆ ಎಂದು ದೂರಿದರು.ಬೇಂದ್ರ ಭವನದ ಸುತ್ತಲೂ ಹಂದಿ,ನಾಯಿಗಳು ವಾಸವಾಗಿದ್ದು, ನಿತ್ಯ ರಾತ್ರಿ ಕುಡುಕರ ಹಾವಳಿ ಹೆಚ್ಚಾಗಿದೆ. ಈ ಕುರಿತಂತೆ ಅನೇಕ ಬಾರಿ ಅಧಿಕಾರಿಗಳ ಗಮನ ಸೆಳೆಯಲಾಗಿದೆ. ಯಾರು ಗಂಭೀರವಾಗಿ ತೆಗೆದುಕೊಂಡಿಲ್ಲ. ಪಕ್ಕದಲ್ಲಿಯೇ ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆ ಇದ್ದು, ಅನೈತಿಕ ಚಟುವಟಿಕೆಯಿಂದ ಮಕ್ಕಳ ಓದಿಗೆ ಹಿನ್ನಡೆಯಾಗುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದ್ದು, ಸುಸಜ್ಜಿತ ಕಟ್ಟಡ ಸ್ವಚ್ಛಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ನೀಡಬೇಕು ಎಂದು ಆಗ್ರಹಿಸಿದರು.
ಧಾರ್ಮಿಕ ಹಾಗೂ ಸಂಸ್ಕೃತಿಕ ಕಾರ್ಯಕ್ರಮ, ಸಭೆ ಸಮಾರಂಭ ನಡೆಸುವ ಸಲುವಾಗಿ ಬೇಂದ್ರೆ ಭವನ ನಿರ್ಮಿಸಿದ್ದು, ಸದ್ಯ ಇದು ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ನೋವಿನ ಸಂಗತಿಯಾಗಿದೆ. ಕುಡುಕರು, ಕಿಡಗೇಡಿಗಳು ಭವನದ ಕಿಡಕಿ, ಬಾಗಿಲು ಒಡೆದಿದ್ದು, ನೆಲಕ್ಕೆ ಹೊದಿಸಲಾಗಿದ್ದ ಟೈಲ್ಸ್ ಕಲ್ಲುಗಳನ್ನು ಕಿತ್ತುಕೊಂಡು ಹೋಗಿದ್ದಾರೆ. ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಬೇಂದ್ರೆಯವ ಹೆಸರಿನಲ್ಲಿ ನಿರ್ಮಾಣವಾದ ಭವನ ಉಪಯೋಗಕ್ಕೆ ಬಾರದಾಗಿದೆ ಎಂದು ದೂರಿದರು.ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದು, ದುರ್ನಾತ ಬೀರುತ್ತಿದೆ. ಈ ತರಹದ ವಾತಾವರಣ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಎಲ್ಲ ಸಾಧ್ಯತೆ ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಜವಾಬ್ದಾರಿ ಹೊತ್ತ ಇಲಾಖೆ ಅಧಿಕಾರಿಗಳು ಬೇಂದ್ರೆ ಭವನ ಅಭಿವೃದ್ಧಿಪಡಿಸಿ ಸಾರ್ವಜನಿಕರ ಬಳಕೆಗೆ ನೀಡಬೇಕು ಎಂದು ಒತ್ತಾಯಿಸಿದರು.
ನಂತರ ಉಪ ತಹಸೀಲ್ದಾರ ಜಿ.ಪಿ.ಪೂಜಾರ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಅಜ್ಜಪ್ಪ ಬಿಡವೆ, ಸುನೀಲ ಸರ್ಜಾಪೂರ, ಶರೀಫ ಗುಡಿಮನಿ, ಸುನಿಲಗೌಡ ಪಾಟೀಲ, ಪ್ರಕಾಶ ಅಕ್ಕಿ ಸೇರಿದಂತೆ ಅನೇಕರು ಇದ್ದರು.