ರಾಣಿಬೆನ್ನೂರು: ನಗರದ ಮಧ್ಯಭಾಗದಲ್ಲಿರುವ ಇತಿಹಾಸ ಪ್ರಸಿದ್ಧ ಹವಾಲ್ದಾರ ಹೊಂಡ ಮತ್ತು ಮಾದರ ಹೊಂಡಗಳನ್ನು ವೈಜ್ಞಾನಿಕ ರೀತಿಯಲ್ಲಿ ಸಮಗ್ರ ಅಭಿವೃದ್ಧಿ ಪಡಿಸುವಂತೆ ಬುಧವಾರ ಸಾರ್ವಜನಿಕರು ನಗರಸಭೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಬಿ. ಮರಿಗೌಡರ ಮೂಲಕ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.
ಶಹರದ ಮಧ್ಯಭಾಗದಲ್ಲಿ, ರಾಜ್ಯ ಹೆದ್ದಾರಿ ಪಕ್ಕದಲ್ಲಿ ಬರುವ ಐತಿಹಾಸಿಕ ಹಿನ್ನೆಲೆಯುಳ್ಳ ಹವಾಲ್ದಾರ ಹೊಂಡ ಮತ್ತು ಮಾದರ ಹೊಂಡಗಳು ಸುತ್ತ-ಮುತ್ತಲ ಕೃಷಿಭೂಮಿಗೆ, ಜಾನುವಾರುಗಳಿಗೆ ಕುಡಿಯುವ ನೀರಿಗೆ ಅನುಕೂಲವಾಗಿವೆ. ಪ್ರಸ್ತುತ ಎರಡೂ ಹೊಂಡಗಳು ಈಗ ಹಾಳು ಬಿದ್ದು ತ್ಯಾಜ್ಯ ಶೇಖರಣೆ ಸ್ಥಳವಾಗಿ ಬದಲಾಗಿದೆ. ಇದರಿಂದ ಇಲ್ಲಿ ಜಂಗಲ್ ಬೆಳೆದು ಅನೈತಿಕ ಚಟುವಟಿಕೆ ತಾಣವಾಗಿದೆ. ಇದಲ್ಲದೆ ಕಸಾಯಿಖಾನೆಯ ತ್ಯಾಜ್ಯ ಮತ್ತು ಸತ್ತ ಪ್ರಾಣಿಗಳನ್ನು ಇಲ್ಲಿ ತಂದು ಹಾಕುವುದರಿಂದ ಎರಡೂ ಹೊಂಡಗಳ ಸುತ್ತ-ಮುತ್ತಲೂ ವಾಸಿಸುವ ವಾಸಿಸುವ ಸಾರ್ವಜನಿಕರಿಗೆ ಸಾಂಕ್ರಾಮಿಕ ಕಾಯಿಲೆಗಳು ಹರಡುತ್ತಿವೆ. ಇದರ ಬಗ್ಗೆ ಇದರ ಸುತ್ತಮುತ್ತ ವಾಸವಾಗಿರುವ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದ ಎರಡೂ ಕೆರೆಗಳನ್ನು ವೈಜ್ಞಾನಿಕ ರೀತಿಯಲ್ಲಿ ಅಭಿವೃದ್ಧಿಪಡಿಸಿ, ಸಾರ್ವಜನಿಕರು ವಾಯುವಿಹಾರ ಮಾಡಲು, ವಯೋವೃದ್ಧರು ಮತ್ತು ಮಕ್ಕಳು ಕುಳಿತುಕೊಳ್ಳಲು ಆಸನ ನಿರ್ಮಿಸಬೇಕು. ಒಂದು ತಿಂಗಳ ಒಳಗಾಗಿ ಇದರ ಬಗ್ಗೆ ಸೂಕ್ತ ಕ್ರಮ ಜರುಗಿಸದಿದ್ದಲ್ಲಿ ಶಹರದ ಪರಿಸರಪ್ರೇಮಿಗಳು ಮತ್ತು ಆಸಕ್ತ ಸಂಘ-ಸಂಸ್ಥೆಗಳು ಮತ್ತು ಎರಡೂ ಹೊಂಡಗಳ ಸುತ್ತ-ಮುತ್ತ ವಾಸಿಸುವ ಸಾರ್ವಜನಿಕರೊಂದಿಗೆ ಅಹೋರಾತ್ರಿ ಧರಣಿ ಸತ್ಯಾಗ್ರಹ ಮಾಡಬೇಕಾಗುತ್ತದೆ. ಅದಕ್ಕೆ ಅವಕಾಶ ಮಾಡಿಕೊಡದೇ ಶೀಘ್ರದಲ್ಲಿ ಸಾರ್ವಜನಿಕರ ಸ್ನೇಹಿ ಪರಿಸರ ಸ್ನೇಹಿ ಬೇಡಿಕೆಯನ್ನು ಈಡೇರಿಸಿಕೊಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ಹನುಮಂತಪ್ಪ ಕಬ್ಬಾರ, ವಿನಾಯಕ ಮಾದಗೇರಿ, ನಾಗರಾಜ ಸೊಪ್ಪಿನ, ಬಾಬಣ್ಣ ಕುರವತ್ತಿ, ಕಿರಣ ಬಾರ್ಕಿ, ಚಿಕ್ಕಪ್ಪ ಚಲವಾದಿ, ವಿಜಯಕುಮಾರ ಗೌಳಿ, ರಾಜಣ್ಣ ಹಲಗೇರಿ, ಅಜಯ ದಾನಪ್ಪನವರ, ನಾಗರಾಜ ನಿಟ್ಟೂರ, ಬಸವರಾಜ ಗೌಳಿ, ಸೋಮಶೇಖರ ಗೌಳಿ, ಪ್ರಸಾದ ಗುಜ್ಜೇರ, ವಿನಾಯಕ ಸೊಪ್ಪಿನ, ರಾಘವೇಂದ್ರ ಸೊಪ್ಪಿನ ಮತ್ತಿತರರಿದ್ದರು.