ಬಯಲು ಸೀಮೆಯ ಬರಪೀಡಿತ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ನದಿ-ನಾಲೆಗಳಿಲ್ಲದೇ ಇರುವಂತಹ ಬರಡು ಜಿಲ್ಲೆಗಳಾಗಿವೆ.
ಕನ್ನಡಪ್ರಭ ವಾರ್ತೆ ಕೆಜಿಎಫ್ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕೃಷ್ಣಾ ನದಿಯಿಂದ ಶಾಶ್ವತ ನೀರಾವರಿ ಯೋಜನೆಯನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿ ತಾಲೂಕು ವಕೀಲರ ಸಂಘದಿಂದ ಮುಖ್ಯಮಂತ್ರಿಗಳಿಗೆ ತಹಸೀಲ್ದಾರ್ ಅವರ ಮುಖಾಂತರ ಮನವಿ ಪತ್ರವನ್ನು ಸಲ್ಲಿಸಲಾಯಿತು.ಮನವಿ ಪತ್ರವನ್ನು ಸಲ್ಲಿಸಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಎಸ್.ಎನ್. ರಾಜಗೋಪಾಲಗೌಡ ಮಾತನಾಡಿ, ಬಯಲು ಸೀಮೆಯ ಬರಪೀಡಿತ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ನದಿ-ನಾಲೆಗಳಿಲ್ಲದೇ ಇರುವಂತಹ ಬರಡು ಜಿಲ್ಲೆಗಳಾಗಿವೆ. ಇಲ್ಲಿರುವ ಕೆರೆ, ಕುಂಟೆಗಳೂ ಬತ್ತಿ ಹೋಗಿದ್ದು, ಮಳೆಯಾಶ್ರಿತ ಬರಪೀಡಿತ ಜಿಲ್ಲೆಗಳಾಗಿವೆ ಎಂದರು.ಈ ಜಿಲ್ಲೆಗಳಲ್ಲಿ ಯಾವುದೇ ಶಾಶ್ವತ ನೀರಾವರಿ ಯೋಜನೆಗಳಿಲ್ಲದೇ ಇರುವುದರಿಂದ ಜನಸಾಮಾನ್ಯರು ಕುಡಿಯುವ ಹನಿ ನೀರಿಗಾಗಿ ಮತ್ತು ವ್ಯವಸಾಯಕ್ಕಾಗಿ ಸುಮಾರು 1500 ಅಡಿಗಳಷ್ಟು ಆಳದವರೆಗೆ ಕೊಳವೆಬಾವಿಗಳನ್ನು ಕೊರೆಯಿಸುವ ಅನಿವಾರ್ಯತೆ ಎದುರಾಗಿದೆ. ಇದರಿಂದಾಗಿ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದ್ದು, ಅತ್ಯಂತ ಆಳದಿಂದ ಹೊರತೆಗೆಯುವ ನೀರು ಫ್ಲೋರೈಡ್‌ಯುಕ್ತವಾಗಿರುವುದರಿಂದ ಕುಡಿಯಲು ಮಾತ್ರವಲ್ಲದೇ ವ್ಯವಸಾಯಕ್ಕೂ ಯೋಗ್ಯವಲ್ಲವಾಗಿದೆ ಎಂದರು. ಆಳದಿಂದ ತೆಗೆಯುವ ನೀರಿನಲ್ಲಿ ಫ್ಲೋರೈಡ್, ನೈಟ್ರೇಟ್‌ಗಳ ಜೊತೆಗೆ ಯುರೇನಿಯಂ ಪತ್ತೆಯಾಗಿರುವುದು ಪ್ರತಿಷ್ಟಿತ ವೈಜ್ಞಾನಿಕ ಸಂಶೋಧನಾ ಸಂಸ್ಥೆಗಳ ಅಧ್ಯಯನದಿಂದ ದೃಢಪಟ್ಟಿದೆ. ಈ ರಾಸಾಯನಿಕಯುಕ್ತ ನೀರಿನ ಬಳಕೆಯಿಂದಾಗಿ ಕೃಷಿ ಬೆಳೆಗಳನ್ನು ವಿಷಪೂರಿತಗೊಳಿಸುವುದರ ಜೊತೆಗೆ ಜನ ಮತ್ತು ಜಾನುವಾರುಗಳನ್ನು ಮಾರಣಾಂತಿಕ ಖಾಯಿಲೆಗಳಿಗೆ ಒಳಗಾಗುವಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಜೋತಿ ಬಸು ಮಾತನಾಡಿ, ಎತ್ತಿನಹೊಳೆ ಯೋಜನೆಯಿಂದ ಇಲ್ಲಿಯವರೆಗೂ ಒಂದು ಬೊಗಸೆ ಕುಡಿಯುವ ನೀರು ಪೂರೈಸಲಾಗಿಲ್ಲ. ಬೆಂಗಳೂರು ನಗರದ ಅರೆ ಸಂಸ್ಕರಿತ ಮಲಿನಯುಕ್ತ ತ್ಯಾಜ್ಯ ನೀರನ್ನು ಜಿಲ್ಲೆಯ ಕೆಲವು ಆಯ್ದ ಕೆರೆಗಳಿಗೆ ಹರಿಸುತ್ತಿರುವುದರಿಂದ ಕುಡಿಯುವ ನೀರಿನ ಮೂಲಗಳು ಕಲುಷಿತಗೊಳ್ಳುತ್ತಿವೆ ಎಂದು ದೂರಿದರು. ಪ್ರತಿಭಟನೆಯಲ್ಲಿ ವಕೀಲರ ಸಂಘದ ಜಂಟಿ ಕಾರ್ಯದರ್ಶಿ ಜಗನ್ನಾಥ್, ಕನ್ನಡ ಪರ ಹೋರಾಟಗಾರ ರಂಜಿತ್, ವಕೀಲರು ಇದ್ದರು.
೧೭ಕೆಜಿಎಫ್೧ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಶಾಶ್ವತ ನೀರಾವರಿಗೆ ಆಗ್ರಹಿಸಿ ತಾಲೂಕು ವಕೀಲರ ಸಂಘದ ವತಿಯಿಂದ ತಹಸೀಲ್ದಾರ್ ಭರತ್ ರವರಿಗೆ ಮನವಿ ಪತ್ರ ಸಲಿಸಲಾಯಿತು.