ತುರ್ತು ಪರಿಸ್ಥಿತಿ ವಿರುದ್ಧ ಹೋರಾಟಗಾರರಿಗೆ ಪಿಂಚಣಿ ಸೌಲಭ್ಯ ಜಾರಿಗೆ ಕೇಂದ್ರಕ್ಕೆ ಮೊರೆ

| Published : Jun 26 2024, 12:31 AM IST

ತುರ್ತು ಪರಿಸ್ಥಿತಿ ವಿರುದ್ಧ ಹೋರಾಟಗಾರರಿಗೆ ಪಿಂಚಣಿ ಸೌಲಭ್ಯ ಜಾರಿಗೆ ಕೇಂದ್ರಕ್ಕೆ ಮೊರೆ
Share this Article
  • FB
  • TW
  • Linkdin
  • Email

ಸಾರಾಂಶ

ಅಖಿಲ ಭಾರತ ಮಟ್ಟದ ಹೋರಾಟ ಸಮಿತಿ ಪ್ರಯತ್ನದಿಂದ ಉತ್ತರದ ರಾಜ್ಯಗಳಲ್ಲಿ ಮಾಸಿಕ 10 ಸಾವಿರ ರು.ನಿಂದ 25 ಸಾವಿರ ರು. ವರೆಗೆ ತುರ್ತು ಪರಿಸ್ಥಿತಿ ಹೋರಾಟಗಾರರಿಗೆ ಪಿಂಚಣಿ ಮೊತ್ತ ಪಾವತಿಯಾಗುತ್ತಿದೆ

ಆತ್ಮಭೂಷಣ್‌

ಕನ್ನಡಪ್ರಭ ವಾರ್ತೆ ಮಂಗಳೂರು

ದೇಶದ ಎರಡನೇ ಸ್ವಾತಂತ್ರ್ಯ ಹೋರಾಟ ಎಂದೇ ಕರೆಸಿಕೊಂಡ 1975ರ ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟದಲ್ಲಿ ಭಾಗಿಯಾದ ಹೋರಾಟಗಾರರಿಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಪಿಂಚಣಿ ಸೌಲಭ್ಯ ಜಾರಿಗೊಂಡಿರಲಿಲ್ಲ. ಈಗ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿದೆ. ತುರ್ತು ಪರಿಸ್ಥಿತಿ ಹೋರಾಟ ನಡೆದು ಮುಂದಿನ ವರ್ಷಕ್ಕೆ 50 ವರ್ಷ. ಈ ಹಿನ್ನೆಲೆಯಲ್ಲಿ ಇನ್ನಾದರೂ ತುರ್ತು ಪರಿಸ್ಥಿತಿ ಹೋರಾಟಗಾರರಿಗೆ ಪಿಂಚಣಿ ಸೌಲಭ್ಯ ಜಾರಿಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ಲೋಕತಂತ್ರ ಸೇನಾನಿ ಸಮಿತಿ ಕೇಂದ್ರ ಸರ್ಕಾರದ ಬಾಗಿಲು ತಟ್ಟಿದೆ. ಹೋರಾಟಗಾರ, ಬಿಹಾರದ ಹಿರಿಯ ಜೆಡಿಯು ಲೋಕಸಭಾ ಸದಸ್ಯ ಕೆ.ಸಿ.ತ್ಯಾಗಿ ಅವರ ಮೂಲಕ ಇದೇ ಲೋಕಸಭಾ ಅಧಿವೇಶನದಲ್ಲಿ ಕೇಂದ್ರ ಸರ್ಕಾರವನ್ನು ಆಗ್ರಹಿಸಲು ಸಿದ್ಧತೆ ನಡೆಸಲಾಗಿದೆ. ಪ್ರಸಕ್ತ ದೇಶದ ಉತ್ತರ ರಾಜ್ಯಗಳಲ್ಲಿ, ಅದರಲ್ಲೂ ಬಿಜೆಪಿ ಸರ್ಕಾರ ಇರುವಲ್ಲಿ ತುರ್ತು ಪರಿಸ್ಥಿತಿ ಹೋರಾಟಗಾರರಿಗೆ ಪಿಂಚಣಿ ಸೌಲಭ್ಯ ನೀಡಲಾಗುತ್ತಿದೆ. ಆದರೆ ದಕ್ಷಿಣ ರಾಜ್ಯಗಳಲ್ಲಿ ಇದು ಜಾರಿಯಾಗಿಲ್ಲ. ಅಲ್ಲದೆ ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವೂ ಇಲ್ಲ. ಹೀಗಾಗಿ ಕೇಂದ್ರ ಸರ್ಕಾರವೇ ಮುತುವರ್ಜಿ ವಹಿಸಿಕೊಂಡು ಇಡೀ ದೇಶಕ್ಕೆ ಅನ್ವಯವಾಗುವಂತೆ ಈ ಪಿಂಚಣಿ ಸೌಲಭ್ಯ ಜಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಸಂಸದ ತ್ಯಾಗಿ ಅವರಿಗೆ ಕಳುಹಿಸಿದ ಮನವಿಯಲ್ಲಿ ಒತ್ತಾಯಿಸಿದೆ.

ಸಿಎಂ ಸಿದ್ದು ಕೂಡ ಹೋರಾಟದಲ್ಲಿದ್ದರು!:

2021ರಲ್ಲಿ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಲೋಕತಂತ್ರ ಸೇನಾನಿ ಸಂಘ ಕರ್ನಾಟಕ ವತಿಯಿಂದ ಪಿಂಚಣಿಗಾಗಿ ಮನವಿ ಸಲ್ಲಿಸಲಾಗಿತ್ತು. ಆಗ ಯಡಿಯೂರಪ್ಪ ಅವರು ಪ್ರತಿ ತಿಂಗಳು ತಲಾ 10 ಸಾವಿರ ರು.ನಂತೆ ಪಿಂಚಣಿ ನೀಡಲು ಸಮ್ಮತಿಸಿದ್ದರು. ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಅವಧಿಯಲ್ಲಿ ಪ್ರಸ್ತಾಪ ಆದೇಶವಾಗದೆ ಮೂಲೆಗುಂಪಾಯಿತು. ಈಗ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದೆ. ಸಿಎಂ ಸಿದ್ದರಾಮಯ್ಯ ಜನತಾ ಪರಿವಾರದಲ್ಲಿದ್ದಾಗ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ನಡೆಸಿ ಜೈಲು ಸೇರಿದ್ದರು. ಅವರಲ್ಲದೆ, ಸಿ.ಎಂ.ಇಬ್ರಾಹಿಂ, ಪಿ.ಜಿ.ಆರ್‌. ಸಿಂಧ್ಯಾ ಮುಂತಾದವರು ಹೋರಾಟದಲ್ಲಿ ಭಾಗಿಯಾಗಿದ್ದರು ಎನ್ನುವುದನ್ನು ಸೇನಾನಿ ಸಂಘ ನೆನಪಿಸಿದೆ. ಅಂದು ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ನಡೆಸಿದವರು ಈಗ ಕಾಂಗ್ರೆಸ್‌ ನೇತೃತ್ವದ ಸರ್ಕಾರದಲ್ಲಿ ಇರುವುದರಿಂದ ಈ ಪಿಂಚಣಿ ಯೋಜನೆ ಜಾರಿಗೊಳಿಸುತ್ತಾರೆ ಎಂಬ ಖಾತರಿ ಇಲ್ಲ. ಹಾಗಾಗಿ ಕೇಂದ್ರ ಸರ್ಕಾರದ ಮೊರೆ ಹೋಗುತ್ತಿರುವುದಾಗಿ ಸೇನಾನಿ ಸಂಘ ತಿಳಿಸಿದೆ. ಯಾಕಾಗಿ ಪಿಂಚಣಿ?:

ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ನಡೆಸಿದವರು ಸ್ವಾತಂತ್ರ್ಯ ಹೋರಾಟಗಾರರಲ್ಲ. ಆದರೆ ಸ್ವಾತಂತ್ರ್ಯ ಹೋರಾಟಕ್ಕೆ ಸಮಾನಾಗಿ ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿ ಲಾಠಿ ಏಟು ಅನುಭವಿಸಿದ್ದಾರೆ. ಎಲ್ಲರಂತೆ ಸ್ವಂತ ಬದುಕು ಕಟ್ಟಲು ಅಸಮರ್ಥರಾದವರು ಅನೇಕ ಮಂದಿ. ಬಹುತೇಕ ಮಂದಿ ಈಗ ಜೀವನದ ಸಂಧ್ಯಾ ಕಾಲದಲ್ಲಿ ಇದ್ದಾರೆ. ಅಂತಹವರಿಗೆ ಈಗಲಾದರೂ ಪಿಂಚಣಿ ಸೌಲಭ್ಯ ನೀಡುವ ಮೂಲಕ ತುಸು ನೆಮ್ಮದಿಯ ಬದುಕಿಗೆ ಅವಕಾಶ ಕಲ್ಪಿಸಬೇಕು. ಅವರಿಗೆ ಉಚಿತ ಬಸ್‌ ಪಾಸ್‌, ಮೃತಪಟ್ಟಾಗ ಸರ್ಕಾರಿ ಗೌರವ ನೀಡಬೇಕು ಎನ್ನುವುದು ಹೋರಾಟ ಸಮಿತಿಯ ಬೇಡಿಕೆ.

ಅಖಿಲ ಭಾರತ ಮಟ್ಟದ ಹೋರಾಟ ಸಮಿತಿ ಪ್ರಯತ್ನದಿಂದ ಉತ್ತರದ ರಾಜ್ಯಗಳಲ್ಲಿ ಮಾಸಿಕ 10 ಸಾವಿರ ರು.ನಿಂದ 25 ಸಾವಿರ ರು. ವರೆಗೆ ತುರ್ತು ಪರಿಸ್ಥಿತಿ ಹೋರಾಟಗಾರರಿಗೆ ಪಿಂಚಣಿ ಮೊತ್ತ ಪಾವತಿಯಾಗುತ್ತಿದೆ. ದೇಶದಲ್ಲಿ 1.20 ಲಕ್ಷ ಮಂದಿ, ಕರ್ನಾಟಕದಲ್ಲಿ 4,500 ಮಂದಿ, ದ.ಕ.ಜಿಲ್ಲೆಯಲ್ಲಿ 206 ಮಂದಿ ಪಿಂಚಣಿಗೆ ಕಾಯುತ್ತಿದ್ದಾರೆ ಎನ್ನುತ್ತಾರೆ ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷ ನಾರಾಯಣ ಗಟ್ಟಿ ಪಾಂಡೇಶ್ವರ.

ತುರ್ತು ಪರಿಸ್ಥಿತಿಯಲ್ಲಿ ಹೋರಾಟ ನಡೆಸಿ ಎಲ್ಲವನ್ನೂ ಕಳೆದುಕೊಂಡವರಿಗೆ ನಿಜವಾಗಿ ಪಿಂಚಣಿ ಸೌಲಭ್ಯ ನೀಡಬೇಕು. ಸರ್ಕಾರ ಇದನ್ನು ಜಾರಿಗೊಳಿಸಿದರೆ, ಅವಶ್ಯಕ ಇರುವವರು ಪಡೆದುಕೊಳ್ಳುತ್ತಾರೆ. ಹಿಂದಿನ ಸಿಎಂ ಯಡಿಯೂರಪ್ಪ ಪಿಂಚಣಿಗೆ ಸಮ್ಮತಿದರೂ ಅದು ಕೊನೆಗೂ ಜಾರಿಯಾಗಲೇ ಇಲ್ಲ. ಹಾಗಾಗಿ ಈಗ ಕೇಂದ್ರ ಸರ್ಕಾರ ಮೂಲಕ ಜಾರಿಗೆ ಸಿದ್ಧತೆ ನಡೆಸುತ್ತಿದ್ದೇವೆ.

-ಮಂಜುನಾಥ ಸ್ವಾಮಿ, ಅಧ್ಯಕ್ಷರು, ಲೋಕತಂತ್ರ ಸೇನಾನಿ ಸಮಿತಿ, ಕರ್ನಾಟಕ