ಸೇವಂತಿಗೆಗೆ ಬಂಪರ್‌, ಗುಲಾಬಿ ದರ ಕುಸಿತ

| Published : Jun 26 2024, 12:31 AM IST

ಸಾರಾಂಶ

ತೆಲಾಂಗಣದಲ್ಲಿ ಮತ್ತು ತಮಿಳುನಾಡಿನಲ್ಲಿ ಆಷಾಡ ಮಾಸ ಆಚರಿಸುವುದಿಲ್ಲ. ಹೀಗಾಗಿ ಅಲ್ಲಿ ಮದುವೆ-ಮುಂಜಿಗಳು,ಸೇರಿದಂತೆ ಎಲ್ಲ ಶುಭ ಕಾರ್ಯಗಳು ನಡೆಯುತ್ತವೆ. ತೆಲಾಂಗಣ ಮತ್ತು ತಮಿಳುನಾಡಿನಿಂದ ವರ್ತಕರು ಹೂ ಕೊಳ್ಳಲು ಬಂದರೆ ರೈತರಿಗೆ ಲಾಭ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜಿಲ್ಲೆಯಲ್ಲಿ ಬರದ ನಡುವೆಯೂ ರೈತರು ಹಗಲು ರಾತ್ರಿ ದುಡಿದು ಪಾತಾಳದಿಂದ ಅಂತರ್ಜಲ ಬಗೆದು ಹನಿ ಹನಿ ನೀರುಣಿಸಿ ಬಂಗಾರದಂತಹ ಹೂಗಳನ್ನ ಬೆಳೆದಿದ್ದಾರೆ. ಆದರೆ ಸೇವಂತಿಗೆ ಹೊರತುಪಡಿಸಿ ಉಳಿದ ಬಗೆಬಗೆಯ ಹೂವುಗಳು ಈಗ ಬೆಳೆಗಾರರ ಜೇಬು ಖಾಲಿ ಮಾಡುತ್ತಿವೆ.

ಗುಲಾಭಿ, ಚೆಂಡು ಹೂ ದರ ಕುಸಿತ

ಸೇವಂತಿಗೆ ಬೆಳೆಗಾರರಿಗೆ ಸಿಹಿಯಾದರೆ, ಗುಲಾಭಿ ಮತ್ತು ಚೆಂಡು ಹೂ ಬೆಳೆಗಾರರಿಗೆ ಕಹಿಯಾಗಿದೆ. ಹೂವಿನ ಮಾರುಕಟ್ಟೆಯಲ್ಲಿ ಸೇವಂತಿಗೆ ದರ ಕೆಜಿಗೆ ರೂ 200 ರಿಂದ 300 ರೂಗಳಿಗೆ ಬಿಕರಿಯಾದರೆ, ಗುಲಾಭಿ ಕೆಜಿಗೆ 20 ರಿಂದ 50 ರು.ಗಳಿಗೆ, ಚೆಂಡು ಹೂ ಕೆಜಿಗೆ 10 ರಿಂದ 30 ರು.ಗಳಿಗೆ ಮಾರಾಟವಾಗುತ್ತಿವೆ. ಗುಲಾಭಿ, ಚೆಂಡು ಹೂವಿನ ಬೆಲೆಯಲ್ಲಿ ಭಾರೀ ಕುಸಿತ ಕಂಡಿದ್ದು, ಹೂ ಮಾರಾಟ ಮಾಡಲು ಮಾರುಕಟ್ಟೆಗೆ ರೈತರು ಹೂ ತಂದರೆ ಖರೀದಿ ಮಾಡೋವರಿಲ್ಲದಂತಾಗಿದೆ.

ತಿಂಗಳ ಹಿಂದೆ ಗುಲಾಭಿ ದರ ಕೆಜಿಗೆ ರೂ 120 ರಿಂದ 250 ರೂಗಳಿಗೆ ಕೆಜಿ ಚೆಂಡು ಹೂ 40 ರಿಂದ 60 ರೂಪಾಯಿಗೆ ಮಾರಾಟವಾಗಿತ್ತು. ಆದರೆ ಈಗ ಚೆಂಡು ಹೂ ಖರೀದಿ ಮಾಡುವವರೇ ಇಲ್ಲ. 1 ಕೆಜಿ ಚೆಂಡು ಹೂ 10 ರೂಪಾಯಿ 20ರೂಪಾಯಿ ಹೀಗಾಗಿ ರೈತರು ಮಾರಾಟಕ್ಕೆ ತಂದಿದ್ದ ಹೂವನ್ನ ಕೇಳಿದ ಬೆಲೆಗೆ ಮಾರಾಟ ಮಾಡಿ ಹೋಗುತ್ತಿದ್ದಾರೆ. ತಿಂಗಳ ಹಿಂದೆ ಸೇವಂತಿಗೆ ಹೂ 150 ರಿಂದ 200 ರೂಪಾಯಿಗೂ ಮಾರಾಟವಾಗಿದೆ. ಆದ್ರೆ ಈಗ 200 ರಿಂದ 300 ರೂಗಳಿಗೆ ಮಾರಾಟವಾಗುತ್ತಿದೆ. ಮಳೆಯಿಂದಾಗಿ ಉತ್ತಮ ಬೆಳೆ

ಮಳೆ ಬರುವ ಮುಂಚೆ ಗುಲಾಬಿ ಇಳುವರಿ ಕಡಿಮೆಯಿತ್ತು. ಮಳೆ ಬಂದ ನಂತರ ಇಳುವರಿ ಹೆಚ್ಚಾಗಿರುವುದೇ ಬೆಲೆ ಕುಸಿತವಾಗಲು ಕಾರಣ, ಇನ್ನೂ ಮಳೆಯಿಂದ ನೆನೆದು ಒದ್ದೆಯಾದ ಹೂಗಳನ್ನ ಖರೀದಿ ಮಾಡುವವರೇ ಇಲ್ಲ. ಹೀಗಾಗಿ ಕೊಳ್ಳುವವರು ಕೇಳುವ ರೇಟಿಗೆ ನಾವು ನೀಡಿ ಬಂದಷ್ಟು ದುಡ್ಡನ್ನು ಎಣಿಸಿ ಕೊಂಡು ಬರುತ್ತೇವೆ ಎನ್ನುತ್ತಾರೆ ಗುಲಾಭಿ ಬೆಳೆಗಾರ ಕೆಂಪಣ್ಣ.

ಮುಂದಿನ ವಾರ ಆಷಾಡ ಮಾಸ ಬರುವ ಕಾರಣ ಕಾರಣ ಕರ್ನಾಟಕ, ಆಂಧ್ರಪ್ರದೇಶ ಗಳಲ್ಲಿ ಶುಭ ಕಾರ್ಯಗಳು ನಡೆಯುವುದಿಲ್ಲ. ತೆಲಾಂಗಣದಲ್ಲಿ ಮತ್ತು ತಮಿಳುನಾಡಿನಲ್ಲಿ ಆಷಾಡ ಮಾಸ ಆಚರಿಸುವುದಿಲ್ಲ. ಹೀಗಾಗಿ ಅಲ್ಲಿ ಮದುವೆ-ಮುಂಜಿಗಳು,ಸೇರಿದಂತೆ ಎಲ್ಲ ಶುಭ ಕಾರ್ಯಗಳು ನಡೆಯುತ್ತವೆ. ತೆಲಾಂಗಣ ಮತ್ತು ತಮಿಳುನಾಡಿನಿಂದ ವರ್ತಕರು ಹೂ ಕೊಳ್ಳಲು ಬಂದರೆ ಪರವಾಗಿಲ್ಲ. ಇಲ್ಲದಿದ್ದಲ್ಲಿ ಮತ್ತೆ ಹೂಗಳನ್ನು ಕೇಳುವವರು ಇಲ್ಲದಂತಾಗುತ್ತದೆ ಎಂಬುದು ಬೆಳೆಗಾರರ ಆತಂಕ.