ಎಪಿಎಂಸಿಯಲ್ಲಿ ರೈತರಿಗೆ ಅನ್ಯಾಯ ಸರಿಪಡಿಸುವಂತೆ ಸಚಿವ ಶಿವಾನಂದ ಪಾಟೀಲ್‌ಗೆ ಮನವಿ

| Published : Jan 05 2024, 01:45 AM IST

ಎಪಿಎಂಸಿಯಲ್ಲಿ ರೈತರಿಗೆ ಅನ್ಯಾಯ ಸರಿಪಡಿಸುವಂತೆ ಸಚಿವ ಶಿವಾನಂದ ಪಾಟೀಲ್‌ಗೆ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಯಚೂರು ಎಪಿಎಂಸಿಯಲ್ಲಿನ ವಿವಿಧ ಸಮಸ್ಯೆ ಬಗೆಹರಿಸುವಂತೆ ರಾಜ್ಯ ರೈತ ಸಂಘ, ಹಸಿರು ಸೇನೆ ಜಿಲ್ಲಾ ಹಾಗೂ ತಾಲೂಕು ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸಚಿವರಿಗೆ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಇಲ್ಲಿನ ಎಪಿಎಂಸಿಯಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯಗಳನ್ನು ತಪ್ಪಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಹಾಗೂ ತಾಲೂಕು ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಕೃಷಿ ಮಾರುಕಟ್ಟೆ ಖಾತೆ ಸಚಿವ ಶಿವಾನಂದ ಪಾಟೀಲ್‌ಗೆ ಮನವಿ ಸಲ್ಲಿಸಿದರು.

ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಈ ಬಗ್ಗೆ ಸಮಿತಿಯ ಅಧ್ಯಕ್ಷರಿಗೆ ಹಾಗೂ ಕಾರ್ಯದರ್ಶಿಗಳಿಗೆ ಅನೇಕ ಬಾರಿ ಮನವಿ ಪತ್ರಗಳನ್ನು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.

ರೈತರ ಹತ್ತಿಯನ್ನು ತೂಕ ಮಾಡಲು ವೇಬ್ರಿಡ್ಜ್‌ನ್ನು ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ಸ್ಥಾಪನೆ ಮಾಡಬೇಕು. ರೈತರು ಹತ್ತಿಯನ್ನು ಮಾರಾಟಕ್ಕೆ ಎಪಿಎಂಸಿಗೆ ತಂದಾಗ ದರ ನಿಗದಿಪಡಿಸಿ ನಂತರ ಹತ್ತಿ ಮಿಲ್‌ಗೆ ಹೋದಾಗ ಮಿಲ್‌ನ ಮಾಲೀಕರು 300ರಿಂದ 400 ರುಪಾಯಿಗಳವರೆಗೆ ದರ ಕಡಿಮೆ ಮಾಡುತ್ತಾರೆ. ಮಿಲ್ ಮಾಲೀಕರು ನಿಗದಿಪಡಿಸಿದ ದರವನ್ನು ಒಪ್ಪದಿದ್ದಾಗ ರೈತರಿಗೆ ಹಿಂದೆ ತೆಗೆದುಕೊಂಡು ಹೋಗಲು ಹೇಳುತ್ತಾರೆ. ಇಂಥ ವ್ಯವಹಾರಗಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ಎಪಿಎಂಸಿಯಲ್ಲಿ ಟೆಂಡರ್‌ಗೆ ಇಟ್ಟಿರುವ ತೊಗರಿ, ಕಡ್ಲೆ ಹಾಗೂ ಸೂರ್ಯಕಾಂತಿ ಮಾದರಿ (ಶ್ಯಾಂಪಲ್) ವೆಂದು ಪ್ರತಿ ರಾಶಿಯಿಂದ 1ರಿಂದ 2 ಕೆಜಿ ತೆಗೆದುಕೊಂಡು ಹೋಗುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಸೂಟ್ ಒಂದು ಕೆಜಿ ಕಡಿತಗೊಳಿಸಬೇಕು, ಈರುಳ್ಳಿಯ ಚೀಲ 200 ಗ್ರಾಂ ತೂಕವಿದ್ದರೂ ವರ್ತಕರು 50 ಕೆಜಿಗೆ ಒಂದು ಕೆಜಿ ಸೂಟ್ ತೆಗೆಯುತ್ತಾರೆ. ಅದನ್ನು 200 ಗ್ರಾಂ ಸೂಟ್ ತೆಗೆಯುವಂತೆ ಮಾಡುವುದು ಸೇರಿದಂತೆ ಇನ್ನೂ ಅನೇಕ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.

ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ, ತಾಲೂಕು ಅಧ್ಯಕ್ಷ ರಮೇಶ ಗಾಣಧಾಳ, ಕಾರ್ಯಾಧ್ಯಕ್ಷ ಅಬ್ದುಲ್ ಮಜೀದ್ ಬಿಚ್ಚಾಲಿ,ದೇವಪ್ಪ ಜೇಗರಕಲ್, ಅಕ್ಕಮ್ಮ ಗಿಲ್ಲೆಸುಗೂರು ಹಾಗೂ ಮತ್ತಿತರರಿದ್ದರು.