ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸಪೇಟೆ
ರೈತ, ಕೃಷಿ ಕೂಲಿಕಾರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸೋಮವಾರ ಶಾಸಕ ಎಚ್.ಆರ್. ಗವಿಯಪ್ಪ ಅವರಿಗೆ ಪ್ರಾಂತ ರೈತ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.ಬಹುವರ್ಷಗಳ ಬೇಡಿಕೆಯಾಗಿರುವ ರಾಜಾಪುರ ಗ್ರಾಮದ ಏತ ನೀರಾವರಿ ಯೋಜನೆ ತ್ವರಿತವಾಗಿ ಚಾಲನೆ ಕೊಡಬೇಕು. ಹೊಸಪೇಟೆಯ ಐದು ಲಕ್ಷ ಟನ್ ಕಬ್ಬು ಬೆಳೆಯುವ ರೈತರಿಗೆ ಕೊಟ್ಟ ಮಾತಿನಂತೆ ಸರ್ಕಾರ ಸಕ್ಕರೆ ಕಾರ್ಖಾನೆಯ ಶಂಕುಸ್ಥಾಪನೆಯ ಬೇಡಿಕೆಯ ದಿನಾಂಕವನ್ನು ಈ ಕೂಡಲೇ ನಿಗದಿಪಡಿಸಬೇಕು. ಕಲ್ಲಹಳ್ಳಿ, ರಾಜಾಪುರ, ಜಂಬುನಾಥನಹಳ್ಳಿ, ಸಂಕ್ಲಾಪುರ, ಇಂಗಳಗಿ, ಗಾದಿಗನೂರು, ಬುಕ್ಕಸಾಗರ, ಕಣವಿ ತಿಮ್ಮಲಾಪುರ, ಗರಗ, ನಾಗಲಾಪುರ, ಮತ್ತು ಇತರಡೆ ಗ್ರಾಮಗಳಿಂದ ಸಲ್ಲಿಸಿರುವ ರೈತರ ಸಾಗುವಳಿ ಅರ್ಜಿಗಳಿಗೆ ಪಟ್ಟಾ ವಿತರಿಸಲು ತಹಸೀಲ್ದಾರ ಜೊತೆ ಸಭೆ ನಡೆಸಬೇಕು. 1996ರಿಂದ ಇಲ್ಲಿಯವರೆಗೆ ಭೂಸ್ವಾಧೀನ ಕಾಯ್ದೆ ಮೂಲಕ ಎಷ್ಟು ಪ್ರಕರಣಗಳಲ್ಲಿ, ಎಷ್ಟು ಎಕರೆ ಕೃಷಿ ಭೂಮಿಯನ್ನು ಭೂಸ್ವಾಧೀನಕ್ಕೆ ಒಳಪಡಿಸಲಾಗಿದೆ. ಎಷ್ಟು ಎಕರೆ ಜಮೀನಿನಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಿವೆ; ಕೈಗಾರಿಕೆ ಸ್ಥಾಪನೆ ಆಗದೇ ಇರುವ ಜಮೀನು ರೈತರಿಗೆ ಹಸ್ತಾಂತರ ಮಾಡಬೇಕು ಎಂದು ಒತ್ತಾಯಿಸಿದರು.
ಬಗರ್ ಹುಕ್ಕುಂ ಸಾಗುವಳಿ ಮಂಜೂರಾಗಿರುವ ಹಾಗೂ ಪಹಣಿಗಳಲ್ಲಿ ರೈತರ ಸ್ವಾಧೀನವನ್ನು ದೃಢಪಡಿಸುವ ಕಂದಾಯ ದಾಖಲಾತಿಗಳಿದ್ದರೂ, ಪಹಣಿಗಳಲ್ಲಿ ಅರಣ್ಯ ಎಂದು ಇಂಡೀಕರಿಸಿ ಅರಣ್ಯ ಇಲಾಖೆಯನ್ನು ಮುಂದೆ ಬಿಟ್ಟು ರಾಜ್ಯಾದ್ಯಂತ ಒಕ್ಕಲೆಬ್ಬಿಸಿರುವ ಬಗರ್‌ಹುಕುಂ ಸಾಗುವಳಿದಾರರಿಗೆ, ಅವರ ಉಳುಮೆ ಸ್ವಾಧೀನವನ್ನು ಮರಳಿ ವಾಪಸ್ ನೀಡಬೇಕು. ಈ ರೀತಿ ಅನ್ಯಾಯಕ್ಕೆ ಕೂಡಲೇ ತಡೆ ನೀಡಬೇಕು ಎಂದು ಒತ್ತಾಯಿಸಿದರು.ತುಂಗಭದ್ರಾ ಎಡದಂಡೆ ಕಾಲುವೆಗೆ ಏಪ್ರಿಲ್ 20ರ ತನಕ ನೀರು ಹರಿಸಬೇಕು. ಎಡದಂಡೆ ಕಾಲುವೆಯಲ್ಲಿ ಬರುವ 46ನೇ ವಿತರಣಾ ಕಾಲುವೆ ದುರಸ್ತಿ ಕಾಮಗಾರಿ ಕೈಗೊಂಡು ನೀರಿನ ಪೋಲು ಮತ್ತು ದುರ್ಬಳಕೆ ತಡೆಗಟ್ಟಬೇಕು. ಗಂಗಾವತಿ ತಾಲೂಕಿನಲ್ಲಿ ಹಿರೇಬೆಣಕಲ್ ವ್ಯಾಪ್ತಿಯಲ್ಲಿ ಅಣ್ಣುಸ್ಥಾವರ ಸ್ಥಾಪಿಸುವ ಸಂಬಂಧ ಸಮೀಕ್ಷೆ ಕೈಗೊಂಡಿರುವ ಸತ್ಯಾಸತ್ಯತೆಯನ್ನು ಸರ್ಕಾರ ಸಾರ್ವಜನಿಕರಿಗೆ ಯಾವುದೇ ಮುಚ್ಚುಮರೆಯಿಲ್ಲದೆ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಎನ್. ಯಲ್ಲಾಲಿಂಗ, ಜಿ.ಕರಿಹನುಮಂತ, ನಿಜಲಿಂಗಪ್ಪ, ಅಂಜಿನಿ, ಬಾಣದ ರಾಮಣ್ಣ, ಕೆ.ತಿರುಮಲ, ದುರುಗೇಶ,ನಿಂಗಪ್ಪ ರಾಜಾಪುರ ಮತ್ತಿತರರಿದ್ದರು.