ಸೀಬರ್ಡ್‌ ನೌಕಾನೆಲೆಯ ಉದ್ಯೋಗದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಲು ಸಂಸದ ಕಾಗೇರಿಗೆ ಮನವಿ

| Published : Oct 09 2024, 01:42 AM IST

ಸೀಬರ್ಡ್‌ ನೌಕಾನೆಲೆಯ ಉದ್ಯೋಗದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಲು ಸಂಸದ ಕಾಗೇರಿಗೆ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾರವಾರದ ನೌಕಾನೆಲೆಯಲ್ಲಿ ಕೆಲಸ ಮಾಡಲು ದೂರದ ಮುಂಬೈನಲ್ಲಿ ಸಂದರ್ಶನ ನಡೆಯುತ್ತದೆ. ಇಲ್ಲಿಯೇ ನಡೆಯುವಂತಾಗಬೇಕು.

ಕಾರವಾರ: ಇಲ್ಲಿನ ಜಿಪಂ ಸಭಾಂಗಣದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕೊಂಕಣ ರೈಲ್ವೆ, ಸೀಬರ್ಡ್ ನೌಕಾನೆಯ ಸಂತ್ರಸ್ತರ ಅಹವಾಲು ಸಭೆ ಮಂಗಳವಾರ ನಡೆಸಿದ್ದು, ಸ್ಥಳೀಯರಿಗೆ ಉದ್ಯೋಗ ಸಿಗದಿರುವುದು, ಪರಿಹಾರ ಬರದಿರುವುದರ ಬಗ್ಗೆಯೇ ಹೆಚ್ಚಿನ ದೂರುಗಳು ಬಂದವು.ನ್ಯಾಯವಾದಿ ನಾಗರಾಜ ನಾಯಕ ಮಾತನಾಡಿ, ೨೮ಎ ಪ್ರಕರಣದ ಬಗ್ಗೆ ಯಾರೂ ಕಾಳಜಿ ವಹಿಸುತ್ತಿಲ್ಲ. ನೌಕಾನೆಲೆಯವರು ಹಾಗೂ ಸ್ಥಳೀಯರ ನಡುವೆ ಎಂಒಯು ಆಗುವಾಗ ಬಾಯಿಮಾತಿನಲ್ಲಿ ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ಎಂದಿದ್ದರು. ಎಷ್ಟು ಪ್ರಮಾಣದಲ್ಲಿ ನೀಡಲಾಗುತ್ತದೆ ಎನ್ನುವ ಬಗ್ಗೆ ಲಿಖಿತವಾಗಿ ಎಲ್ಲಿಯೂ ಹೇಳಿಲ್ಲ. ಈಗ ಕೆಲವರು ನೌಕಾನೆಲೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಆದರೆ ಬಹುತೇಕರು ಸಂತ್ರಸ್ತರು ಎಂದು ಆಯ್ಕೆಯಾಗಿಲ್ಲ. ನೌಕಾನೆಲೆ ಒಳಗೆ ಕಸ ಗುಡಿಸಲು ಕೂಡಾ ಸ್ಥಳೀಯರನ್ನು ಆಯ್ಕೆ ಮಾಡದಷ್ಟು ಅಲ್ಲಿನ ಅಧಿಕಾರಿಗಳು ರಾಜಕೀಯ ಮಾಡುತ್ತಿದ್ದಾರೆ ಎಂದು ದೂರಿದರು.ಕಾರವಾರದ ನೌಕಾನೆಲೆಯಲ್ಲಿ ಕೆಲಸ ಮಾಡಲು ದೂರದ ಮುಂಬೈನಲ್ಲಿ ಸಂದರ್ಶನ ನಡೆಯುತ್ತದೆ. ಇಲ್ಲಿಯೇ ನಡೆಯುವಂತಾಗಬೇಕು. ಸ್ಥಳೀಯ ಮೀನುಗಾರರು ಅಪ್ಪಿತಪ್ಪಿ ತಮ್ಮ ದೋಣಿಗಳನ್ನು ನೌಕಾನೆಲೆ ಗಡಿಯೊಳಗೆ ತೆಗೆದುಕೊಂಡು ಹೋದರೆ ಮೀನುಬಲೆ ಹರಿದು, ಅವರ ಹಲ್ಲೆ ಮಾಡುತ್ತಾರೆ ಎಂದರು. ಅಂಕೋಲಾ- ಕಾರವಾರ ನೌಕಾನೆಲೆ ನಿರಾಶ್ರಿತರ ಒಕ್ಕೂಟದ ಸುಭಾಸ ನಾಯ್ಕ ಮಾತನಾಡಿ, ಪರಿಹಾರಕ್ಕೆ ಸಂಬಂಧಿಸಿ ಡಿಸಿ ಕೋರ್ಟ್‌ನಲ್ಲಿ ಕೆಲವಷ್ಟು ಪ್ರಕರಣ ಬಾಕಿಯಿದೆ. ಕೆಲವು ಆದೇಶವಾಗಿದ್ದು, ಇದರಲ್ಲಿ ಕೆಲವರಿಗೆ ಪೂರ್ಣ ಪ್ರಮಾಣದಲ್ಲಿ ಪರಿಹಾರ ನೀಡಲಾಗಿದೆ. ಕೆಲವರಿಗೆ ಅರ್ಧ ಪರಿಹಾರ ನಿಡಲಾಗಿದೆ ಎಂದರು.ಸ್ಥಳೀಯರಾದ ಸುಭಾಸ ಗುನಗಿ ಮಾತನಾಡಿ, ಕಾರವಾರದ ಕಾಲೇಜಿನಲ್ಲಿ ಐಟಿಐ ಆದ ಸಂತ್ರಸ್ತರಿಗೆ ಕೊಂಕಣ ರೈಲ್ವೆಯಲ್ಲಿ ಉದ್ಯೋಗ ನೀಡುವ ಒಪ್ಪಂದವಾಗಿತ್ತು. ಆದರೆ ಈಗ ಅದು ಬಂದಾಗಿದೆ. ಇದರಿಂದ ಸ್ಥಳೀಯರಿಗೆ ಅನ್ಯಾಯವಾಗುತ್ತಿದೆ. ಕೊಂಕಣ ರೈಲ್ವೆ ಸಿಎಸ್‌ಆರ್ ಹಣವನ್ನು ಶಿರವಾಡ, ಕಡವಾಡ ಗ್ರಾಪಂಗೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸಕ್ಕೆ ನೀಡಬೇಕು ಎಂದು ಆಗ್ರಹಿಸಿದರು. ಅಸ್ನೋಟಿ ಗ್ರಾಪಂ ಅಧ್ಯಕ್ಷ ಸಂಜಯ ಸಾಳುಂಕೆ, ನೆಲ್ಲೂರು- ಕಂಚಿನಬೈಲ್ ಹಾಗೂ ಸಿರುಗುಂಜಿ ಗ್ರಾಮಸ್ಥರು ತಮ್ಮ ಅಹವಾಲನ್ನು ಸಂಸದರಿಗೆ ನೀಡಿದರು.ಬಳಿಕ ಮಾತನಾಡಿದ ವಿಶ್ವೇಶ್ವರ ಹೆಗಡೆ, ಕೊಂಕಣ ರೈಲ್ವೆ ಮತ್ತು ನೌಕಾನೆಲೆ ಯೋಜನೆಗೆ ಭೂ ಸ್ವಾಧಿನದ ಬಳಿಕ ಪರಿಹಾರ ಸಿಗದೇ ಇರುವ ನಿರಾಶ್ರಿತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಿ ನಿರಾಶ್ರಿತರಿಗೆ ನ್ಯಾಯಬದ್ಧ ಪರಿಹಾರ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಜಿಲ್ಲೆಯ ಜನತೆ ಮಹತ್ವಾಕಾಂಕ್ಷೆ ಯೋಜನೆಗಳಿಗೆ ತಮ್ಮ ಜಮೀನುಗಳನ್ನು ನೀಡುವ ಮೂಲಕ ದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಆದರೆ ನಿರಾಶ್ರಿತರಾದ ಜನತೆಗೆ ಸೂಕ್ತ ಪರಿಹಾರ ಸಿಗದೇ ಸಮಸ್ಯೆ ಅನುಭವಿಸುತ್ತಿರುವುದರಿಂದ ಅವರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಜನರ ಕುಂದುಕೊರತೆಗಳನ್ನು ಬಗೆಹರಿಸಲು ಪ್ರಯತ್ನಿಸಬೇಕಾಗಿರುವುದು ಜನಪ್ರತಿನಿಧಿಗಳ ಜವಾಬ್ದಾರಿಯಾಗಿದೆ. ಆ ನಿಟ್ಟಿನಲ್ಲಿ ಜನರ ಕುಂದುಕೊರತೆ ಅಹವಾಲು ಸ್ವೀಕಾರ ಮಾಡಿ, ಸಲ್ಲಿಕೆಯಾಗುವ ಅರ್ಜಿಗಳ ಪಟ್ಟಿ ಮಾಡಿ ಸಂಬಂಧಪಟ್ಟವರ ಗಮನಕ್ಕೆ ತಂದು ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ವಿವಿಧ ಕಾರಣಗಳಿಗಾಗಿ ಭೂಸ್ವಾಧೀನ ಪಡೆದ ಭೂಮಿಯ ಪರಿಹಾರ ಪ್ರಕರಣಗಳು ಬೇರೆ ಬೇರೆ ಹಂತದಲ್ಲಿದ್ದು, ಅವುಗಳನ್ನು ಶೀಘ್ರದಲ್ಲಿಯೇ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು. ಜಿಲ್ಲಾಧಿಕಾರಿ ಮತ್ತು ಉಪ ವಿಭಾಗಾಧಿಕಾರಿ ನ್ಯಾಯಾಲಯದಲ್ಲಿರುವ ಭೂ ಸ್ವಾಧೀನಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಶೀಘ್ರದಲ್ಲಿಯೇ ವಿಲೇವಾರಿ ಮಾಡಲು ನಿರ್ದೇಶನ ನೀಡಲಾಗುವುದು ಎಂದು ಭರವಸೆ ನೀಡಿದರು. ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೆಕರ ಇದ್ದರು.