ಅತಿಕ್ರಮ ತೆರವುಗೊಳಿಸಲು ಬಂದ ಅಧಿಕಾರಿಗಳಿಗೆ ಸ್ಥಳೀಯ ನಾಗರಾಜ್ ಸೇರಿದಂತೆ ಕೆಲವರು ಗಲಾಟೆ ನಡೆಸಿ ಬೆದರಿಕೆ ಹಾಕಿದ್ದಾರೆ. ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಅತಿಕ್ರಮ ಮಾಡಿದವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ ಎಂದು ಹೇಳಿದರು. ಶಂಖ ಗ್ರಾಮದಲ್ಲಿ ಸುಮಾರು ೨೫೦ ಕುಟುಂಬಗಳು ವಾಸವಿದ್ದು, ಇವರಲ್ಲಿ ಸುಮಾರು ೨೦ ಮಂದಿ ದೇವಸ್ಥಾನ ಮತ್ತು ಕೆರೆಯ ಜಾಗವನ್ನು ಅತಿಕ್ರಮಿಸಿದ್ದಾರೆ. ಈ ವಿಷಯ ಊರಿನ ಬಹುತೇಕರಿಗೂ ತಿಳಿದಿರುವ ವಿಚಾರವೇ ಆಗಿದೆ ಎಂದು ಅರ್ಚಕ ಎಸ್.ಎನ್. ಪ್ರಸಾದ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ತಾಲೂಕಿನ ಶಂಖ ಗ್ರಾಮದಲ್ಲಿ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದ ಸುತ್ತಮುತ್ತ ಹಾಗೂ ಕೆರೆ ಪಕ್ಕದ ಭೂಮಿಯನ್ನು ಅತಿಕ್ರಮಣ ಮತ್ತು ಒತ್ತುವರಿ ಮಾಡಲಾಗಿದ್ದು, ಸರಿಪಡಿಸುವಂತೆ ಶಂಖ ಗ್ರಾಮದ ಶ್ರೀ ಆಂಜನೇಯ ಮತ್ತು ಶ್ರೀ ಚನ್ನಕೇಶವ ದೇವಾಲಯದ ಅರ್ಚಕ ಎಸ್.ಎನ್. ಪ್ರಸಾದ್ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಗ್ರಾಮದ ಕೆಲ ಜನರು ಭೂಮಿಯನ್ನು ಅತಿಕ್ರಮಣವಾಗಿ ಉಳುಮೆ ಮಾಡಿರುತ್ತಾರೆ. ಸರಕಾರಿ ಜಾಗವನ್ನು ಅತಿಕ್ರಮಿಸಿರುತ್ತಾರೆ. ಶ್ರೀ ಚನ್ನಕೇಶವ ದೇವಾಲಯದ ಜಾಗಗಳನ್ನು ಕೂಡ ಅತಿಕ್ರಮಣ ಮಾಡಿ ಉಳುಮೆ ಮಾಡಿದ್ದಾರೆ. ಸ್ಥಳವನ್ನು ಸರ್ವೆ ಅಧಿಕಾರಿಗಳು ಭೂಮಿ ಅಳೆಯಲು ಬಂದಾಗ ಅವರಿಗೂ ಬೆದರಿಕೆ ಹಾಕಿರುತ್ತಾರೆ ಎಂದು ದೂರಿದರು. ದೇವಸ್ಥಾನ ಹಾಗೂ ಕೆರೆಯ ಸುತ್ತ ಸುಮಾರು ೧೦ ಎಕರೆ ಭೂಮಿಯನ್ನು ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ಅತಿಕ್ರಮಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಈಗಾಗಲೇ ಸ್ಥಳದಲ್ಲಿ ಸರ್ವೆಯೂ ನಡೆಸಲಾಗಿದೆ ಎಂದರು.

ಅತಿಕ್ರಮ ತೆರವುಗೊಳಿಸಲು ಬಂದ ಅಧಿಕಾರಿಗಳಿಗೆ ಸ್ಥಳೀಯ ನಾಗರಾಜ್ ಸೇರಿದಂತೆ ಕೆಲವರು ಗಲಾಟೆ ನಡೆಸಿ ಬೆದರಿಕೆ ಹಾಕಿದ್ದಾರೆ. ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಅತಿಕ್ರಮ ಮಾಡಿದವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ ಎಂದು ಹೇಳಿದರು. ಶಂಖ ಗ್ರಾಮದಲ್ಲಿ ಸುಮಾರು ೨೫೦ ಕುಟುಂಬಗಳು ವಾಸವಿದ್ದು, ಇವರಲ್ಲಿ ಸುಮಾರು ೨೦ ಮಂದಿ ದೇವಸ್ಥಾನ ಮತ್ತು ಕೆರೆಯ ಜಾಗವನ್ನು ಅತಿಕ್ರಮಿಸಿದ್ದಾರೆ. ಈ ವಿಷಯ ಊರಿನ ಬಹುತೇಕರಿಗೂ ತಿಳಿದಿರುವ ವಿಚಾರವೇ ಆಗಿದೆ ಎಂದು ತಿಳಿಸಿದರು. ಅತಿಕ್ರಮಕಾರರು ರಾಜಕೀಯ ಪ್ರಭಾವ ಹೊಂದಿದ್ದು, ಇದರ ಪರಿಣಾಮವಾಗಿ ಕ್ರಮ ಕೈಗೊಳ್ಳಲು ವಿಳಂಬವಾಗುತ್ತಿದೆ ಎಂದು ಆರೋಪಿಸಿದ ಅವರು, ಜಿಲ್ಲಾಡಳಿತವು ಸೂಕ್ತ ಕ್ರಮ ಕೈಗೊಂಡು ದೇವಸ್ಥಾನ ಹಾಗೂ ಕೆರೆಯ ಭೂ ಕಬಳಿಕೆಯನ್ನು ತಡೆಯಬೇಕು ಎಂದು ಆಗ್ರಹಿಸಿದರು.