ಸಾರಾಂಶ
-ಅಕ್ರಮ ಗಣಿಗಾರಿಕೆ ಗೊತ್ತಿದ್ದೂ ಅಧಿಕಾರಿಗಳ ಮೌನ: ನಾಯಕ ಆಕ್ರೋಶ
----ಕನ್ನಡಪ್ರಭ ವಾರ್ತೆ ಯಾದಗಿರಿ
ಜಿಲ್ಲೆಯ ಶಹಾಪುರ ತಾಲೂಕಿನ ಶಿರವಾಳ, ಅಣಬಿ, ಹೊಸೂರು, ದೋರನಹಳ್ಳಿ ಗ್ರಾಮಗಳಲ್ಲಿ ನಿರಂತರವಾಗಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದುದರ ಬಗ್ಗೆ ಎಲ್ಲ ಸಂಬಂಧಿಸಿದವರಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಜಿಲ್ಲಾಡಳಿತಕ್ಕೆ ತರಾಟೆಗೆ ತೆಗೆದುಕೊಂಡಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈಗಾಗಲೇ ಈ ವಿಷಯಕ್ಕೆ ಸಂಬಂಧಿಸಿದಂತೆ ದಿನಾಂಕ ಜ.23ರಂದು ಕರವೇ ಜಿಲ್ಲಾ ಘಟಕ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಹಾಗೂ ಹಿರಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲದಿರುವುದು ಅವಮಾನಕಾರಿ ಸಂಗತಿ ಎಂದು ಟೀಕಿಸಿದ್ದಾರೆ.
ಗಣಿಗಾರಿಕೆ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೇ, ಕೃಷಿ ಜಮೀನಿನಲ್ಲಿ ಕಾನೂನು ಬಾಹಿರವಾಗಿ ಯಾವುದೇ ಸಂಬಂಧಪಟ್ಟ ಇಲಾಖೆಯ ಪರವಾನಿಗೆ ಇಲ್ಲದೇ ರಾಜಾರೋಷವಾಗಿ ಹಗಲು ರಾತ್ರಿ ಎನ್ನದೇ ಕಲ್ಲು ಗಣಿಗಾರಿಕೆ, ಬ್ಲಾಸ್ಟಿಂಗ್ ಕೆಲಸ ನಡೆಯುತ್ತಿದೆ. 100ಕ್ಕೂ ಹೆಚ್ಚು ಅಡಿಯಷ್ಟು ಆಳ ತೋಡಿರುತ್ತಾರೆ. ನೂರಾರು ಎಕರೆ ವಿಶಾಲವಾಗಿ ನಡೆಸಿ, ಅಕ್ರಮ ದಂಧೆ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇದರಿಂದ ಅಕ್ಕಪಕ್ಕದ ಕೃಷಿ ಚಟುವಟಿಕೆ ಮಾಡುವ ರೈತರಿಗೆ ತೀವ್ರ ಅಡಚಣೆ ಉಂಟಾಗುತ್ತಿದ್ದು, ಹಾಗೂ ಭಯದಲ್ಲಿ ವಾಸಿಸುತ್ತಿದ್ದು, ಈ ಪ್ರದೇಶದ ಪಕ್ಕದಲ್ಲಿ ಸನ್ನತಿ ಬ್ರಿಡ್ಜ್ ಇದ್ದು, ಬ್ಲಾಸ್ಟಿಂಗ್‌ನಿಂದ ಸೇತುವೆಗೆ ಹಾಗೂ ಗ್ರಾಮದಲ್ಲಿರುವ ಮನೆಗಳಿಗೆ ಅಪಾಯ ಉಂಟಾಗುವ ಸಾಧ್ಯತೆ ಇದೆ. ರಸ್ತೆ ಅಕ್ಕ-ಪಕ್ಕ ದೊಡ್ಡ ಗುಂಡಿಗಳು ಬಿದ್ದಿದ್ದರಿಂದ ರಸ್ತೆ ಮೂಲಕ ವಾಹನ ಸಂಚಾರಿ ವ್ಯವಸ್ಥೆಗೆ ಕೂಡ ತೊಂದರೆಯಾಗಿದೆ. ಈ ಬಗ್ಗೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ. ಅಕ್ರಮದಾರರು ಕೃಷಿ ಭೂಮಿಯಲ್ಲಿ ಕಲ್ಲು ಗಣಿಗಾರಿಕೆ ಮಾಡುವುದು ರಾಜಾರೋಷವಗಿ ನಡೆಯುತ್ತಿದೆ. ಈ ಬಗ್ಗೆ ಪತ್ರಿಕೆಗಳೂ ವರದಿ ಮಾಡಿದ್ದರೂ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಅದರಲ್ಲೂ ವಿಶೇಷವಾಗಿ ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿ ನಡೆಯುತ್ತಿರುವುದನ್ನು ತಡೆಯಲಾಗದಿರುವುದು ಅತ್ಯಂತ ನಾಚಿಕೆಗೇಡು ಸಂಗತಿಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದು ವೇಳೆ ಕ್ರಮಕ್ಕೆ ಮುಂದಾಗದೇ ಹೋದಲ್ಲಿ ಸಂಘಟನೆಯಿಂದ ಅಕ್ರಮ ಗಣಿಗಾರಿಕೆ ನಡೆಯುವಂತ ಸ್ಥಳಗಳಿಗೆ ಮುತ್ತಿಗೆ ಹಾಕಿ ಪರಿಸರವನ್ನು ನೈಸರ್ಗಿಕ ಸಂಪತ್ತನ್ನು ಉಳಿಸಿಕೊಳ್ಳಲು ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.-----
6ವೈಡಿಆರ್10: ಟಿ.ಎನ್. ಭೀಮುನಾಯಕ, ಕರವೇ ಜಿಲ್ಲಾಧ್ಯಕ್ಷ, ಯಾದಗಿರಿ.-
6ವೈಡಿಆರ್11 : ಶಹಾಪುರ ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ದಂಧೆ .