ಸಾರಾಂಶ
ಬಸವ ಜಯಂತಿ ಸಂದರ್ಭದಲ್ಲಿ ಆಯೋಜಿಸಿದ್ದ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಬೈಕ್ ಸವಾರರು.
ಕನ್ನಡಪ್ರಭ ವಾರ್ತೆ ಸಿರಿಗೆರೆ
12ನೇ ಶತಮಾನದ ಮಹಾಮಾನವತಾವಾದಿ, ಸರ್ವಸಮತೆಯ ಹರಿಕಾರ ಬಸವೇಶ್ವರರ ಕುರಿತು ಸರಳವಾದ ಕೃತಿಯೊಂದನ್ನು ರಚಿಸಿ, ಅದನ್ನು ರಾಜ್ಯದ ಶಾಲಾ ಕಾಲೇಜುಗಳಲ್ಲಿ ಓದುತ್ತಿರುವ ಮಕ್ಕಳಿಗೆ ಉಚಿತವಾಗಿ ಒದಗಿಸಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ನಿರ್ದೇಶಕ ಟಿ.ಬಿ.ಕುಮಾರಸ್ವಾಮಿ ಮನವಿ ಮಾಡಿದರು.ಭೀಮಸಮುದ್ರದಲ್ಲಿ ಬಸವ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಸವಣ್ಣ ಮತ್ತು ಅವರ ಸಮಕಾಲೀನ ಶರಣರನ್ನು ನಮ್ಮ ಮಕ್ಕಳಿಗೆ ಪರಿಚಯಿಸುವ ಅಗತ್ಯ ತುಂಬಾ ಇದೆ. ರಾಜಕೀಯ ಪಕ್ಷಗಳು ಬಸವಣ್ಣನವರನ್ನು ಕೇವಲ ತಮ್ಮ ಓಟಿಗಾಗಿ ಬಳಸಿಕೊಳ್ಳುವ ಪ್ರವೃತ್ತಿಯನ್ನು ಬಿಟ್ಟು, ಅವರ ಸಮಗ್ರ ಪರಿಚಯವನ್ನು ನಾಡಿನ ಮಕ್ಕಳಿಗೆ ನೀಡಬೇಕು. ಜೊತೆಗೆ ಬಸವೇಶ್ವರರ ಭಾವಚಿತ್ರವನ್ನೂ ನೀಡಬೇಕು ಎಂದರು.12ನೇ ಶತಮಾನದಲ್ಲಿ ರಚಿತವಾಗಿರುವ ಸಾಹಿತ್ಯವನ್ನು ಮುಂದಿನ ತಲೆಮಾರಿಗೆ ಉಳಿಸಿಕೊಂಡು ಹೋಗುವ ಹೊಣೆಗಾರಿಕೆ ಎಲ್ಲರ ಮೇಲಿದೆ. ಅದಕ್ಕಾಗಿ ಸರ್ಕಾರಗಳು ಮುಂದಾಗಿ ಅಂತಹ ಯೋಜನೆಯನ್ನು ರೂಪಿಸಬೇಕು ಎಂದರು.
ಬಸವೇಶ್ವರ ಭಾವಚಿತ್ರವನ್ನು ತೆರೆದ ವಾಹನದಲ್ಲಿ ದಗ್ಗೆ, ನುಲೇನೂರು, ತೊಡರನಹಾಳ್, ನಿಂಗದಳ್ಳಿ, ತಿರುಮಲಾಪುರ ಮಾರ್ಗವಾಗಿ ಮಾವಿನಹಳ್ಳಿ ಬಸವೇಶ್ವರ ಸ್ವಾಮಿ ದೇವಾಲಯದವರೆಗೆ ಬೈಕ್ ರ್‍ಯಾಲಿಯಲ್ಲಿ ಮೆರವಣಿಗೆ ಮಾಡಲಾಯಿತು. ಸಾವಿರಕ್ಕೂ ಹೆಚ್ಚು ಬೈಕ್ ಸವಾರರು ಭಾಗವಹಿಸಿದ್ದರು.ಗ್ರಾಮದ ಮುಖಂಡರಾದ ಎಲ್.ಎಸ್.ದಿವಾಕರ್, ತೊಡರನಾಳ್ ಶಿವಕುಮಾರ್, ದಗ್ಗೆ ಶಶಿಕುಮಾರ್, ಬೀಜಿಹಳ್ಳಿ ದಿವಾಕರ್, ವಿಜಯಕುಮಾರ್, ನಾಗರಾಜ್, ರಾಜಣ್ಣ ತಿರುಮಲಾಪುರ ಹಾಗೂ ಎಲ್ಲಾ ಗ್ರಾಮದ ಮುಖಂಡರು ಬೈಕ್ ರ್‍ಯಾಲಿಯಲ್ಲಿ ಭಾಗವಹಿಸಿದ್ದರು.