ಫುಟ್‌ಪಾತ್‌ ಮೇಲಿನ ಗೂಡಂಗಡಿಗಳ ತೆರವಿಗೆ ಮನವಿ

| Published : Nov 21 2025, 02:30 AM IST

ಫುಟ್‌ಪಾತ್‌ ಮೇಲಿನ ಗೂಡಂಗಡಿಗಳ ತೆರವಿಗೆ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚಾಗುತ್ತಿದ್ದು, ವಾಹನಗಳ ಸಂಖ್ಯೆ ವಿಪರೀತ ಆಗಿದೆ.

ಅತಿಕ್ರಮಣವಾಗಿರುವ ಪ್ರತಿ ರಸ್ತೆ ಪಕ್ಕದ ಪಾದಚಾರಿ ಮಾರ್ಗ ಜನರ ಓಡಾಟಕ್ಕೆ ಸಿಗಲಿ

ಕನ್ನಡಪ್ರಭ ವಾರ್ತೆ ಯಲ್ಲಾಪುರ

ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚಾಗುತ್ತಿದ್ದು, ವಾಹನಗಳ ಸಂಖ್ಯೆ ವಿಪರೀತ ಆಗಿದೆ. ಇಂತಹ ಸಂದರ್ಭದಲ್ಲಿ ಜನರ ಓಡಾಟಕ್ಕೆ ಮೀಸಲಿರಿಸಿದ ಸ್ಥಳದಲ್ಲಿ ಹೆಜ್ಜೆ ಹೆಜ್ಜೆಗೂ ಗೂಡಂಗಡಿಗಳು ತಲೆ ಎತ್ತಿದ್ದು ಪಾದಚಾರಿಗಳು ಪ್ರಾಣ ಭಯದಲ್ಲಿ ವಾಹನ ಸಂಚರಿಸುವ ಮಾರ್ಗದಲ್ಲೆ ಸಂಚರಿಸುತ್ತಿದ್ದು ಈ ಕೂಡಲೆ ಗೂಡಂಗಡಿಗಳನ್ನು ತೆರವುಗೊಳಿಸಬೇಕೆಂದು ರವೀಂದ್ರ ನಗರ ನಿವಾಸಿ ಮಂಜುನಾಥ ಬೋವಿವಡ್ಡರ್ ಎಂಬುವರು ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಹಲವು ವರ್ಷಗಳ ಹಿಂದೆ ಉತ್ತರ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಮನೀಷ್ ಮೌದ್ಗಿಲ್ ಯಲ್ಲಾಪುರ ಪಟ್ಟಣದ ಫುಟ್‌ಪಾತ್ ಅತಿಕ್ರಮಣಕ್ಕೆ ಕಠಿಣ ಕ್ರಮ ಜರುಗಿಸಿ ಆಪರೇಷನ್ ಫುಟ್ ಪಾತ್ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದ್ದರು. ಅದರಂತೆ ಅತಿಕ್ರಮಣವಾಗಿರುವ ಪ್ರತಿ ರಸ್ತೆ ಪಕ್ಕದ ಪಾದಚಾರಿ ಮಾರ್ಗ ಜನರ ಓಡಾಟಕ್ಕೆ ಸಿಗಬೇಕಿದೆ. ವಿಶೇಷವಾಗಿ ವಿದ್ಯಾರ್ಥಿಗಳು, ಮಹಿಳೆಯರು, ವಯೋವೃದ್ಧರಿಗೆ ಫುಟ್‌ಪಾತ್ ಅತ್ಯವಶ್ಯಕವಾಗಿದೆ.

ಬಸ್ ನಿಲ್ದಾಣದ ಮಾರ್ಗ, ಅಂಬೇಡ್ಕರ್ ವೃತ್ತ, ಬೆಲ್ ರಸ್ತೆ, ಬಸವೇಶ್ವರ ವೃತ್ತ ಮತ್ತು ಹಲವುಕಡೆಗಳಲ್ಲಿ ಅತಿಕ್ರಮಣವಾಗಿದೆ. ಕೂಡಲೇ ತೆರವುಗೊಳಿಸಿ ಬರಲಿರುವ ರಾಜ್ಯ ಪ್ರಸಿದ್ಧ ಗ್ರಾಮದೇವಿ ಜಾತ್ರೆ ವೇಳೆಗೆ ಸ್ವಚ್ಛವಾದ ರಸ್ತೆ ವ್ಯವಸ್ಥಿತ ಪಾದಚಾರಿ ಮಾರ್ಗ ಆಗಬೇಕಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಯಲ್ಲಾಪುರ ಪಟ್ಟಣದಲ್ಲಿ ಪಾದಚಾರಿಗಳ ಓಡಾಟ ದುಸ್ತರವಾಗಿದೆ. ವಿದ್ಯಾರ್ಥಿಗಳು ಮತ್ತು ವೃದ್ದರು ಪ್ರಾಣ ಕೈಯಲ್ಲಿ ಹಿಡಿದು ಸಾಗಬೇಕಿದೆ. ಜಿಲ್ಲಾಧಿಕಾರಿಗೆ ಮನವಿ ರವಾನಿಸಿದ್ದು ತಹಶೀಲ್ದಾರ್ ಮತ್ತು ಪಟ್ಟಣ ಪಂಚಾಯಿತಿಗೆ ಮನವಿ ಸಲ್ಲಿಸಿದ್ದೇನೆ. ಪಪಂ ಮುಖ್ಯಾಧಿಕಾರಿಗಳು ಇನ್ನೊಂದು ವಾರದಲ್ಲಿ ಫುಟ್‌ಪಾತ್ ತೆರವುಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಭರವಸೆ ಹುಸಿಯಾದರೆ ಸಮಾನ ಮನಸ್ಕರೆಲ್ಲಾ ಸೇರಿ ಪಪಂ ಮುಂದೆ ಧರಣಿ ನಡೆಸಲಾಗುವುದು ಎಂದು ಮಂಜುನಾಥ ಲಕ್ಷ್ಮಣ ಬೋವಿವಡ್ಡರ್ ಮಾಧ್ಯಮಕ್ಕೆ ತಿಳಿಸಿದ್ದಾರೆ.