ರೈತರ ಕೃಷಿ ಜಮೀನಿನ ಆರ್‌ಟಿಸಿ ಸಮಸ್ಯೆ ಪರಿಹರಿಸಿ

| Published : May 30 2024, 12:50 AM IST

ಸಾರಾಂಶ

ರೈತರ ಕೃಷಿ ಜಮೀನಿನ ಉತಾರಗಳಲ್ಲಿ (ಆರ್‌ಟಿಸಿ) ಸರ್ಕಾರ ಎಂದು ನಮೂದಿಸಿರುವುದರಿಂದ ರೈತರು ಸಂಕಷ್ಟಕ್ಕೀಡಾಗಿದ್ದು, ಕಂದಾಯ ಇಲಾಖೆ ಕೂಡಲೇ ಅದನ್ನು ಬದಲಾಯಿಸಿ ರೈತರ ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಬಸವರಾಜ ಹಾದಿಮನಿ ಮನವಿ ಮಾಡಿದ್ದಾರೆ.

ಹಾನಗಲ್ಲ: ರೈತರ ಕೃಷಿ ಜಮೀನಿನ ಉತಾರಗಳಲ್ಲಿ (ಆರ್‌ಟಿಸಿ) ಸರ್ಕಾರ ಎಂದು ನಮೂದಿಸಿರುವುದರಿಂದ ರೈತರು ಸಂಕಷ್ಟಕ್ಕೀಡಾಗಿದ್ದು, ಕಂದಾಯ ಇಲಾಖೆ ಕೂಡಲೇ ಅದನ್ನು ಬದಲಾಯಿಸಿ ರೈತರ ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಬಸವರಾಜ ಹಾದಿಮನಿ ಮನವಿ ಮಾಡಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಷಯಕ್ಕೆ ಆಗಿನ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅವರಿಗೂ ಮನವಿ ಸಲ್ಲಿಸಿ ವಾಸ್ತವದ ಅರಿವು ಮೂಡಿಸಲಾಗಿತ್ತು. ಈಗಿನ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರಿಗೂ ಮನವಿ ಸಲ್ಲಿಸಿದ್ದೇವೆ. ಆದರೆ ರೈತರ ಸಮಸ್ಯೆ ಮಾತ್ರ ಇತ್ಯರ್ಥವಾಗುತ್ತಿಲ್ಲ. ಏಕಾಏಕಿ ರೈತರ ಸ್ವಂತದ ಆಸ್ತಿಗೆ ಸರ್ಕಾರ ಎಂದು ನಮೂದಿಸುವ ಮೂಲಕ ರೈತರು ಆ ಆಸ್ತಿಯ ಮೂಲಕ ಯಾವುದೇ ವಹಿವಾಟು ಮಾಡಲಾಗದಂತಾಗಿದೆ. ಬ್ಯಾಂಕ್ ಸಾಲ, ಆಸ್ತಿ ಪರಭಾರೆ, ವಾರಸಾ ಬದಲಾವಣೆ ಸೇರಿದಂತೆ ಯಾವುದೇ ವಹಿವಾಟಿಗೆ ಅದರಿಂದ ತೀರ ತೊಂದರೆಯಾಗಿದೆ. ಯಾವುದೇ ಕಾರಣವಿಲ್ಲದೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹೀಗಾಗಿದೆ ಎಂದು ಆರೋಪಿಸಿರುವ ಬಸವರಾಜ ಹಾದಿಮನಿ, ಶೀಘ್ರ ಇಂತಹ ಪ್ರಕರಣಗಳನ್ನು ಗುರುತಿಸಿ ಸರ್ಕಾರಿ ಎಂದು ನಮೂದಿಸಬೇಕು ಎಂದು ಒತ್ತಾಯಿಸಿದ್ದಾರೆ.

ಹಾನಗಲ್ಲ ತಹಸೀಲ್ದಾರ್ ಎಸ್. ರೇಣುಕಮ್ಮ ಅವರನ್ನೂ ಭೇಟಿ ಮಾಡಿ ವಾಸ್ತವ ತಿಳಿಸಲಾಗಿದೆ. ತಾಲೂಕು ಆಡಳಿತ ಇಂತಹ ಸಮಸ್ಯೆಗಳನ್ನು ವಿಶೇಷ ಪ್ರಕರಣಗಳೆಂದು ಪರಿಗಣಿಸಿ ಇತ್ಯರ್ಥಗೊಳಿಸಬೇಕು. ಅಲ್ಲದೆ ರೈತರು ತಹಸೀಲ್ದಾರ್‌ ಕಚೇರಿ ಹಾಗೂ ಸವಣೂರಿನಲ್ಲಿರುವ ಉಪವಿಭಾಗಾಧಿಕಾರಿ ಕಚೇರಿಗೆ ಅಲೆಯುವಂತಾಗಬಾರದು. ೩ ದಶಕಗಳಿಂದ ಇಂತಹ ಸಮಸ್ಯೆಗಳು ರೈತರನ್ನು ಕಾಡುತ್ತಿವೆ. ಕೂಡಲೇ ರೈತರಿಗೆ ಈ ಸಮಸ್ಯೆಯಿಂದ ಪರಿಹಾರ ನೀಡಿ ಉಪಕರಿಸಿ ಎಂದು ಕಂದಾಯ ಇಲಾಖೆಗೆ ಮನವಿ ಮಾಡಿದ್ದಾರೆ.

ತಾಲೂಕು ಬಿಜೆಪಿ ಅಧ್ಯಕ್ಷ ಮಹೇಶ ಕಮಡೊಳ್ಳಿ ಈ ಸಂದರ್ಭದಲ್ಲಿದ್ದರು.

ಭೂ ಸ್ವಾಧೀನ ನಿಯಮದಡಿ ಕೆಲವು ಪ್ರಕರಣಗಳಲ್ಲಿ ಸರ್ಕಾರಿ ಇದ್ದದ್ದು ಸರ್ಕಾರ ಎಂದಾಗಿದೆ. ಇದು ಯಾವುದೂ ಉದ್ದೇಶಪೂರ್ವಕ ಆಥವಾ ಕಣ್ಣತಪ್ಪಿನಿಂದ ಆದದ್ದಲ್ಲ. ಅಧಿಕಾರಿಗಳಿಗಾಗಲೀ, ನೌಕರರಿಗಾಗಲಿ ಇಂತಹ ಬದಲಾವಣೆಗೆ ಸ್ವತಂತ್ರ ಅವಕಾಶವಿಲ್ಲ. ಕಾನೂನು ವ್ಯಾಪ್ತಿಯಲ್ಲಿ ಆದೇಶಗಳಾದಾಗ ಮಾತ್ರ ಬದಲಾವಣೆ ಸಾಧ್ಯ. ಅಂತಹ ಪ್ರಕರಣಗಳಿದ್ದರೆ ಅರ್ಜಿ ಸಲ್ಲಿಸಿದಲ್ಲಿ ಪರಿಶೀಲಿಸಲಾಗುವುದು. ಇಂತಹ ೨೫೦ ಪ್ರಕರಣಗಳನ್ನು ತಾಲೂಕಿನಲ್ಲಿ ಈಗಾಗಲೇ ಇತ್ಯರ್ಥಗೊಳಿಸಲಾಗಿದೆ ಎಂದು ತಹಸೀಲ್ದಾರ್‌ ಎಸ್. ರೇಣುಕಮ್ಮ ಹೇಳುತ್ತಾರೆ.