ಕೊಡವ ಭಾಷಿಕ ಸಮುದಾಯಗಳ ಕೂಟದಿಂದ ಶಾಸಕಗೆ ಮನವಿ

| Published : May 15 2024, 01:34 AM IST

ಸಾರಾಂಶ

ಕಕ್ಕಬ್ಬೆಯ ಪ್ರೌಢಶಾಲಾ ಮೈದಾನದಲ್ಲಿ ಕೊಡವ ಭಾಷಿಕ ಸಮುದಾಯಗಳ ಕೂಟದ ಅಧ್ಯಕ್ಷ ಡಾ.ಮೇಚಿರ ಸುಭಾಷ್ ನಾಣಯ್ಯ ಅವರ ನೇತೃತ್ವದಲ್ಲಿ ಎಲ್ಲಾ 21 ಮೂಲನಿವಾಸಿ ಭಾಷಿಕ ನಿರ್ದೇಶಕರ ನಿಯೋಗಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಭೇಟಿಯಾಗಿ ವಿವಿಧ ಬೇಡಿಕೆಗಳ ಕುರಿತು ಚರ್ಚಿಸಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಹಾಕಿ ಕ್ರೀಡಾ ಮೈದಾನಕ್ಕೆ ಜಾಗ ಮಂಜೂರು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೊಡವ ಭಾಷಿಕ ಸಮುದಾಯಗಳ ಕೂಟ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಮನವಿ ಪತ್ರ ಸಲ್ಲಿಸಿದೆ.

ಕಕ್ಕಬ್ಬೆಯ ಪ್ರೌಢಶಾಲಾ ಮೈದಾನದಲ್ಲಿ ಕೂಟದ ಅಧ್ಯಕ್ಷ ಡಾ.ಮೇಚಿರ ಸುಭಾಷ್ ನಾಣಯ್ಯ ಅವರ ನೇತೃತ್ವದಲ್ಲಿ ಎಲ್ಲಾ 21 ಮೂಲನಿವಾಸಿ ಭಾಷಿಕ ನಿರ್ದೇಶಕರ ನಿಯೋಗ ಶಾಸಕರನ್ನು ಭೇಟಿಯಾಗಿ ಬೇಡಿಕೆಗಳ ಕುರಿತು ಚರ್ಚಿಸಿತು.

ಸುಮಾರು ಒಂದು ಲಕ್ಷಕ್ಕೂ ಮೇಲ್ಪಟ್ಟು ಜನಸಂಖ್ಯೆ ಹೊಂದಿರುವ ವಿಶಿಷ್ಟ ಸಂಸ್ಕೃತಿಯ, ಕೊಡವ ಭಾಷೆ ಮಾತನಾಡುವ ಕೊಡಗಿನ ಮೂಲ ನಿವಾಸಿ 21 ಸಮುದಾಯಗಳ ಸಂವಿಧಾನಬದ್ಧ ಮೂಲಭೂತ ಹಕ್ಕುಗಳನ್ನು ಈಡೇರಿಸಬೇಕು. ಜನಾಂಗದ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡಬೇಕು, ಸುಸಜ್ಜಿತ ಮತ್ತು ಮೂಲಭೂತ ಸೌಲಭ್ಯಗಳಿರುವ ಕಲ್ಯಾಣ ಮಂಟಪ ನಿರ್ಮಾಣ, ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಹಾಕಿ ಕ್ರೀಡಾ ಮೈದಾನಕ್ಕೆ ಪೈಸಾರಿ ಜಾಗ ಮಂಜೂರು ಮಾಡುವುದು, ಮೂಲನಿವಾಸಿ ಜನಪದ ಅಧ್ಯಯನ ಕೇಂದ್ರ, ಪುರಾತನ ತಾಳೆಗರಿ ವಸ್ತು ಸಂಗ್ರಹಾಲಯ, ಪ್ರಾಚ್ಯ ಗ್ರಂಥ ಭಂಡಾರ, ಆಟ್‌ಪಾಟ್ ಪಡಿಪ್ ಕೇಂದ್ರ ಸ್ಥಾಪನೆಗೆ ಅಗತ್ಯ ನೆರವು ನೀಡಬೇಕೆಂದು ಡಾ.ಸುಭಾಷ್ ನಾಣಯ್ಯ ಮನವಿ ಮಾಡಿದರು.

ಈ ಸಂದರ್ಭ ಕೂಟದ ಸಹಕಾರ್ಯದರ್ಶಿ ಮೊಳ್ಳೆಕುಟ್ಟಡ ದಿನು ಬೋಜಪ್ಪ, ಪ್ರಮುಖರಾದ ಕುಡಿಯರ ಮುತ್ತಪ್ಪ, ಕಣಿಯಂಡ ಪ್ರಕಾಶ್, ಜೋಕೀರ ಜೀವನ್, ತಾಪನೆರ ಮಹೇಶ್, ಮುಡುವಂಡ ರೆಗನ್, ಚೆಂದುವಂಡ ದೇವಯ್ಯ, ಕಲ್ಲಚಂಡ ಉಷಾ ರಾಜೇಶ್ ಹಾಗೂ ಕುಡವಚೆರಿರ ಉಮೇಶ್ ಹಾಜರಿದ್ದರು.

ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಎ.ಎಸ್.ಪೊನ್ನಣ್ಣ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.