ಸಾರಾಂಶ
ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಘಟಕದ ಪದಾಧಿಕಾರಿಗಳಿಂದ ಒತ್ತಾಯ
ಕನ್ನಡಪ್ರಭ ವಾರ್ತೆ, ಕೊಪ್ಪಮೂರು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಘಟಕದ ಪದಾಧಿಕಾರಿಗಳು ಗುರುವಾರ ತಹಸೀಲ್ದಾರ್ ಹುಸೇನ್ ಅಹಮ್ಮದ್ ಸಾಬ್ ಸರಕಾವಸ ಮೂಲಕ ಸರ್ಕಾರಕ್ಕೆ ಹಾಗೂ ಶಾಸಕರ ಆಪ್ತ ಸಹಾಯಕ ಬಿ.ಸಿ. ರಾಜೇಂದ್ರ ಮೂಲಕ ಶಾಸಕರಿಗೆ ಗುರುವಾರ ಮನವಿ ಸಲ್ಲಿಸಿದರು.ಹೊಸ ಪಿಂಚಣಿ ಯೋಜನೆ(ಎನ್.ಪಿ.ಎಸ್) ನೌಕರರ ಜೀವನ ನಿರ್ವಹಣೆ, ಸಂಧ್ಯಾ ಕಾಲದ ಬದುಕು ಅತ್ಯಂತ ಕಷ್ಟಕರ ವಾಗಿರುವುದರಿಂದ ಎನ್ ಪಿಎಸ್ ರದ್ಧುಪಡಿಸಿ, ಹಳೇ ಪಿಂಚಣಿ ಯೋಜನೆ(ಒಪಿಎಸ್) ವ್ಯಾಪ್ತಿಗೆ ತರಬೇಕು. ಈಗಾಗಲೇ ಪಂಜಾಬ್, ರಾಜಸ್ಥಾನ, ಛತ್ತೀಸ್ ಘಡ, ಜಾರ್ಖಂಡ್, ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಒಪಿಎಸ್ ಜಾರಿಗೆ ತಂದಿವೆ ಅದರಂತೆ ಕರ್ನಾಟಕ ಸರ್ಕಾರ ಇದನ್ನು ಜಾರಿಗೊಳಿಸಬೇಕು. ೭ನೇ ವೇತನ ಆಯೋಗ ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಶಿಫಾರಸ್ಸು ವರದಿಯಲ್ಲಿನ ಫಿಟ್ ಮೆಂಟ್ ಸೌಲಭ್ಯವನ್ನು ಕನಿಷ್ಠ ಶೇ.೨೭.೫೦ ರಷ್ಟು ಹೆಚ್ಚಿಸಿ ಕಾಲ್ಪನಿಕವಾಗಿ ಜು.೧ ರ ೨೦೨೨ ರಿಂದ ಅನ್ವಯವಾಗುವಂತೆ ವೇತನ ನಿಗಧಿಪಡಿಸಿ ಏ.೧ ರ ೨೦೨೪ ರಿಂದ ಆರ್ಥಕ ಸೌಲಭ್ಯ ನೀಡಿ ಸರ್ಕಾರಿ ಆದೇಶ ಹೊರಡಿಸಬೇಕು. ನೌಕರರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ನಗದು ರಹಿತ ಚಿಕಿತ್ಸೆ ನೀಡುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (ಕೆಎಎಸ್ಎಸ್)ಗೆ ಈ ಹಿಂದಿನ ಸರ್ಕಾರ ೨೦೨೧-೨೨ರ ಆಯವ್ಯಯದಲ್ಲಿ ಘೋಷಿಸಿತ್ತು. ಇದೀಗ ಯೋಜನೆ ಅನುಷ್ಠಾನ ಅಧಿಕಾರಿಗಳು ತಾಂತ್ರಿಕ ಮತ್ತಿತರೆ ಕಾರಣ ನೀಡಿ ಯೋಜನೆ ಜಾರಿಗೊಳಿಸಲು ಅನಗತ್ಯ ವಿಳಂಬ ಮಾಡುತ್ತಿದ್ದಾರೆ. ಇದನ್ನು ಕೂಡಲೇ ಸರಿಪಡಿಸಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ. ತಾಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಸಿ. ರಾಜೇಂದ್ರ, ರಾಜ್ಯ ಪರಿಷತ್ ಸದಸ್ಯ ರಾಜೇಶ್, ತಾಲೂಕು ಘಟಕದ ಖಜಾಂಚಿ ಸುರೇಶ್, ಕಾರ್ಯದರ್ಶಿ ವಿನಯ್, ತಾಲೂಕು ಪಂಚಾಯಿತಿ ಸಹಾಯಕ ಲೆಕ್ಕಾಧಿಕಾರಿ ಪ್ರಮೋದ್, ಸಹಾಯಕ ನಿರ್ದೇಶಕ (ಗ್ರಾಮೀಣ ಉದ್ಯೋಗ) ಚೇತನ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆದರ್ಶ ಮುಂತಾದವರು ಮನವಿ ನೀಡುವ ಸಂದರ್ಭದಲ್ಲಿ ಇದ್ದರು.