ಸಾರಾಂಶ
ಕಸಬಾ ಹೋಬಳಿ ಬಾಳೆಕೊಪ್ಪದ ಸರ್ವೆ ನಂ.19 ರಲ್ಲಿ 2 ಎಕರೆ ಭೂಮಿ ಮಂಜೂರು
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಪಟ್ಟಣದ ಪೌರ ಕಾರ್ಮಿಕರ ಬೀದಿಯ ಪ.ಜಾತಿಗೆ ಸೇರಿದ 6 ಕುಟುಂಭದವರಿಗೆ ಬಾಳೆ ಗ್ರಾಮದ ಸರ್ವೆ ನಂ.19 ರಲ್ಲಿ ಮಂಜೂರಾಗಿದ್ದ 12 ಎಕರೆ ಜಮೀನಿಗೆ ಖಾತೆ, ಪಹಣಿ, ಸರ್ವೆ ಮಾಡಿ ಕಲ್ಲು ಬಾಂದು ಹಾಕಿಸಿ ಜಮೀನನ್ನು ನಮ್ಮ ಸ್ವಾಧೀನಕ್ಕೆ ನೀಡಬೇಕು ಎಂದು ಆಗ್ರಹಿಸಿ ಪ.ಜಾತಿಗೆ ಸೇರಿದ 6 ಕುಟುಂಬದವರು ಹಾಗೂ ದಲಿತ ಸಂಘರ್ಷ ಸಮಿತಿ ಮುಖಂಡರು ಶನಿವಾರ ತಹಸೀಲ್ದಾರ್ ಡಾ.ನೂರಲ್ ಹುದಾ ಅವರಿಗೆ ಮನವಿ ಪತ್ರ ಅರ್ಪಿಸಿದರು.
ಮನವಿಯಲ್ಲಿ ಕಸಬಾ ಹೋಬಳಿ ಬಾಳೆಕೊಪ್ಪದ ಸರ್ವೆ ನಂ.19 ರಲ್ಲಿ 1984-85 ರಲ್ಲಿ ದರಕಾಸ್ತು ಮೂಲಕ ತಲಾ 2 ಎಕ್ರೆ ಯಂತೆ ಒಟ್ಟು 12 ಎಕ್ರೆ ಮಂಜೂರಾಗಿದೆ. ಮಂಜೂರಾದ ಅವಧಿಯಿಂದ ಇಲ್ಲಿವರೆಗೂ ಖಾತೆ, ಪಹಣಿ ಹಾಗೂ ಚೆಕ್ ಬಂಧಿ, ಕಲ್ಲು ಬಾಂದು ಹಾಕಿರುವುದಿಲ್ಲ. ಮರ ಮಾಲ್ಕಿ ಮಾಡಿರುವುದಿಲ್ಲ ಎಂದು ಆರೋಪಿಸಿದರು.ಈ ಜಮೀನು ಪರಿಶಿಷ್ಟ ಜಾತಿಯವರಿಗೆ ಮಂಜೂರು ಮಾಡಲಾಗಿದೆ. ಆದರೆ, ಕೆಲವರು ಈ ಜಮೀನು ಒತ್ತುವರಿ ಮಾಡಿಕೊಂಡಿದ್ದಾರೆ. ಪ.ಜಾತಿಯವರಿಗೆ ಮಂಜೂರಾದ ಜಮೀನನ್ನು ಬೇರೆಯವರಿಗೆ ಮತ್ತೆ ಮಂಜೂರು ಮಾಡಿದರೆ ಪಿಟಿಸಿಎಲ್ ಕಾಯ್ದೆ ವ್ಯಾಪ್ತಿಗೆ ಬರುತ್ತದೆ. ಈ ಕಾಯ್ದೆ ಉಲ್ಲಂಘನೆ ಮಾಡಿದರೆ ಅಧಿಕಾರಿಗಳು,ನೌಕರರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು. ಆದ್ದರಿಂದ ಒತ್ತುವರಿ ಮಾಡಿದ ಜಮೀನನ್ನು ಖುಲ್ಲಾ ಪಡಿಸಿ ಪ.ಜಾತಿಯವರಿಗೆ ಈ 12 ಎಕ್ರೆ ಜಮೀನನ್ನು ನೀ ಡಬೇಕು. ಇಲ್ಲದಿದ್ದಲ್ಲಿ ಅ.15 ರ ನಂತರ ಅಮರಣಾಂತ ಚಳುವಳಿ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಲಾಗಿದೆ.
ಮನವಿ ನೀಡುವ ಸಂದರ್ಭದಲ್ಲಿ ಪ.ಜಾತಿಗೆ ಸೇರಿದ 6 ಕುಟುಂಬಗಳ ಸದಸ್ಯರು, ದಲಿತ ಸಂಘರ್ಷ ಸಮಿತಿ ಮುಖಂಡರಾದ ತರೀಕೆರೆ ವೆಂಕಟೇಶ್, ಎನ್.ಆರ್.ಪುರದ ರಾಜೇಶ್, ರೆಹಮಾನ್, ಬಾಳೆಹೊನ್ನೂರು ಭವಾನಿ ಮತ್ತಿತರರು ಇದ್ದರು.