ಸಾರಾಂಶ
ಸಾಂಕೇತಿಕ ಭಿಕ್ಷಾಟನೆಯಲ್ಲಿ ಜಮೆಯಾದ ₹2510ಗಳನ್ನು ಡಿಡಿ ಮುಖಾಂತರ ಜಿಲ್ಲಾಧಿಕಾರಿಗಳಿಗೆ ನೀಡಲಾಯಿತು.
ಗದಗ: ಅರ್ಧಕ್ಕೆ ನಿಂತಿರುವ ಪುಟ್ಟರಾಜ ಸ್ಮಾರಕ ಭವನಕ್ಕೆ ಭೇಟಿ ನೀಡಿ ಪರಿಶೀಲಿಸಿ ರಾಜ್ಯ ಸರ್ಕಾರಕ್ಕೆ ತ್ವರಿತವಾಗಿ ವರದಿ ಸಲ್ಲಿಸಬೇಕೆಂದು ಒತ್ತಾಯಿಸಿ ಜೆಡಿಎಸ್ ನಿಯೋಗದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಸಾಂಕೇತಿಕ ಭಿಕ್ಷಾಟನೆಯಲ್ಲಿ ಜಮೆಯಾದ ₹2510ಗಳನ್ನು ಡಿಡಿ ಮುಖಾಂತರ ಜಿಲ್ಲಾಧಿಕಾರಿಗಳಿಗೆ ನೀಡಲಾಯಿತು.ಈ ವೇಳೆ ಜೆಡಿಎಸ್ ರಾಜ್ಯದ ವಕ್ತಾರ ವೆಂಕನಗೌಡ ಆರ್.ಗೋವಿಂದಗೌಡ್ರ ಮಾತನಾಡಿ, ಬರುವ ಬಜೆಟ್‌ನಲ್ಲಿ ಪುಟ್ಟರಾಜ ಸ್ಮಾರಕ ಭವನ ಪೂರ್ಣಗೊಳಿಸಲು ಬೇಕಾಗಿರುವ ಉಳಿದ ಹಣ ನೀಡಬೇಕೆಂದು ಮುಖ್ಯಮಂಂತ್ರಿಗಳಿಗೆ ಒತ್ತಾಯಿಸಲಾಗಿದೆ. ಇದಕ್ಕೆ ತಪ್ಪಿದರೆ ಶ್ರೀವೀರೇಶ್ವರ ಪುಣ್ಯಾಶ್ರಮದ ಭಕ್ತರೊಡಗೂಡಿ ಹೋರಾಟ ಮಾಡಲಾಗುವುದು.
ಒಬ್ಬ ಮಹಾನ್ ಚೇತನ, ದೀನ ದಲಿತ, ಅಂಧ-ಅನಾಥರ ಬಾಳಿಗೆ ಬೆಳಕಾದ ಪಂಡಿತ ಪುಟ್ಟರಾಜ ಗವಾಯಿಗಳ ಹೆಸರಿಟ್ಟಿರುವ ಈ ಸ್ಮಾರಕ ಭವನ ಹಾಳಾಗಿರುವುದನ್ನು ನೋಡಿದರೆ ಪೂಜ್ಯರಿಗೆ ಮಾತ್ರವಲ್ಲದೆ ಅವರನ್ನು ಆರಾಧಿಸುವ ಲಕ್ಷಾಂತರ ಭಕ್ತರಿಗೂ ಕೂಡ ಇದು ಅಪಮಾನ ಮಾಡಿದಂತಾಗಿದೆ. ಈ ಸ್ಮಾರಕ ಭವನ ಗದಗಿನ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಆದಕಾರಣ ಜೆಡಿಎಸ್ ಹೋರಾಟ ಕೈಗೆತ್ತಿಕೊಂಡಿದೆ, ಸ್ಮಾರಕ ಭವನ ಉದ್ಘಾಟನೆಯಾಗುವವರೆಗೆ ಈ ಹೋರಾಟ ಕೈ ಬಿಡುವುದಿಲ್ಲ ಇದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ನೂತನವಾಗಿ ಗದಗ ಜಿಲ್ಲೆಗೆ ಆಗಮಿಸಿದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರಿಗೆ ಜಿ.ಎಂ. ಸಂಶಿ ಹಾಗೂ ಜೋಜಫ್ ಉದೋಜಿ ಸನ್ಮಾನಿಸಿ, ಸ್ವಾಗತ ಕೋರಿದರು.
ಕೆ.ಎಫ್. ದೊಡ್ಡಮನಿ, ಪುಲಿಕೇಶಿ ಗಾಳಿ, ಪ್ರೊಫೈಲ್ ಪುಣೆಕರ್, ಎಂ.ಎಸ್. ಪರ್ವತಗೌಡ್ರ, ರಮೇಶ ಹುಣಸಿಮರದ, ಸಂತೋಷ ಪಾಟೀಲ, ಜಿ.ಕೆ.ಕೊಳ್ಳಿಮಠ, ಶರಣಪ್ಪ ಹೂಗಾರ, ವೀರಪ್ಪ ಜಿರಲಿ, ಸಿದ್ದಲಿಂಗಯ್ಯ ಹೊಂಬಾಳಿಮಠ, ಮಂಜುಳಾ ಮೇಟಿ ಇದ್ದರು.