ಸಾರಾಂಶ
ಬೆಂಗಳೂರು : ಹೊರರಾಜ್ಯಗಳಲ್ಲಿ ಕಾನೂನು ಪದವಿ (ಎಲ್‌ಎಲ್‌ಬಿ) ಪಡೆದಿದ್ದೇವೆಂದು ಹೇಳಿಕೊಂಡು ಕರ್ನಾಟಕದಲ್ಲಿ ವಕೀಲಿಕೆ ಆರಂಭಿಸಲು ಸನ್ನದು ಕೋರಿ ರಾಜ್ಯ ವಕೀಲರ ಪರಿಷತ್‌ಗೆ ಬರುವ ಅನೇಕರಿಗೆ ತಾವು ವ್ಯಾಸಂಗ ಮಾಡಿದ ವಿಶ್ವವಿದ್ಯಾಲಯ, ಕಾಲೇಜಿನ ವಿಳಾಸ, ಪ್ರದೇಶ, ಪ್ರಾಧ್ಯಾಪಕರು/ಪ್ರಾಂಶುಪಾಲರ ಹೆಸರು, ಕರ್ನಾಟಕದಿಂದ ಅವರ ರಾಜ್ಯಕ್ಕೆ ತೆರಳುತ್ತಿದ್ದ ಬಸ್ಸು, ರೈಲುಗಳ ಬಗ್ಗೆ ಅರಿವಿಲ್ಲ!
ಇಂಥ ವಿಚಿತ್ರ ಸಂಗತಿ ಸನ್ನದು ವಿತರಣೆಗೆ ಕರ್ನಾಟಕ ವಕೀಲರ ಪರಿಷತ್ ನಡೆಸುವ ಸಂದರ್ಶನದಲ್ಲಿ ಬೆಳಕಿಗೆ ಬಂದಿದೆ. ತಾವು ಕಾನೂನು ಪದವಿ ಅಧ್ಯಯನ ಮಾಡಿದ ವಿಶ್ವವಿದ್ಯಾಲಯ/ಕಾಲೇಜು ಬಗ್ಗೆ ಪ್ರಾಥಮಿಕ ಮಾಹಿತಿ ಇಲ್ಲದ ಸುಮಾರು 300ರಿಂದ 400 ಜನರಿಗೆ ವಕೀಲರ ಪರಿಷತ್ ಸನ್ನದು ನೀಡದೆ ವಾಪಸ್ ಕಳುಹಿಸಿದೆ. ಈ ಅಭ್ಯರ್ಥಿಗಳ ಕಾನೂನು ಪದವಿಯ ಅಂಕಪಟ್ಟಿಗಳು ನಕಲಿ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿರುವುದೇ ಸನ್ನದು ನಿರಾಕರಿಸಲು ಪ್ರಮುಖ ಕಾರಣ.
ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಪಂಜಾಬ್-ಹರ್ಯಾಣ ರಾಜ್ಯಗಳ ಕಾನೂನು ವಿಶ್ವವಿದ್ಯಾಲಯ/ಕಾಲೇಜುಗಳಲ್ಲಿ ಕಾನೂನು ಪದವಿ ನಕಲಿ ಅಂಕಪಟ್ಟಿ ಪಡೆದು, ಕರ್ನಾಟಕದಲ್ಲಿ ವಕೀಲಿಕೆ ಆರಂಭಿಸಲು ಸನ್ನದು ಕೋರಿ ರಾಜ್ಯ ವಕೀಲರ ಪರಿಷತ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಸಂದರ್ಶನಕ್ಕೂ ಮುನ್ನ ಅಭ್ಯರ್ಥಿಗಳ ಅಂಕಪಟ್ಟಿ, ಅವುಗಳನ್ನು ವಿತರಿಸಿರುವ ವಿಶ್ವವಿದ್ಯಾಲಯಗಳಿಗೆ ಪರಿಶೀಲನೆಗಾಗಿ ಕಳುಹಿಸಲಾಗುವುದು. ಅಂಕಪಟ್ಟಿಗಳನ್ನು ಅಸಲಿ ಇಲ್ಲವೇ ನಕಲಿ ಎಂದು ವಿವಿಗಳು ಪರಿಷತ್‌ಗೆ ಪತ್ರ ಬರೆಯುತ್ತವೆ. ಈ ಮಾಹಿತಿ ಬಂದ ನಂತರ ನಕಲಿ ಅಂಕಪಟ್ಟಿ ತಂದವರಿಗೆ ಸಂದರ್ಶನದಲ್ಲಿ ಕಾನೂನು ವಿಚಾರಗಳ ಬಗ್ಗೆ ಪ್ರಶ್ನೆ ಕೇಳದೆ, ಕಾನೂನು ಪದವಿ ಅಧ್ಯಯನ ಮಾಡಿರುವ ವಿಶ್ವವಿದ್ಯಾಲಯ/ಕಾಲೇಜುಗಳ ಬಗ್ಗೆ ಪ್ರಶ್ನಿಸಲಾಗುವುದು.
ಪ್ರಶ್ನೆಗಳಿಗೆ ಸರಿ ಉತ್ತರ ನೀಡದವರಿಗೆ ‘ನಿಮ್ಮ ಅಂಕಪಟ್ಟಿಗಳು ನಕಲಿ ಎಂಬುದಾಗಿ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ನಿಮಗೆ ಸನ್ನದು ನೀಡಲಾಗದು ಎಂದು ಹಿಂಬರಹ ನೀಡಲಾಗುವುದು. ಅಗತ್ಯವಿದ್ದಲ್ಲಿ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು. ಸನ್ನದು ವಿತರಿಸಲು ಬಲವಂತ ಮಾಡಿದರೆ ಪೊಲೀಸರಿಗೆ ದೂರು ನೀಡಲಾಗುವುದು’ ಎಂದು ಪರಿಷತ್ ಅಧ್ಯಕ್ಷರು ಎಚ್ಚರಿಕೆ ನೀಡುತ್ತಿದ್ದಾರೆ.
ಕಳೆದ ಐದು ತಿಂಗಳಲ್ಲಿ ಸುಮಾರು 300ರಿಂದ 400 ಅಭ್ಯರ್ಥಿಗಳಿಗೆ ಸನ್ನದು ನೀಡದೆ ವಾಪಸ್ ಕಳುಹಿಸಲಾಗಿದೆ. ಸಂದರ್ಶನ ಮುಗಿಸಿ ಹೊರ ಹೋದವರು ಮತ್ತೆ ಸನ್ನದುಗಾಗಿ ಪರಿಷತ್ ಕಚೇರಿ ಬಳಿ ಸುಳಿಯುತ್ತಿಲ್ಲ. ನಕಲಿ ಅಂಕಪಟ್ಟಿ ಪಡೆದವರಲ್ಲಿ ಆಟೋ ಡ್ರೈವರ್‌ಗಳು, ರಾಜಕಾರಣದಲ್ಲಿ ಸಕ್ರಿಯವಾಗಿರುವವರೂ ಇದ್ದಾರೆ ಎಂದು ಮೂಲಗಳು ತಿಳಿಸಿವೆ.
ನಕಲಿ ಅಂಕಪಟ್ಟಿ ನೀಡಿದವರ ಪತ್ತೆಗೆ ಕ್ರಮ?:
ಈ ಹಿಂದೆ ನಕಲಿ ಅಂಕಪಟ್ಟಿ ಸಲ್ಲಿಸಿ ಸನ್ನದು ಪಡೆದವರ ಪತ್ತೆ ಕಾರ್ಯಕ್ಕೂ ವಕೀಲರ ಪರಿಷತ್ ಮುಂದಾಗಿದೆ. ಸನ್ನದು ಪಡೆದವರ ಅಂಕಪಟ್ಟಿಗಳನ್ನು ಕಾನೂನು ಪದವೀಧರರು ವ್ಯಾಸಂಗ ಮಾಡಿರುವ ವಿಶ್ವವಿದ್ಯಾಲಯಗಳ ಪರಿಶೀಲನೆಗೆ ಕಳುಹಿಸಿ ಅವು ಅಸಲಿಯೋ ಅಥವಾ ನಕಲಿಯೋ ಎಂಬ ಬಗ್ಗೆ ಪರಿಷತ್ ಮಾಹಿತಿ ಕಲೆ ಹಾಕುತ್ತಿದೆ.
ಸದ್ಯ ಸನ್ನದು ಪಡೆದಿರುವವರ ಪೈಕಿ ಅಂದಾಜು ಒಂದು ಸಾವಿರಕ್ಕೂ ಅಧಿಕ ಮಂದಿ ನಕಲಿ ಅಂಕಪಟ್ಟಿ ಸಲ್ಲಿಸಿದವರು ಪತ್ತೆಯಾಗಿದ್ದಾರೆ. ಅವರು ಸ್ವಯಂ ಪ್ರೇರಿತವಾಗಿ ಸನ್ನದು ಹಿಂದಿರುಗಿಸಲು 2025ರ ಆ.30ರವರೆಗೆ ಪರಿಷತ್ ಗಡುವು ನೀಡಿದೆ. ಅಷ್ಟರೊಳಗೆ ಸನ್ನದು ಹಿಂದಿರುಗಿಸದವರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲು ಮತ್ತು ಸನ್ನದು ರದ್ದುಪಡಿಸಲು ಪರಿಷತ್ ನಿರ್ಧರಿಸಿದೆ. ನಕಲಿ ಅಂಕಪಟ್ಟಿ ಸಲ್ಲಿಸಿ ಸನ್ನದು ಪಡೆದ 18 ಮಂದಿ ವಿರುದ್ಧ 2016ರಲ್ಲಿ ವಿಧಾನಸೌಧ ಪೊಲೀಸ್ ಠಾಣೆಗೆ ಪರಿಷತ್ ದೂರು ನೀಡಿರುವುದನ್ನು ಸ್ಮರಿಸಬಹುದು.
ಕಾಲೇಜಿಗೆ ಹೋಗದೆ ಮಧ್ಯವರ್ತಿಗಳಿಗೆ ಲಕ್ಷಾಂತರ ರು. ಹಣ ನೀಡಿ ನಕಲಿ ಅಂಕಪಟ್ಟಿ ಪಡೆದವರಿಗೆ ತಾವು ವ್ಯಾಸಂಗ ಮಾಡಿದ ಕಾಲೇಜಿನ ಬಗ್ಗೆ ಪ್ರಾಥಮಿಕ ಮಾಹಿತಿ ಇರುವುದಿಲ್ಲ. ನಕಲಿ ಅಂಕಪಟ್ಟಿ ಸಲ್ಲಿಸಿ ಸನ್ನದು ಪಡೆಯುವುದನ್ನು ತಡೆಯಲು ಸಂದರ್ಶನದಲ್ಲಿ ಅಭ್ಯರ್ಥಿಗಳಿಗೆ ಅವರು ವ್ಯಾಸಂಗ ಮಾಡಿದ ಕಾನೂನು ವಿವಿ/ಕಾಲೇಜಿಗಳ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಸರಿ ಉತ್ತರ ನೀಡದ 300ರಿಂದ 400 ಜನರಿಗೆ ಸನ್ನದು ನಿರಾಕರಿಸಲಾಗಿದೆ. ರಾಜ್ಯದಲ್ಲಿ ಅಂದಾಜು ಒಂದು ಸಾವಿರ ಜನ ನಕಲಿ ಅಂಕಪಟ್ಟಿ ನೀಡಿ ಈಗಾಗಲೇ ಸನ್ನದು ಪಡೆದಿದ್ದು, ಅವರ ವಿರುದ್ಧ ಕ್ರಮ ಜರುಗಿಸಲಾಗುವುದು.
- ಎಸ್.ಎಸ್.ಮಿಟ್ಟಲಕೋಡ, ಅಧ್ಯಕ್ಷರು, ಕರ್ನಾಟಕ ವಕೀಲರ ಪರಿಷತ್