ವೈಜ್ಞಾನಿಕ ಚಿಂತನೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ

| Published : Aug 31 2025, 01:08 AM IST

ಸಾರಾಂಶ

ಜೀವನದಲ್ಲಿ ವೈಜ್ಞಾನಿಕ ಚಿಂತನೆಗಳನ್ನು ಅಳವಡಿಸಿಕೊಂಡರೆ ಉತ್ತಮ ಜೀವನ ನಡೆಸಬಹುದು ಎಂದು ದೀನಬಂಧು ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರೊ. ಜಿ.ಎಸ್. ಜಯದೇವ್ ಹೇಳಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಜೀವನದಲ್ಲಿ ವೈಜ್ಞಾನಿಕ ಚಿಂತನೆಗಳನ್ನು ಅಳವಡಿಸಿಕೊಂಡರೆ ಉತ್ತಮ ಜೀವನ ನಡೆಸಬಹುದು ಎಂದು ದೀನಬಂಧು ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರೊ. ಜಿ.ಎಸ್. ಜಯದೇವ್ ಹೇಳಿದರು.

ನಗರದ ದೀನಬಂಧು ಪ್ರಾಥಮಿಕ ಮತ್ತು ಪ್ರೌಢಶಾಲಾ ಆವರಣದಲ್ಲಿ ಏರ್ಪಡಿಸಿದ್ದ ವಿಜ್ಞಾನ ಮೇಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ವಿಜ್ಞಾನವನ್ನು ಸರಳಿಕರಣಗೊಳಿಸಿ, ಪ್ರಾಯೋಗಿಕವಾಗಿ ವಿವರಣೆ ನೀಡಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದೇ ಈ ಕಾರ್ಯಕ್ರಮದ ಉದ್ದೇಶ ಎಂದರು.

ವೈಜ್ಞಾನಿಕವಾದ ಚಿಂತನೆಗಳನ್ನು ಮಾಡಿ ಅದನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಉತ್ತಮ ಜೀವನ ಮಾಡಬಹುದು, ಉತ್ತಮ ಜೀವನ ಎಂದರೆ ಶ್ರೀಮಂತನವಲ್ಲ ಉತ್ತಮ ಆರೋಗ್ಯ ಮತ್ತು ಆಹಾರ ಇವುಗಳನ್ನು ವೈಜ್ಞಾನಿಕ ನೆಲೆಯಲ್ಲಿ ಅಳವಡಿಸಿಕೊಂಡರೆ ಉತ್ತಮ ಜೀವನ ನಡೆಸಬಹುದು ಎಂದರು.

ಇಂತಹ ಮೇಳಗಳು ವಿದ್ಯಾರ್ಥಿಗಳಿಗೆ ಪ್ರಯೋಗಗಳನ್ನು ಮಾಡಲು, ಸಂಶೋಧನೆ ಮಾಡಲು ಮತ್ತು ತಮ್ಮ ಫಲಿತಾಂಶಗಳನ್ನು ಪ್ರದರ್ಶನಗಳ ರೂಪದಲ್ಲಿ ಪ್ರಸ್ತುತಪಡಿಸಲು ಅವಕಾಶ ನೀಡುತ್ತದೆ, ಇದರಿಂದಾಗಿ ವಿಜ್ಞಾನದ ಬಗ್ಗೆ ಅವರ ಆಸಕ್ತಿ ಹೆಚ್ಚುತ್ತದೆ ಮತ್ತು ಅವರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಯುತ್ತದೆ ಎಂದರು.

ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಅವಶ್ಯಕತೆ ಇದೆ. ವಿಜ್ಞಾನ ಭೋದನೆ ಮಾಡುವ ಶಿಕ್ಷಕರು ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ನಿಜವಾದ ಆಸಕ್ತಿ ಮೂಡಿಸಬೇಕು. ಮಕ್ಕಳಲ್ಲಿ ಕಲಿಯುವ ಮತ್ತು ಸಾಧ್ಯತೆಯ ಆಸಕ್ತಿ ಹೆಚ್ಚಿರುತ್ತದೆ, ಇದನ್ನು ಅರಿತು ವಿಜ್ಞಾನ ಶಿಕ್ಷಕರು ಬೋಧನೆ ಮಾಡಬೇಕು. ವಿಜ್ಞಾನದಲ್ಲಿ ನಿರಂತರ ಕಲಿಕೆ ಮತ್ತು ಆಸಕ್ತಿ ಇದೆ, ಇದಕ್ಕೆ ಯಾವುದೇ ವಯಸ್ಸಿನ ಮಿತಿ ಇಲ್ಲ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಶಿಕ್ಷಣ ಸಮಾಲೋಚಕ ರಾಮಚಂದ್ರ ಮಾತನಾಡಿ ವಿಜ್ಞಾನ ಮೇಳ ಎಂದರೆ ವಿದ್ಯಾರ್ಥಿಗಳು ವಿಜ್ಞಾನ ಕ್ಷೇತ್ರದಲ್ಲಿ ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ಪ್ರದರ್ಶಿಸುವ ಒಂದು ಕಾರ್ಯಕ್ರಮ ಎಂದರು.

ವಿಜ್ಞಾನಕ್ಕೆ ಸಂಬಂಧಿಸಿದ ವೈಜ್ಞಾನಿಕ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ವಿದ್ಯಾರ್ಥಿಗಳು ಪ್ರಾಯೋಗಿಕ ಯೋಜನೆಗಳ ಮೂಲಕ ವೈಜ್ಞಾನಿಕ ಪರಿಕಲ್ಪನೆಗಳನ್ನು ಪ್ರದರ್ಶಿಸಲು ಮತ್ತು ತಮ್ಮದೇ ಆದ ಸಂಶೋಧನೆಗಳನ್ನು ಮಾಡಲು ಅವಕಾಶ ಕಲ್ಪಿಸುತ್ತದೆ ಎಂದರು.

ವಿದ್ಯಾರ್ಥಿಗಳಲ್ಲಿ ಸೃಜನಾತ್ಮಕ ಚಿಂತನೆ, ಅನ್ವೇಷಣೆ ಮತ್ತು ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಜೊತೆಗೆ ಪ್ರಯತ್ಮದ ಗುರಿಯನ್ನು ಹೊಂದಿದೆ ಎಂದರು.

ವಿವಿಧ ಶಾಲೆಗಳಿಂದ ಬಂದಿದ್ದ ವಿದ್ಯಾರ್ಥಿಗಳು ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಪ್ರಕಾಶ್, ಕೇತನ್, ಶಿಕ್ಷಕ ವೃಂದ ಇದ್ದರು.