ಸಾರಾಂಶ
-ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಆರೋಗ್ಯ ಇಲಾಖೆಯಿಂದ ಪ್ರೌಢ ಶಾಲಾ ವಿಜ್ಞಾನ ಶಿಕ್ಷಕರಿಗೆ ತರಬೇತಿ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗಗಳ ಹತೋಟಿಗಾಗಿ ತಾಲೂಕಿನ ಎಲ್ಲಾ ಪ್ರೌಢ ಶಾಲಾ ವಿಜ್ಞಾನ ಶಿಕ್ಷಕರಿಗೆ ವಿಶೇಷ ತರಬೇತಿ ನೀಡಿ ಡೆಂಘೀ ರಾಯಬಾರಿ ಎಂಬ ಗೌರವ ಸ್ಥಾನ ನೀಡಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯಕುಮಾರ್ ತಿಳಿಸಿದರು.
ಶುಕ್ರವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆ ಆಶ್ರಯದಲ್ಲಿ ತಾಲೂಕಿನ ಪ್ರೌಢ ಶಾಲೆ ಗಳ ವಿಜ್ಞಾನ ಶಿಕ್ಷಕರಿಗೆ ಏರ್ಪಡಿಸಿದ್ದ ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗಗಳ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಪ್ರತಿ ನಿತ್ಯ ದಿನಪತ್ರಿಕೆಗಳಲ್ಲಿ, ಟಿ.ವಿ. ಮಾದ್ಯಮಗಳಲ್ಲಿ ಸಾಂಕ್ರಾಮಿಕ ರೋಗಗಳ ಬಗ್ಗೆ ತಿಳಿಯುತ್ತಿದ್ದೇವೆ. ಇದರ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯೊಂದಿಗೆ ಎಲ್ಲಾ ಇಲಾಖೆ ಗಳ ಸಹಕಾರ ಅಗತ್ಯವಾಗಿದೆ. ಆದ್ದರಿಂದ ತಾಲೂಕಿನ ಎಲ್ಲಾ ಪ್ರೌಢ ಶಾಲೆಗಳ ವಿಜ್ಞಾನ ಶಿಕ್ಷಕರನ್ನು ಒಗ್ಗೂಡಿಸಿ ಅವರಿಗೆ ವಿಶೇಷ ತರಬೇತಿ ಹಮ್ಮಿಕೊಂಡಿದ್ದೇವೆ. ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಡೆಂಘೀ, ಚಿಕನ್ ಗುನ್ಯಾ, ಫೈಲೇರಿಯಾ, ಮೆದಳು ಜ್ವರ, ಜಿಕ ವೈರಸ್ ಕಾಯಿಲೆಗಳನ್ನು ನಿಯಂತ್ರಿಸಲು ಆರೋಗ್ಯ ಇಲಾಖೆ ವಿಶೇಷವಾಗಿ ವಿನೂತನ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ ಎಂದರು.ಪ್ರಸ್ತುತ ಡೆಂಘೀ ಜ್ವರ ಎಲ್ಲಾ ಕಡೆ ವ್ಯಾಪಕವಾಗಿ ಹರಡುತ್ತಿದೆ. ಇದನ್ನು ನಿಯಂತ್ರಿಸಲು ಸಾರ್ವಜನಿಕರು, ಮಹಿಳೆಯರು, ವಿದ್ಯಾರ್ಥಿಗಳ ಸಹಕಾರ ಅಗತ್ಯ. ಮಕ್ಕಳು ತಮ್ಮ ಹೆಚ್ಚಿನ ಸಮಯವನ್ನು ಶಾಲೆಗಳಲ್ಲಿ ಕಳೆಯುತ್ತಾರೆ. ಡೆಂಘೀ ಉಂಟು ಮಾಡುವ ಈಡಿಸ್ ಎಂಬ ಹೆಣ್ಣು ಸೊಳ್ಳೆ ಹಗಲು ಹೊತ್ತು ಕಚ್ಚುವುದರಿಂದ ಡೇ ಬೈಟರ್ ಎಂದು ಕರೆಯುತ್ತಾರೆ ಎಂದರು.
ಸಭೆ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಆರ್.ಪುಷ್ಪ ಮಾತನಾಡಿ, ಆರೋಗ್ಯ ಹಾಗೂ ಶಿಕ್ಷಣ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಒಬ್ಬ ವಿದ್ಯಾರ್ಥಿ ವಿಶೇಷ ಸಾಧನೆ ಮಾಡಬೇಕಾದರೆ ಅವನಿಗೆ ಶಿಕ್ಷಣದೊಂದಿಗೆ ಆರೋಗ್ಯವೂ ಅಷ್ಟೇ ಮುಖ್ಯ. ಶಾಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಪಾಠ ಮಾಡುವ ಜತೆಗೆ ಅವರ ಆರೋಗ್ಯದ ಕಡೆಯೂ ಗಮನ ನೀಡಬೇಕು. ಕಾಯಿಲೆ ಬಂದ ನಂತರ ಚಿಕಿತ್ಸೆ ಮಾಡುವುದಕ್ಕಿಂತ ಖಾಯಿಲೆ ಬಾರದಂತೆ ನಿಯಂತ್ರಣ ಮಾಡಿ ಉತ್ತಮ ಸಮಾಜ ನಿರ್ಮಿಸೋಣ ಎಂದರು.ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಲ್.ಎಂ.ದರ್ಶನ್ ಡೆಂಘೀ ನಿಯಂತ್ರಣಕ್ಕೆ ಪ್ರೌಢ ಶಾಲೆ ಶಿಕ್ಷಕರಿಗೆ ತರಬೇತಿ ನೀಡಿದ್ದು ಅವರು ವಿದ್ಯಾರ್ಥಿಗಳಿಗೂ ಸಹ ಮಾಹಿತಿ ನೀಡಬೇಕು ಎಂದರು.
ಸರ್ಕಾರಿ ಆಸ್ಪತ್ರೆ ಆಪ್ತ ಸಮಾಲೋಚಕಿ ನಾಗಲತಾ ಪವನ್ ಅಸಾಂಕ್ರಾಮಿಕ ರೋಗಗಳ ಕುರಿತು, ತಾಲೂಕು ಹಿರಿಯ ಕ್ಷಯ ರೋಗ ಚಿಕಿತ್ಸಾ ಮೇಲ್ವೀಚಾರಕ ಪಿ.ಪವನಕರ್ ಕ್ಷಯ ರೋಗ ನಿಯಂತ್ರಣ ಕುರಿತು ಮಾತನಾಡಿದರು.ಅತಿಥಿಗಳಾಗಿ ತಾಲೂಕು ಶಿಕ್ಷಣ ಸಂಯೋಜಕಿ ಸಂಗೀತ, ಬಿ.ಆರ್.ಸಿ.ಸೇವ್ಯಾನಾಯಕ್, ಸಿಆರ್‌ಪಿಗಳಾದ ದೇವರಾಜ್, ರಾಜನಾಯಕ್, ಸರ್ಕಾರಿ ಆಸ್ಪತ್ರೆ ವ್ಯವಸ್ಥಾಪಕ ಕಿರಣ್, ಆರೋಗ್ಯ ಸುರಕ್ಷಣಾಧಿಕಾರಿ ಡೈಸಿ ಉಪಸ್ಥಿತರಿದ್ದರು.