ಪೊಲೀಸ್‌ ಇಲಾಖೆಯಲ್ಲಿ ಶೇ.25ರಷ್ಟು ಮಹಿಳಾ ಸಿಬ್ಬಂದಿ ನೇಮಕ: ಆಯುಕ್ತ

| Published : Mar 09 2024, 01:31 AM IST / Updated: Mar 09 2024, 03:23 PM IST

ಪೊಲೀಸ್‌ ಇಲಾಖೆಯಲ್ಲಿ ಶೇ.25ರಷ್ಟು ಮಹಿಳಾ ಸಿಬ್ಬಂದಿ ನೇಮಕ: ಆಯುಕ್ತ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರು ನಗರ ಪೊಲೀಸ್‌ ಇಲಾಖೆಯಲ್ಲಿ ಶೇ.25 ಮಹಿಳಾ ಸಿಬ್ಬಂದಿ ನೇಮಕಕ್ಕೆ ಯೋಜಿಸಲಾಗಿದೆ ಎಂದು ಆಯುಕ್ತ ದಯಾನಂದ್‌ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪೊಲೀಸ್ ಇಲಾಖೆಯಲ್ಲಿ ಶೇಕಡ 25ರಷ್ಟು ಮಹಿಳಾ ಮೀಸಲಾತಿ ಕಲ್ಪಿಸುವ ಸರ್ಕಾರದ ಆಶಯದಂತೆ ವಿಶೇಷ ಮುಂಬಡ್ತಿ ಕಾರ್ಯಕ್ರಮ ಹಮ್ಮಿಕೊಂಡು ಹುದ್ದೆ ನೀಡಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್‌ ಘೋಷಿಸಿದ್ದಾರೆ.

ಮೈಸೂರು ರಸ್ತೆಯ ನಗರ ಸಶಸ್ತ್ರ ಮೀಸಲು ಪಡೆ (ಸಿಎಆರ್‌)ಯ ಮೈದಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ‘ವಿಶೇಷ ಕವಾಯತಿನ’ಲ್ಲಿ ಗೌರವ ವಂದನೆ ಸ್ವೀಕರಿಸಿ ಆಯುಕ್ತರು ಮಾತನಾಡಿದರು.

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಶೇ.25ರಷ್ಟು ಮಹಿಳಾ ಮೀಸಲಾತಿಗೆ ರಾಜ್ಯ ಸರ್ಕಾರದ ಆಶಯವಾಗಿದೆ. ಅಂತೆಯೇ ನಗರ ಪೊಲೀಸ್ ಘಟಕದಲ್ಲಿ ಸಹ ಮುಂದಿನ ದಿನಗಳಲ್ಲಿ ಶೇ.25ರಷ್ಟು ಮಹಿಳಾ ಸಿಬ್ಬಂದಿ ನಿಯೋಜನೆಗೆ ವಿಶೇಷ ಬಡ್ತಿ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ಆಯುಕ್ತರು ಹೇಳಿದರು.

ಪ್ರಸುತ್ತ ಇಲಾಖೆಯಲ್ಲಿ ಶೇ.8ರಷ್ಟು ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಈ ಸಂಖ್ಯೆಯನ್ನು ಶೇ.25ಕ್ಕೆ ಹೆಚ್ಚಿಸಲು ಸರ್ಕಾರದ ಉದ್ದೇಶವಾಗಿದೆ. ಈ ವಿಷಯವನ್ನು ಗೃಹ ಸಚಿವರು ಪ್ರಸ್ತಾಪಿಸಿದ್ದು, ಮುಂದಿನ ದಿನಗಳಲ್ಲಿ ಮಹಿಳಾ ಸಿಬ್ಬಂದಿ ಹೆಚ್ಚಳಕ್ಕೆ ನೇಮಕಾತಿಗಳನ್ನು ಮಾಡಿಕೊಳ್ಳುವ ಆಶಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.

ಈ ಹಿಂದೆ ಟೈಪಿಂಗ್, ರಿಸಪ್ಷನ್ ಡೆಸ್ಕ್ ಮತ್ತು ಮಹಿಳಾ ಆರೋಪಿಗಳಿದ್ದಾಗ ಮಾತ್ರ ಮಹಿಳಾ ಸಿಬ್ಬಂದಿ ಬಳಕೆ ಮಾಡಲಾಗುತ್ತಿತ್ತು. ಆದರೀಗ ಇಲಾಖೆಯ ಎಲ್ಲ ಸ್ತರಗಳಲ್ಲೂ ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದು, ಪಿಸ್ತೂಲ್ ಹಿಡಿದುಕೊಂಡು ಅವರು ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಹೆಚ್ಚುವರಿ ಆಯುಕ್ತರಾದ ಸತೀಶ್ ಕುಮಾರ್‌, ರಮಣ ಗುಪ್ತ, ಜಂಟಿ ಆಯುಕ್ತ (ಸಂಚಾರ) ಹಾಗೂ ಎಂ.ಎನ್‌.ಅನುಚೇತ್‌, ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.ಮಹಿಳಾ ಸಿಬ್ಬಂದಿಗೆ ₹3.30 ಲಕ್ಷ ಬಹುಮಾನ

ಇದೇ ವೇಳೆ ಕವಾಯತ್‌ನಲ್ಲಿ ಭಾಗವಹಿಸಿದ್ದ ಒಟ್ಟು 10 ತಂಡಗಳ ಪ್ರತಿ ಸದಸ್ಯರಿಗೆ ತಲಾ ಒಂದು ಸಾವಿರ ರು.ನಂತೆ ₹3 ಲಕ್ಷ ಮತ್ತು ರಾಣಿ ಚೆನ್ನಮ್ಮ ಪಡೆಗೆ ವಿಶೇಷ ₹30 ಸಾವಿರ ಸೇರಿ ಒಟ್ಟು ₹3.30 ಲಕ್ಷ ನಗದು ಬಹುಮಾನವನ್ನು ಘೋಷಿಸಿ ಆಯುಕ್ತ ದಯಾನಂದ್‌ ಪ್ರಶಂಸನಾ ಪತ್ರಗಳನ್ನು ವಿತರಿಸಿದರು.