ವಿಪತ್ತು ನಿರ್ವಹಣಾ ತಂಡಗಳ ನೇಮಕ: ತುಷಾರ್‌ ಗಿರಿನಾಥ್‌

| Published : May 14 2024, 02:02 AM IST / Updated: May 14 2024, 07:15 AM IST

BBMP

ಸಾರಾಂಶ

ಮಳೆ ಸುರಿದಾಗ ಮರ ಬೀಳುವುದು, ಮನೆಗಳಿಗೆ ನೀರು ನುಗ್ಗುವುದು ಸೇರಿದಂತೆ ಇನ್ನಿತರ ಸಮಸ್ಯೆಗಳು ಎದುರಾದರೆ ತುರ್ತಾಗಿ ಪ್ರತಿಕ್ರಿಯಿಸಲು ಬಿಬಿಎಂಪಿಯ ಎಲ್ಲ 64 ಉಪವಿಭಾಗಗಳಿಗೂ ಪ್ರತ್ಯೇಕ ವಿಪತ್ತು ನಿರ್ವಹಣಾ ತಂಡಗಳನ್ನು ನೇಮಿಸಲಾಗುತ್ತಿದೆ ಎಂದು ತುಷಾರ್‌ ಹೇಳಿದರು.

 ಬೆಂಗಳೂರು :  ಮಳೆಗಾಲದಲ್ಲಿ ಎದುರಾಗುವ ಸಮಸ್ಯೆಗಳನ್ನು ನಿವಾರಿಸಲು ಎಲ್ಲ 64 ಉಪ ವಿಭಾಗಗಳಿಗೂ ಪ್ರತ್ಯೇಕ ವಿಪತ್ತು ನಿರ್ವಹಣಾ ತಂಡ ನಿಯೋಜಿಸುವ ಜೊತೆಗೆ ಈಗಾಗಲೇ ಗುರುತಿಸಿರುವ ಪ್ರವಾಹ ಉಂಟಾಗುವ 74 ಕಡೆಗಳಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದೊಂದು ವಾರದಿಂದ ನಗರದಲ್ಲಿ ಮಳೆ ಹೆಚ್ಚಾಗಿದ್ದರೂ ದೊಡ್ಡ ಅನಾಹುತಗಳು ಸಂಭವಿಸಿಲ್ಲ. ಆದರೂ, ಮಳೆ ಸುರಿದಾಗ ಮರ ಬೀಳುವುದು, ಮನೆಗಳಿಗೆ ನೀರು ನುಗ್ಗುವುದು ಸೇರಿದಂತೆ ಇನ್ನಿತರ ಸಮಸ್ಯೆಗಳು ಎದುರಾದರೆ ತುರ್ತಾಗಿ ಪ್ರತಿಕ್ರಿಯಿಸಲು ಬಿಬಿಎಂಪಿಯ ಎಲ್ಲ 64 ಉಪವಿಭಾಗಗಳಿಗೂ ಪ್ರತ್ಯೇಕ ವಿಪತ್ತು ನಿರ್ವಹಣಾ ತಂಡಗಳನ್ನು ನೇಮಿಸಲಾಗುತ್ತಿದೆ. ಈ ತಂಡದಲ್ಲಿ ಬಿಬಿಎಂಪಿ, ಜಲಮಂಡಳಿ. ಅಗ್ನಿ ಶಾಮಕ ದಳ, ಬೆಸ್ಕಾಂ ಸೇರಿದಂತೆ ಇನ್ನಿತರ ಇಲಾಖೆಗಳ ಸಿಬ್ಬಂದಿಗಳನ್ನು ನೇಮಿಸಲಾಗುತ್ತದೆ ಎಂದರು.

ನಗರದಲ್ಲಿ 198 ಪ್ರವಾಹ ಪೀಡಿತ ಪ್ರದೇಶಗಳಿದ್ದು, ಈ ಪೈಕಿ 124 ಕಡೆಗಳಲ್ಲಿ ಶಾಶ್ವತ ಪರಿಹಾರ ಕ್ರಮಗಳನ್ನು ಕೊಳ್ಳಲಾಗಿದೆ. ಆ ಸ್ಥಳಗಳಿಗೆ ಕಾಲಕಾಲಕ್ಕೆ ವಲಯ ಆಯುಕ್ತರ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಮಸ್ಯೆಗಳಿದ್ದರೆ ಪರಿಹರಿಸುತ್ತಿದ್ದಾರೆ. ಉಳಿದ 74 ಪ್ರದೇಶಗಳಲ್ಲಿ ತಾತ್ಕಾಲಿಕ ಪರಿಹಾರ ವ್ಯವಸ್ಥೆ ಮಾಡಲಾಗಿದೆ. ಮಳೆಗಾಲದಲ್ಲಿ ಈ ಪ್ರದೇಶಗಳಲ್ಲಿನ ರಾಜಕಾಲುವೆಗಳಲ್ಲಿ ಹೂಳು ತೆಗೆಯಲು ಒಂದು ಜೆಸಿಬಿ ಮತ್ತು ಅಕ್ಕಪಕ್ಕದ ಬಡಾವಣೆಗಳಲ್ಲಿ ಶೇಖರಣೆಯಾಗುವ ನೀರನ್ನು ಹೊರಹಾಕಲು ಪಂಪ್‌ಸೆಟ್‌ ಹಾಗೂ ಸಿಬ್ಬಂದಿಯನ್ನು ನೇಮಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಆ ಪ್ರದೇಶಗಳಲ್ಲೂ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.-

ಮಳೆ ಸಮಸ್ಯೆ ತಡೆಗೆ ₹77.50 ಕೋಟಿ ನಿಧಿ

ಬಿಬಿಎಂಪಿ ವ್ಯಾಪ್ತಿಯ ಎಲ್ಲ 225 ವಾರ್ಡ್‌ಗಳಲ್ಲಿನ ಚರಂಡಿಗಳಲ್ಲಿ ಹೂಳು ತೆಗೆಯುವುದು ಸೇರಿ ಮಳೆಗಾಲದಲ್ಲಿ ಸಮಸ್ಯೆ ಎದುರಾಗದಂತೆ ನಿರ್ವಹಣಾ ಕಾರ್ಯ ಕೈಗೊಳ್ಳಲು ತಲಾ 30 ಲಕ್ಷ ರು.ನಂತೆ 67.50 ಕೋಟಿ ರು. ನೀಡಲಾಗಿದೆ. ಜತೆಗೆ ಈ ಬಾರಿ ನಗರದಲ್ಲಿ ವಿಪತ್ತು ನಿರ್ವಹಣೆಗಾಗಿ ಬ್ರ್ಯಾಂಡ್‌ ಬೆಂಗಳೂರು ಯೋಜನೆ ಅಡಿಯಲ್ಲಿ ಹೆಚ್ಚುವರಿಯಾಗಿ 10 ಕೋಟಿ ರು. ಮೀಸಲಿಡಲಾಗಿದೆ. ಒಟ್ಟಾರೆ ಮಳೆಗಾಲದಲ್ಲಿ ಉಂಟಾಗಲಿರುವ ಸಮಸ್ಯೆಗೆ ಮುನ್ನೆಚ್ಚರಿಕಾ ಕ್ರಮ ಹಾಗೂ ಪರಿಹಾರ ಕಾರ್ಯಕ್ಕೆ 77.50 ಕೋಟಿ ರು. ನೀಡಲಾಗಿದೆ ಎಂದು ತುಷಾರ್‌ ಗಿರಿನಾಥ್‌ ಹೇಳಿದರು.

ಮಳೆಯಿಂದ ಬೆಸ್ಕಾಂಗೆ 3.30 ಕೋಟಿ ರು. ನಷ್ಟ  ಬೆಂಗಳೂರು: ಕಳೆದ ಎರಡು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಬೆಸ್ಕಾಂ ವ್ಯಾಪ್ತಿಯಲ್ಲಿ 800ಕ್ಕೂ ಹೆಚ್ಚು ವಿದ್ಯುತ್‌ ಕಂಬ, 160ಕ್ಕೂ ಹೆಚ್ಚು ವಿದ್ಯುತ್‌ ಪರಿವರ್ತಕಗಳಿಗೆ ಹಾನಿ ಉಂಟಾಗುವ ಮೂಲಕ 3.30 ಕೋಟಿ ರು. ನಷ್ಟ ಉಂಟಾಗಿದೆ.

ಬೆಂಗಳೂರು ಸೇರಿದಂತೆ ಸುತ್ತಮುತ್ತ ಕಳೆದ ಎರಡು ವಾರದಿಂದ ತೀವ್ರ ಮಳೆಯಾಗುತ್ತಿದೆ. ಹೀಗಾಗಿ ಬೆಂಗಳೂರು ನಗರ ಸುತ್ತಮುತ್ತ 881 ವಿದ್ಯುತ್‌ ಕಂಬ ಹಾನಿಗೆ ಒಳಗಾಗಿದೆ. ಇದರಿಂದ 73.24 ಲಕ್ಷ ರು. ನಷ್ಟ ಉಂಟಾಗಿದ್ದು, ಸಿಡಿಲು ಮತ್ತಿತರ ಕಾರಣಗಳಿಗೆ 160 ವಿದ್ಯುತ್‌ ಪರಿವರ್ತಕ (ಟಿ.ಸಿ) ಹಾಳಾಗಿದೆ. ಇದರಿಂದ ಬರೋಬ್ಬರಿ 2.19 ಕೋಟಿ ರು. ನಷ್ಟ ಉಂಟಾಗಿದೆ ಎಂದು ಬೆಸ್ಕಾಂ ಮೂಲಗಳು ತಿಳಿಸಿವೆ.ಇದಲ್ಲದೆ ವಿದ್ಯುತ್‌ ಮಾರ್ಗ ಮತ್ತಿತರ ಹಾನಿಯಿಂದಾಗಿ 57.24 ಲಕ್ಷ ರು. ನಷ್ಟ ಉಂಟಾಗಿದೆ. ಒಟ್ಟಾರೆ ಕಳೆದ 13 ದಿನಗಳಿಂದ ಮಳೆಯಿಂದಾಗಿ 3.30 ಕೋಟಿ ರು. ನಷ್ಟು ಉಂಟಾಗಿರುವುದಾಗಿ ಬೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.