ಪಟ್ಟಣದ ಇತಿಹಾಸ ಪ್ರಸಿದ್ಧ ಪಂಚಗ್ರಹ ಹಿರೇಮಠದ ನೂತನ ಪೀಠಾಧಿಕಾರಿಗಳ ನೇಮಕ ಕುರಿತು ಎರಡು ಗುಂಪುಗಳ ನಡುವೆ ಉಂಟಾಗಿದ್ದ ಭಿನ್ನಾಭಿಪ್ರಾಯ ಕಾಶಿ ಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಶ್ರೀಗಳ ಸಾನ್ನಿಧ್ಯದಲ್ಲಿ ಕೊನೆಗೊಂಡಿದೆ.
ನವಲಗುಂದ: ಪಟ್ಟಣದ ಇತಿಹಾಸ ಪ್ರಸಿದ್ಧ ಪಂಚಗ್ರಹ ಹಿರೇಮಠದ ನೂತನ ಪೀಠಾಧಿಕಾರಿಗಳ ನೇಮಕ ಕುರಿತು ಎರಡು ಗುಂಪುಗಳ ನಡುವೆ ಉಂಟಾಗಿದ್ದ ಭಿನ್ನಾಭಿಪ್ರಾಯ ಕಾಶಿ ಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಶ್ರೀಗಳ ಸಾನ್ನಿಧ್ಯದಲ್ಲಿ ಕೊನೆಗೊಂಡಿದೆ. ಎಲ್ಲ ಭಕ್ತರು ಒಂದಾಗಿ ಮೇ 12ರಂದು ನೂತನ ಶ್ರೀಗಳ ಪಟ್ಟಾಧಿಕಾರ ನಡೆಸಲು ತೀರ್ಮಾನಿಸಿದ್ದಾರೆ.
ಹುಬ್ಬಳ್ಳಿ ನವನಗರದ ಕಾಶಿ ಶಾಖಾಮಠದಲ್ಲಿ ನಡೆದ ಇಲ್ಲಿನ ಪಂಚಗ್ರಹ ಹಿರೇಮಠದಲ್ಲಿನ ಭಿನ್ನಾಭಿಪ್ರಾಯದ ಕುರಿತಂತೆ ಸಭೆಯಲ್ಲಿ ಮಾತನಾಡಿದ ಡಾ. ಚಂದ್ರಶೇಖರ ಶಿವಾಚಾರ್ಯರು, ಕೆಲ ಊಹಾಪೋಹಗಳಿಂದಾಗಿ ಭಕ್ತರಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಿದೆ. ತಾಲೂಕಿನ ಎಲ್ಲ ಭಕ್ತರ ಸಮ್ಮುಖದಲ್ಲಿ ಎಲ್ಲವನ್ನೂ ಚರ್ಚಿಸಿ ಭಿನ್ನಾಭಿಪ್ರಾಯಗಳಿಗೆ ತೆರೆ ಎಳೆಯಲಾಗಿದೆ. ಭಕ್ತರು ಶ್ರೀ ಮಠದ ಪರಂಪರೆಯಂತೆ ನೂತನ ಶ್ರೀಗಳ ಪೀಠಾಧಿಕಾರಿಗಳ ನೇಮಕ ಮಾಡಲು ಸಂತಸದಿಂದ ಒಪ್ಪಿಕೊಂಡಿದ್ದಾರೆ. ಇದು ಸಂತಸಕರ ಸಂಗತಿ ಎಂದು ತಿಳಿಸಿದರು.ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ಕಾಶಿ ಜಗದ್ಗುರುಗಳ ಮಾರ್ಗದರ್ಶನದಂತೆ ಎಲ್ಲರೂ ಒಗ್ಗೂಡಿ ಪಂಚಗ್ರಹ ಹಿರೇಮಠಕ್ಕೆ ನೂತನ ಶ್ರೀಗಳನ್ನು ನಿಗದಿಪಡಿಸಿದ ದಿನಾಂಕದಂದು ಪೀಠಾರೋಹಣ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದರು.
ಇದಕ್ಕೂ ಮೊದಲು ಶಾಸಕ ಎನ್.ಎಚ್. ಕೋನರಡ್ಡಿ, ಮಾಜಿ ಶಾಸಕ ಡಾ. ಆರ್.ಬಿ. ಶಿರಿಯಣ್ಣವರ, ಬಾಪುಗೌಡ ಪಾಟೀಲ, ವಿಜಯ ಕುಲಕರ್ಣಿ ಅವರು ಕಾಶಿ ಜಗದ್ಗುರುಗಳಿಗೆ ದೂರವಾಣಿ ಕರೆ ಮಾಡಿ ಜಗದ್ಗುರುಗಳು ತೆಗೆದುಕೊಂಡ ನಿರ್ಣಯಕ್ಕೆ ಬದ್ದರಾಗಿರುವ ಭರವಸೆ ನೀಡಿದರು.ಪಂಚಗ್ರಹ ಹಿರೇಮಠದ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ವೀರಬಸವ ಶ್ರೀಗಳು, ಕಾಶಿ ಶಾಖಾಮಠದ ಡಾ. ರಾಜಶೇಖರ ಸ್ವಾಮೀಜಿ, ತಹಸೀಲ್ದಾರ್ ಸುಧೀರ ಸಾಹುಕಾರ, ಸಿಪಿಐ ರವಿಕುಮಾರ ಕಪ್ಪತ್ತನವರ, ಹಿರಿಯರಾದ ಅಂದಾನಯ್ಯ ಹಿರೇಮಠ, ಅಣ್ಣಪ್ಪ ಬಾಗಿ, ಬಂಗಾರೇಶ ಹಿರೇಮಠ, ಪಾಂಡಪ್ಪ ಕೋನರಡ್ಡಿ, ಸಿದ್ದಲಿಂಗಯ್ಯ ಹಿರೇಮಠ, ಯಲ್ಲಪ್ಪ ಭೋವಿ, ಶ್ರೀಶೈಲ ಮೂಲಿಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.