ಸಾರಾಂಶ
ಮಡಿಕೇರಿ ಹಾಗೂ ಸಕಲೇಶಪುರ ವ್ಯಾಪ್ತಿಯಲ್ಲಿ ಮಳೆಯಿಂದಾಗಿ ಹಾನಿಗೊಳಗಾಗಿದ್ದ ವಿದ್ಯುತ್‌ಕಂಬಗಳು ಹಾಗೂ ಪರಿವರ್ತಕಗಳು, ವಿದ್ಯುತ್‌ಮಾರ್ಗಗಳನ್ನು ಬದಲಾಯಿಸಿ ವಿದ್ಯುತ್‌ಪೂರೈಕೆ ಸುಗಮಗೊಳಿಸಿದ್ದ 500 ಹೆಚ್ಚು ಸಿಬ್ಬಂದಿಗೆ ಪ್ರಶಂಸಾ ಪತ್ರ ಹಾಗೂ ಉಡುಗೊರೆ ನೀಡಲಾಯಿತು.
ಕನ್ನಡಪ್ರಭ ವಾರ್ತೆ ಮೈಸೂರು
ವಿಜಯನಗರ 2ನೇ ಹಂತದಲ್ಲಿರುವ ಮೈಸೂರಿನ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ (ಸೆಸ್ಕ್) ಪ್ರಧಾನ ಕಚೇರಿಯಲ್ಲಿ ಗುರುವಾರ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ವಿದ್ಯುತ್‌ಸೋರಿಕೆ ತಡೆ, ಮಳೆಯಲ್ಲೂ ದುರಸ್ತಿ ಕಾರ್ಯ ಪೂರೈಸಿದ ಸೆಸ್ಕ್ ಸಿಬ್ಬಂದಿಗೆ ನಿಗಮದ ಅಧ್ಯಕ್ಷರಾದ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಪ್ರಶಂಸಾ ಪತ್ರ ವಿತರಿಸಿದರು.ಮಡಿಕೇರಿ ಹಾಗೂ ಸಕಲೇಶಪುರ ವ್ಯಾಪ್ತಿಯಲ್ಲಿ ಮಳೆಯಿಂದಾಗಿ ಹಾನಿಗೊಳಗಾಗಿದ್ದ ವಿದ್ಯುತ್‌ಕಂಬಗಳು ಹಾಗೂ ಪರಿವರ್ತಕಗಳು, ವಿದ್ಯುತ್‌ಮಾರ್ಗಗಳನ್ನು ಬದಲಾಯಿಸಿ ವಿದ್ಯುತ್‌ಪೂರೈಕೆ ಸುಗಮಗೊಳಿಸಿದ್ದ 500 ಹೆಚ್ಚು ಸಿಬ್ಬಂದಿಗೆ ಪ್ರಶಂಸಾ ಪತ್ರ ಹಾಗೂ ಉಡುಗೊರೆ ನೀಡಲಾಯಿತು.
ಸೆಸ್ಕ್‌ವ್ಯಾಪ್ತಿಯಲ್ಲಿ ಭಾರೀ ಮಳೆಯಿಂದಾಗಿ ಉಂಟಾಗಿದ್ದ ಪ್ರವಾಹ ಪರಿಸ್ಥಿತಿ ಸಂದರ್ಭದಲ್ಲಿ ಮಡಿಕೇರಿ ಹಾಗೂ ಸಕಲೇಶಪುರ ವ್ಯಾಪ್ತಿಯಲ್ಲಿ ಸಾಕಷ್ಟು ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದವು. ಈ ಹಿನ್ನೆಲೆಯ ಕೂಡಲೇ ಕಾರ್ಯಪ್ರವೃತ್ತರಾದ ಸೆಸ್ಕ್ ಹಿರಿಯ ಅಧಿಕಾರಿಗಳು ದುರಸ್ತಿ ಕಾರ್ಯಕ್ಕೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿ ಪರಿಸ್ಥಿತಿ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದರು.ವಿದ್ಯುತ್ ಸೋರಿಕೆ ತಡೆ ಯಶಸ್ವಿ:
ಮಡಿಕೇರಿ ಹಾಗೂ ಸುತ್ತಮುತ್ತಲೂ ಉಂಟಾಗುತ್ತಿದ್ದ ವಿದ್ಯುತ್ ಸೋರಿಕೆ ತಡೆಯುವಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿ ತಂಡಕ್ಕೂ ಪ್ರಶಂಸಾ ಪತ್ರವನ್ನು ನೀಡಲಾಯಿತು.ವಿದ್ಯುತ್ ಸೋರಿಕೆ ತಡೆಗಾಗಿ ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕರಾದ ಶೀಲಾ, ತಾಂತ್ರಿಕ ವಿಭಾಗದ ನಿರ್ದೇಶಕ ಮುನಿಗೋಪಾಲ್ ರಾಜ್ ಅವರು, ತಂಡವನ್ನು ನಿಯೋಜಿಸಿ 30 ದಿನಗಳೊಳಗೆ ಕೆಲಸ ಪೂರ್ಣಗೊಳಿಸುವ ಗುರಿ ನೀಡಿದ್ದರು. ಈ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸುವಲ್ಲಿ ಯಶಸ್ವಿಯಾದ ತಂಡವನ್ನು ಇದೇ ವೇಳೆ ಅಭಿನಂದಿಸಿ, ಪ್ರಶಂಸನಾ ಪತ್ರ ನೀಡಲಾಯಿತು.
ಅಲ್ಲದೇ ರೈತರ ಐಪಿ ಸೆಟ್ ಗಳ ಆರ್‌ಆರ್‌ನಂಬರ್ ಗೆ ಆಧಾರ್ ಜೋಡಣೆ ಮಾಡುವ ಕಾರ್ಯದಲ್ಲಿ ರಾಜ್ಯದ ಇತರೆ ವಿದ್ಯುತ್ ಸರಬರಾಜು ನಿಗಮಗಳಿಗಿಂತಲೂ ಉತ್ತಮವಾಗಿ ಕೆಲಸ ಮಾಡಿರುವ ಸೆಸ್ಕ್ ಸಿಬ್ಬಂದಿಗೂ ಪ್ರಶಂಸಾ ಪತ್ರವನ್ನು ವಿತರಿಸಲಾಯಿತು.ಇದಕ್ಕೂ ಮುನ್ನ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಶೀಲಾ ಅವರು ಧ್ವಜಾರೋಹಣ ನೆರವೇರಿಸಿದರು.