ಅತಿವೃಷ್ಟಿ ಸಂದರ್ಭದಲ್ಲಿ ಸಹಾಯಕ್ಕಾಗಿ ಕಂಟ್ರೋಲ್ ರೂಂ ತೆರೆಯಲಾಗುತ್ತದೆ. ಮುಳುಗು ತಜ್ಞರು, ಉರಗ ತಜ್ಞರು, ಅಗ್ನಿಶಾಮಕ ಇಲಾಖೆಯೊಂದಿಗೆ ಸಂಪರ್ಕ ಸಾಧಿಸಿದ್ದು ಬೋಟ್ ಮತ್ತಿತರ ವಸ್ತು ಸಂಗ್ರಹಿಸಲು ತಿಳಿಸಲಾಗಿದೆ
ಕನ್ನಡಪ್ರಭ ವಾರ್ತೆ ಕೊಪ್ಪ
ನವೀಕರಿಸಬಹುದಾದ ಇಂಧನ ನಿಗಮದ ಅಧ್ಯಕ್ಷನಾದ ಮೇಲೆ ನಾನು ಕೊಪ್ಪಕ್ಕೆ ₹೧.೧೦ಕೋಟಿ ಸೇರಿ ಕ್ಷೇತ್ರಕ್ಕೆ ₹೫ ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದೇನೆ. ಕ್ಷೇತ್ರದಲ್ಲಿ ಬಹುತೇಕ ಸರ್ಕಾರಿ ಕಟ್ಟಡಗಳು ಸುಸಜ್ಜಿತವಾಗಿ ನಿರ್ಮಾಣಗೊಂಡಿದೆ. ಅಗತ್ಯ ಅಭಿವೃದ್ಧಿ ಕಾರ್ಯಗಳನ್ನು ಅಧಿಕಾರಿಗಳು ಗಮನಕ್ಕೆ ತಂದಲ್ಲಿ ಸೂಕ್ತ ಕ್ರಮ ವಹಿಸಲಾಗುವುದು ಎಂದು ಶೃಂಗೇರಿ ಕ್ಷೇತ್ರದ ಶಾಸಕರು ಹಾಗೂ ಕೆಆರ್‌ಡಿಇಎಲ್ ಅಧ್ಯಕ್ಷ ಟಿ.ಡಿ.ರಾಜೇಗೌಡ ಹೇಳಿದರು.ಮಂಗಳವಾರ ಕೊಪ್ಪ ತಾಪಂ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ವೇ ವರದಿ ಬಾರದೆ ಹಕ್ಕುಪತ್ರ ನೀಡಲು ಸಾಧ್ಯವಾಗುತ್ತಿಲ್ಲ. ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೇ ಶೀಘ್ರವೇ ಆರಂಭಿಸಬೇಕು. ಸ್ಥಳೀಯರ ಗಮನಕ್ಕೆ ತರದೇ ಜಂಟಿ ಸರ್ವೇ ಮಾಡಬಾರದು. ಶಾಲೆ, ರಸ್ತೆ, ಸಾರ್ವಜನಿಕ ಆಸ್ತಿ ಜಾಗ, ಅರಣ್ಯ ವ್ಯಾಪ್ತಿಯಿಂದ ಕೈಬಿಡಬೇಕು ಎಂದರು.
ತಹಸೀಲ್ದಾರ್ ಮಂಜುಳಾ ಬಿ. ಹೆಗಡಾಳ ಮಾತನಾಡಿ, ಫಾರಂ ನಂ.೫೩ಕ್ಕೆ ಸಂಬಂಧಿಸಿದಂತೆ ೩೫೫ ಪ್ರಕರಣಗಳನ್ನು ಅರಣ್ಯ ಇಲಾಖೆ ಅಭಿಪ್ರಾಯಕ್ಕೆ ಕಳುಹಿಸಲಾಗಿದೆ. ೯೪ಸಿಗೆ ಸಂಬಂಧಿಸಿದ ೨೪ ಕಡತಗಳಿಗೆ ಕ್ಲಿಯರೆನ್ಸ್ ಸಿಕ್ಕಿದ್ದು ಶೀಘ್ರದಲ್ಲಿಯೇ ಹಕ್ಕುಪತ್ರ ವಿತರಿಸಲಾಗುವುದು ಎಂದರು.ಅತಿವೃಷ್ಟಿ ಸಂದರ್ಭದಲ್ಲಿ ಸಹಾಯಕ್ಕಾಗಿ ಕಂಟ್ರೋಲ್ ರೂಂ ತೆರೆಯಲಾಗುತ್ತದೆ. ಮುಳುಗು ತಜ್ಞರು, ಉರಗ ತಜ್ಞರು, ಅಗ್ನಿಶಾಮಕ ಇಲಾಖೆಯೊಂದಿಗೆ ಸಂಪರ್ಕ ಸಾಧಿಸಿದ್ದು ಬೋಟ್ ಮತ್ತಿತರ ವಸ್ತು ಸಂಗ್ರಹಿಸಲು ತಿಳಿಸಲಾಗಿದೆ. ೧೮೦೮ ರೈತರ ಪೈಕಿ ₹೨ ಕೋಟಿಗೂ ಅಧಿಕ ಆರ್ಥಿಕ ನಷ್ಟವುಂಟಾಗಿದೆ. ಅತಿವೃಷ್ಟಿ ಮುನ್ನೆಚ್ಚರಿಕೆ ಕ್ರಮವಾಗಿ ಕಳೆದ ತಿಂಗಳು ಪೂರ್ವಭಾವಿ ಸಭೆ ನಡೆಸಲಾಗಿದೆ. ಪ್ರಸ್ತುತ ವರ್ಷದಲ್ಲಿ ಅತಿವೃಷ್ಟಿಯಿಂದ ೫ ಮನೆಗಳಿಗೆ ಹಾನಿಯಾಗಿದ್ದು ಈ ಪೈಕಿ ೪ ಮನೆಗಳಿಗೆ ಪರಿಹಾರ ನೀಡಲಾಗಿದೆ. ನ.ರಾ.ಪುರದಲ್ಲಿ ಮರ ಬಿದ್ದು ಮೃತಪಟ್ಟ ಕೊಪ್ಪದ ಮಹಿಳೆಗೆ ಪರಿಹಾರ ವಿತರಿಸಲಾಗಿದೆ ಎಂದರು.
ಶಾಸಕ ರಾಜೇಗೌಡ ಮಾತನಾಡಿ, ಅತಿವೃಷ್ಟಿ ಸಮಸ್ಯೆ ಎದುರಿಸಲು ತಹಸೀಲ್ದಾರ್ ಖಾತೆಯಲ್ಲಿ ₹೪೨ ಲಕ್ಷ ಅನುದಾನವಿದ್ದು ಜಿಲ್ಲಾಧಿಕಾರಿಗಳ ಖಾತೆಯಲ್ಲೂ ಅತಿವೃಷ್ಟಿಗೆ ಸಂಬಂಧಿಸಿದ ಅನುದಾನವಿದೆ ಎಂದರು. ಹಾವು ಕಚ್ಚಿ ಹೆಚ್ಚಿನ ಚಿಕಿತ್ಸೆಗೆ ತೀರ್ಥಹಳ್ಳಿ ಕಡೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆಯೇ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎನ್ನುವ ದೂರು ಬಂದಿದೆ. ತಾಲೂಕು ಆಸ್ಪತ್ರೆಯಲ್ಲಿ ಎಲ್ಲಾ ಚಿಕಿತ್ಸಾ ಸೌಲಭ್ಯಗಳು ದೊರಕುತ್ತಿರುವಂತಿರಬೇಕು ಎಂದರು.ಆಸ್ಪತ್ರೆ ಬಳಿ ಶವಾಗಾರಕ್ಕೆ ತೆರಳಲು ರಸ್ತೆಯಿಲ್ಲ. ಆಸ್ಪತ್ರೆ ವಾರ್ಡ್‌ಗಳಲ್ಲಿ ಫ್ಯಾನ್ ಸರಿಯಿಲ್ಲದೆ ರೋಗಿಗಳು ಮನೆಯಿಂದ ಫ್ಯಾನ್ ತಂದು ಬಳಸುತ್ತಿದ್ದಾರೆ ಎಂದು ಸಭೆ ಗಮನ ಸೆಳೆದರು.
ಇದಕ್ಕೆ ಉತ್ತರಿಸಿದ ಆಡಳಿತ ವೈದ್ಯಾಧಿಕಾರಿ ಸಂದೀಪ್ ಆಸ್ಪತ್ರೆ ವಾರ್ಡ್‌ಗಳಲ್ಲಿ ಫ್ಯಾನ್ ಸುಸ್ಥಿತಿಯಲ್ಲಿದೆ ಎಂದಾಗ ಶಾಸಕರು ಮಾತನಾಡಿ, ಫ್ಯಾನ್ ಸುಸ್ಥಿತಿಯಲ್ಲಿದ್ದರೆ ರೋಗಿಗಳು ಮನೆ ಫ್ಯಾನನ್ನು ತಂದು ಯಾಕೆ ಬಳಸುತ್ತಾರೆ? ಎಂದ ಅವರು ಸೂಕ್ತ ಕ್ರಮವಹಿಸಲು ತಿಳಿಸಿದರು. ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.