ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ಸರ್ಕಾರ ಹನೂರನ್ನು ಬರ ಪೀಡಿತ ತಾಲೂಕು ಎಂದು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಜಾನುವಾರುಗಳಿಗೆ ಮೇವು ಸರಬರಾಜು ಟೆಂಡರ್ ಕರೆಯಲಾಗಿದ್ದು, ಜಾನುವಾರಗಳ ಸಂಖ್ಯೆ ಪಟ್ಟಿ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ಗುರುಪ್ರಸಾದ್ ತಿಳಿಸಿದರು.ತಹಿಸೀಲ್ದಾರ್ ಕಚೇರಿಯಲ್ಲಿ ರೈತ ಸಂಘಟನೆಯೊಂದಿಗೆ ಮಾತನಾಡಿ, ಸರ್ಕಾರದ ಸೂಚನೆಯಂತೆ ಬರಪೀಡಿತ ಪ್ರದೇಶವೆಂದು ಘೋಷಿಸಿದ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಗೆ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಭೇಟಿ ನೀಡಿಲಾಗಿದ್ದು, ಕಂದಾಯ ಇಲಾಖೆ ಹಾಗೂ ಪಂಚಾಯತ್ ರಾಜ್ ಇಲಾಖೆ ಪಶು ಸಂಗೋಪನ ಇಲಾಖೆ ಅಧಿಕಾರಿಗಳ ತಂಡ ಜಂಟಿ ಸರ್ವೇ ನಡೆಸಿದೆ ಎಂದರು.
ಗ್ರಾಮಗಳಲ್ಲಿನ ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಮೇವು ವಿತರಿಸಲು ಕ್ರಮ ಕೈಗೊಳ್ಳಲಾಗಿದ್ದು, ಕುಡಿವ ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿಯೂ ಸಹ ಪಟ್ಟಿ ಮಾಡಿ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ. ಜೊತೆಗೆ ಜಾನುವಾರುಗಳ ಮೇವು ಸರಬರಾಜು ಮಾಡಲು ಟೆಂಡರ್ ಪ್ರಕ್ರಿಯೆ ಮುಗಿದಿದ್ದು ತಾಲೂಕಿನ ಕೆಲವು ಗ್ರಾಮಗಳಲ್ಲಿ ಗೋಶಾಲೆ ತೆರೆದು ಮೇವು ವಿತರಣೆ ಮಾಡಲಾಗಿದೆ. ಇನ್ನು ಬೇಡಿಕೆ ಬರುವ ಗ್ರಾಮಗಳ ಪಟ್ಟಿ ಮಾಡಿ ನಂತರ ಮೇವು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.ಜಾನುವಾರುಗಳ ಸಂಖ್ಯೆ ಅನುಗುಣವಾಗಿ ಮೇವು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗಿದೆ ಮಳೆ ಇಲ್ಲದೆ ಸಮಸ್ಯೆ ಆಗಿರುವುದರಿಂದ ಜಂಟಿಯಾಗಿ ಅಧಿಕಾರಿಗಳ ತಂಡ ಭೇಟಿ ನೀಡಿ ಮೇವು ಸರಬರಾಜು ಮಾಡಲಾಗುತ್ತಿದೆ. ರಾಜ್ಯದಲ್ಲಿನ ಅಧಿಕಾರಿಗಳೇ ಪ್ರತಿ ಜಾನುವಾರಗಳಿಗೆ ಇಂತಿಷ್ಟು ಮೇವು ಸರಬರಾಜು ಮಾಡಬೇಕು ಎಂದು ತಿಳಿಸಿದ್ದಾರೆ. ಹೀಗಾಗಿ ಹೆಚ್ಚುವರಿ ಮೇವು ನೀಡಲು ಡೀಸಿಗೆ ನೀವು ನೀಡಿರುವ ಹೇಳಿಕೆ ವರದಿಯನ್ನು ಸಲ್ಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ರೈತರು ಏನೇ ಸಮಸ್ಯೆಗಳಿದ್ದರೂ ನೇರವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಬೇಕು. ಚುನಾವಣೆ ನಂತರ ಜಾನುವಾರುಗಳ ಮೇವು ಸರಬರಾಜು ಮತ್ತು ಕುಡಿಯುವ ನೀರಿನ ವ್ಯವಸ್ಥೆಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ರೈತರಿಗೆ ಭರವಸೆ ನೀಡಿದರು.
ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರ್ ಪ್ರಕಾಶ್ ಮಾತನಾಡಿ, ತಾಲೂಕಿನಲ್ಲಿ ಯಾವುದೇ ಗ್ರಾಮ ಇರಲಿ ಪಟ್ಟಿ ಮಾಡಿ ಜಾನುವಾರುಗಳ ಅನುಗುಣವಾಗಿ ನೀಡುತ್ತಿರುವ ಮೇವು 6 ಕೆಜಿ ಸಾಲದು ಹೀಗಾಗಿ ಪ್ರತಿ ಜಾನುವಾರುಗೆ 15 ಕೆಜಿ ಮೇವು ಸರಬರಾಜು ಮಾಡಬೇಕು ಎಂದು ಒತ್ತಾಯಿಸಿದರು. ಇದೇ ಸಂದರ್ಭದಲ್ಲಿ ಹನೂರು ತಾಲೂಕು ಘಟಕದ ಅಧ್ಯಕ್ಷ ಚಂಗಡಿ ಕರಿಯಪ್ಪ, ರೈತ ಮುಖಂಡರಾದ ಶ್ರೀನಿವಾಸ್ ಈರಣ್ಣ ಗೌಡ್ರು ಮತ್ತು ಶಾಂತಕುಮಾರ್ ಚಿಕ್ ರಾಜು ಉಮೇಶ ಇನ್ನಿತರ ಮುಖಂಡರು ಇದ್ದರು.