ಕೃಷಿ ಕಾಲೇಜು ನಿರ್ಮಾಣಕ್ಕೆ ಅನುಮೋದನೆ

| Published : Jul 19 2025, 01:00 AM IST

ಸಾರಾಂಶ

ಕೃಷಿ ಕಾಲೇಜು ನಿರ್ಮಾಣಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿ ಆದೇಶಿಸಿದ್ದು, ಒಟ್ಟು ₹562.50 ಕೋಟಿ ವೆಚ್ಚದಲ್ಲಿ ಕೃಷಿ ಕಾಲೇಜು ನಿರ್ಮಾಣವಾಗುತ್ತಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಕನ್ನಡಪ್ರಭ ವಾರ್ತೆ ಅಥಣಿ

ಕೃಷಿ ಕಾಲೇಜು ನಿರ್ಮಾಣಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿ ಆದೇಶಿಸಿದ್ದು, ಒಟ್ಟು ₹562.50 ಕೋಟಿ ವೆಚ್ಚದಲ್ಲಿ ಕೃಷಿ ಕಾಲೇಜು ನಿರ್ಮಾಣವಾಗುತ್ತಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ತಾಲೂಕಿನ ಕೊಕಟನೂರ ಗ್ರಾಮದಲ್ಲಿ ಹೊಸದಾಗಿ ನಿರ್ಮಿಸಲಾಗುವ ಕೃಷಿ ಕಾಲೇಜು ನಿರ್ಮಾಣಕ್ಕೆ ಹಾಗೂ ಕೃಷಿಗೆ ಸಂಬಂಧಿಸಿದ ಜಮೀನು ಪರಿಶೀಲನೆಗೆ ಆಗಮಿಸಿದ ಧಾರವಾಡ ಕೃಷಿ ವಿಶ್ವವಿದ್ಯಾಲಯದ ತಜ್ಞರ ಜೊತೆಗೆ ಸಭೆ ನಡೆಸಿ ಮಾತನಾಡಿದ ಅವರು, ಕೃಷಿ ಕಾಲೇಜು ಆರಂಭವಾಗಬೇಕೆಂಬುವುದು ನನ್ನ ಕನಸಾಗಿತ್ತು. ಅದರ ಕಾಲ ಈಗ ಕೂಡಿ ಬಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.ತಾಲೂಕಿನಲ್ಲಿ ದ್ರಾಕ್ಷಿ, ಕಬ್ಬು, ಮೆಕ್ಕೆಜೋಳ ಹಾಗೂ ದಾಳಿಂಬೆ ಪ್ರಮುಖ ಬೆಳೆಯಾಗಿದ್ದು, ರೈತರು ವೈಜ್ಞಾನಿಕವಾಗಿ ಬೆಳೆ ಬೆಳೆಯಲು ಮುಂದಾಗಬೇಕು, ಬರುವ ದಿನಗಳಲ್ಲಿ ತಾಲೂಕಿನಲ್ಲಿ ಬಾವಿ, ಕೊಳವೆ ಬಾವಿಯ ಅಂತರ್ಜಲ ಮಟ್ಟ ಹೆಚ್ಚಿಸಲು 2000 ಇಂಗು ಗುಂಡಿ ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.ಧಾರವಾಡ ಕೃಷಿ ವಿಶ್ವವಿದ್ಯಾಲಯದ ತಜ್ಞರಾದ ಡಾ.ವಿ.ಐ.ಬೆಣಗಿ ಹಾಗೂ ಡಾ.ಜೆ.ಎಚ್.ಕುಲಕರ್ಣಿ ಕೃಷಿ ಕಾಲೇಜು ನಿರ್ಮಾಣದ 100 ಎಕರೆ ಜಮೀನನ್ನು ಶಾಸಕ ಲಕ್ಷ್ಮಣ ಸವದಿಯವರ ಜತೆಗೆ ಸೇರಿ ಪರಿಶೀಲನೆ ನಡೆಸಿ ಮಾತನಾಡಿ, ಈಗ ಕೃಷಿ ಕಾಲೇಜು ನಿರ್ಮಾಣ ಮಾಡುತ್ತಿರುವ ಜಮೀನು ಕಾಲೇಜು ಕಟ್ಟಡಕ್ಕೆ ಸೂಕ್ತವಾಗಿದೆ. ಜತೆಗೆ ಉದ್ದು, ಮೆಕ್ಕೆಜೋಳ, ಸೊಯಬಿನ್, ತೊಗರಿ, ಕಬ್ಬು ಬೆಳೆಯಲು ಯೋಗ್ಯವಾದ ಪ್ರದೇಶವಿದ್ದು, ಇಲ್ಲಿ ಕೃಷಿ ಕಾಲೇಜು ನಿರ್ಮಾಣ ಮಾಡುವುದು ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಯ ರೈತರ ಮಕ್ಕಳಿಗೆ ಅನುಕೂಲವಾಗಲಿದ್ದು, ಇದರ ಯೋಗ್ಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.ಬೆಳಗಾವಿ ಕೃಷಿ ಜಂಟಿ ನಿರ್ದೇಶಕ ಎಚ್.ಡಿ.ಕೊಳೆಕರ, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಅಧಿಕಾರಿ ಮನ್ಸೂರ ಮುಲ್ಲಾ, ಅಥಣಿ ತಹಸೀಲ್ದಾರ್‌ ಸಿದ್ದರಾಯ ಬೋಸಗಿ, ಅಥಣಿ ಕೃಷಿ ಇಲಾಖೆ ಅಧಿಕಾರಿಗಳಾದ ನಿಂಗಪ್ಪ ಬಿರಾದಾರ, ಯಂಕಪ್ಪ ಉಪ್ಪಾರ, ಪಶುವೈದ್ಯಕೀಯ ಕಾಲೇಜು ಡೀನ್ ವಿಜಯಕುಮಾರ ಶೆಟ್ಟರ, ಕಂದಾಯನಿರೀಕ್ಷಕ ಸಂಜೀವ ರಾಠೋಡ, ಗ್ರಾಮಾಡಳಿತಾಧಿಕಾರಿ ಕಲ್ಮೇಶ ಕಲಮಡಿ, ಪಿಡಿಒ ಸಿದ್ದಪ್ಪ ತುಂಗಳ, ಜಯಪಾಲ ದುರ್ಗಣ್ಣವರ ಸೇರಿದಂತೆ ಹಲವರು ಇದ್ದರು.ತಾಲೂಕಿನಲ್ಲಿ ಕೊಕಟನೂರ ಗ್ರಾಮವನ್ನು ವಿದ್ಯಾ ಕೇಂದ್ರವನ್ನಾಗಿ ಮಾಡಲಾಗುವುದು. ಈಗ ನಿರ್ಮಾಣವಾಗುತ್ತಿರುವ ಕೃಷಿ ಕಾಲೇಜು ಎದುರಿನಲ್ಲಿಯೇ ಕಳೆದ ವರ್ಷದದಿಂದ ಪಶುವೈದ್ಯಕೀಯ ಮಹಾವಿದ್ಯಾಲಯ ಪ್ರಾರಂಭವಾಗಿದ್ದು, ತಾಲೂಕಿನ ಪಶುವೈದ್ಯಕೀಯ ಮತ್ತು ಕೃಷಿ ಕಾಲೇಜುಗಳು ರೈತರ ಮಕ್ಕಳಿಗೆ ಅನುಕೂಲವಾಗಲಿವೆ.

-ಲಕ್ಷ್ಮಣ ಸವದಿ, ಶಾಸಕರು.