ಸಾರಾಂಶ
ಹೊಸ ಗ್ರಂಥಾಲಯ ಪ್ರಾರಂಭಿಸಲು ಉದ್ದೇಶಿಸಿರುವ ಕಟ್ಟಡವು ವಸತಿ ಪ್ರದೇಶಕ್ಕೆ ಹತ್ತಿರದಲ್ಲಿರಬೇಕು. ಕಟ್ಟಡವು ಸುಸ್ಥಿತಿಯಲ್ಲಿದ್ದು, ಉತ್ತಮ ಗಾಳಿ, ಬೆಳಕಿನ ವ್ಯವಸ್ಥೆಯನ್ನು ಹೊಂದಿರಬೇಕು. ಗ್ರಂಥಾಲಯವು ಪ್ರತಿ ಶನಿವಾರ ಮತ್ತು ಭಾನುವಾರ ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕನಿಷ್ಠ 4 ಗಂಟೆಗಳ ಅವಧಿಗೆ ಕಾರ್ಯನಿರ್ವಹಿಸಬೇಕು.
ಕನ್ನಡಪ್ರಭ ವಾರ್ತೆ ಮಂಡ್ಯ
ಕೇಂದ್ರ ಸರ್ಕಾರವು ಮಕ್ಕಳು ಮತ್ತು ಹದಿಹರೆಯದವರ ಗ್ರಂಥಾಲಯಗಳು ಮತ್ತು ಡಿಜಿಟಲ್ ಮೂಲಸೌಕರ್ಯ ಕಾರ್ಯಕ್ರಮದಡಿ ರಾಜ್ಯದಲ್ಲಿ 6599 ಹೊಸ ಗ್ರಂಥಾಲಯ ಆರಂಭಿಸಲು ಮಂಜೂರಾತಿ ನೀಡಿದ್ದು, ಮಂಡ್ಯ ಜಿಲ್ಲೆಯಲ್ಲಿ 257 ಹೊಸ ಗ್ರಾಮ ಗ್ರಂಥಾಲಯಗಳ ಆರಂಭಕ್ಕೆ ಮಂಜೂರಾತಿ ನೀಡಿದೆ.ಹೊಸ ಗ್ರಂಥಾಲಯ ಪ್ರಾರಂಭಿಸಲು ಉದ್ದೇಶಿಸಿರುವ ಕಟ್ಟಡವು ವಸತಿ ಪ್ರದೇಶಕ್ಕೆ ಹತ್ತಿರದಲ್ಲಿರಬೇಕು. ಕಟ್ಟಡವು ಸುಸ್ಥಿತಿಯಲ್ಲಿದ್ದು, ಉತ್ತಮ ಗಾಳಿ, ಬೆಳಕಿನ ವ್ಯವಸ್ಥೆಯನ್ನು ಹೊಂದಿರಬೇಕು. ಗ್ರಂಥಾಲಯವು ಪ್ರತಿ ಶನಿವಾರ ಮತ್ತು ಭಾನುವಾರ ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕನಿಷ್ಠ 4 ಗಂಟೆಗಳ ಅವಧಿಗೆ ಕಾರ್ಯನಿರ್ವಹಿಸಬೇಕು.
ಗ್ರಂಥಾಲಯಗಳನ್ನು ಜಿಪಿಎಲ್‌ಎ- ಅಡಿಯಲ್ಲಿರುವ ಸ್ವ-ಸಹಾಯ ಸಂಘಗಳು ನಿರ್ವಹಿಸಬೇಕು. ಯಾವುದೇ ಹೊಸ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವಂತಿಲ್ಲ. ಉಸ್ತುವಾರಿ ನೋಡಿಕೊಳ್ಳುವ ಸ್ವ-ಸಹಾಯ ಸಂಘಕ್ಕೆ ದಿನವೊಂದಕ್ಕೆ 350 ರು.ಗಳನ್ನು ಗ್ರಾಮ ಪಂಚಾಯ್ತಿ ಸ್ವಂತ ಸಂಪನ್ಮೂಲದಿಂದ ಪಾವತಿಸತಕ್ಕದ್ದು ಎಂದು ಸೂಚಿಸಿದೆ.ಗ್ರಾಮ ಗ್ರಂಥಾಲಯಗಳನ್ನು ಶಾಲಾ ಕೊಠಡಿ ಗುರುತಿಸಿದ್ದಲ್ಲಿ ಅಲ್ಲಿ ಸಾರ್ವಜನಿಕ ಗ್ರಂಥಾಲಯ ಪ್ರಾರಂಭಿಸಲು ಒಪ್ಪಿಗೆ ಇರುವ ಕುರಿತು ಶಾಲೆಯ ಎಸ್‌ಡಿಎಂಸಿಯು ಸಭೆಯಲ್ಲಿ ನಿರ್ಣಯ ಕೈಗೊಂಡು ಲಿಖಿತ ಒಪ್ಪಿಗೆಯನ್ನು ಗ್ರಾಮ ಪಂಚಾಯ್ತಿಗೆ ನೀಡಬೇಕು. ಶಾಲಾ ಕೊಠಡಿಯಲ್ಲಿ ಗ್ರಂಥಾಲಯಗಳನ್ನು ಆರಂಭಿಸಿದ್ದರೆ ಶನಿವಾರ ಮತ್ತು ಭಾನುವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ಶಾಲಾ ಮಕ್ಕಳು ಗ್ರಂಥಾಲಯ ಬಳಸಲು ಅನುಕೂಲವಾಗುವಂತೆ ಗ್ರಂಥಾಲಯದ ಕೀಲಿ ಕೈಯ್ಯನ್ನು ಶಾಲೆಯ ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಬೇಕು ಎಂದು ತಿಳಿಸಲಾಗಿದೆ.
ಸಮುದಾಯವನ ಅಥವಾ ಇತರೆ ಯಾವುದೇ ಸರ್ಕಾರಿ, ಸಾರ್ವಜನಿಕ ಕಟ್ಟಡ ಗುರುತಿಸಿದ್ದಲ್ಲಿ ಮತ್ತು ಗ್ರಾಪಂ ಕಟ್ಟಡದ ಮಾಲೀಕತ್ವ ಹೊಂದಿಲ್ಲದಿದ್ದಲ್ಲಿ ಅಂತಹ ಕಟ್ಟಡದ ಮಾಲೀಕತ್ವ ಹೊಂದಿರುವ ವ್ಯಕ್ತಿ, ಸಂಸ್ಥೆಯಿಂದ ಆ ಕಟ್ಟಡದಲ್ಲಿ ಗ್ರಂಥಾಲಯ ಪ್ರಾರಂಭಿಸಲು ಒಪ್ಪಿಗೆ ಇರುವ ಬಗ್ಗೆ ಲಿಖಿತ ಅನುಮತಿ ಪಡೆಯುವುದು ಕಡ್ಡಾಯ. ಗ್ರಂಥಾಲಯಗಳನ್ನು ಆರಂಭಿಸಲು ಗುರುತಿಸಲಾದ ಕಟ್ಟಡಕ್ಕೆ ಅಗತ್ಯವಿರುವ ದುರಸ್ತಿ, ನವೀಕರಣ, ವಿದ್ಯುತ್ ಸಂಪರ್ಕ, ಕುಡಿಯುವ ನೀರು, ಫ್ಯಾನ್ ವೆಚ್ಚಗಳನ್ನು ಗ್ರಾಮ ಪ್ರಂಚಾಯಿತಿಗಳು ಸ್ವಂತ ಸಂಪನ್ಮೂಲದಿಂದ ಭರಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನಿರ್ದೇಶಕ ಡಾ.ಎನ್.ಸೋಮೇಶ್‌ಕುಮಾರ್ ತಿಳಿಸಿದ್ದಾರೆ.