ಸಾರಾಂಶ
ಸರ್ಕಾರವು ಹಲವಾರು ರೀತಿ ವಿರೋಧದ ನಡುವೆಯೂ ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿರುವ ಸಿದ್ದರಾಮಯ್ಯನವರು ಮತ್ತು ಸಂಪುಟದ ಸಚಿವರಿಗೆ ಕೃತಜ್ಞತೆ ಸಲ್ಲಿಸಿದರು
ಕನ್ನಡಪ್ರಭ ವಾರ್ತೆ ಮುಧೋಳ
ಸಿಎಂ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟವು ಒಳಮೀಸಲಾತಿ ಜಾರಿಗೆ ತರುವಲ್ಲಿ ಅನುಮೋದನೆ ನೀಡಿದ್ದು, ಸಾಮಾಜಿಕ ನ್ಯಾಯ ಮತ್ತು ಸಮಾನತೆಗಾಗಿ ಡಾ.ಅಂಬೇಡ್ಕರ್ ದೃಷ್ಟಿಕೋನ ಈಡೇರಿಸುವ ಐತಿಹಾಸಿಕ ಕ್ರಮವಾಗಿದೆ. ಮೂಲ ಅಸ್ಪೃಶ್ಯರು ಸೇರಿದಂತೆ ಒಟ್ಟು 101 ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು 30 ವರ್ಷಗಳಿಂದ ಅವಿರತ ಹೋರಾಟ ನಡೆಸಿದ ಮೂಲ ಪಂಚಮ ಸಮುದಾಯಗಳ (ಜಾತಿ) ಒಳ ಮೀಸಲಾತಿ ಹೋರಾಟ ಸಮಿತಿ ಹಾಗೂ ದಲಿತ ಸಂಘಟನೆಗಳ ಒಕ್ಕೂಟಕ್ಕೆ ಕಾಂಗ್ರೆಸ್ ನೇತೃತ್ವದ ಸರ್ಕಾರದ ಈ ನಿರ್ಧಾರ ಮಹತ್ವದ ಜಯವಾಗಿದೆ ಎಂದು ಪಂಚಮ ಸಮುದಾಯಗಳ (ಜಾತಿ) ಮುಖಂಡರು ಸಂತಸ ವ್ಯಕ್ತಪಡಿಸಿದ್ದಾರೆ.ಡಿ.ಎಸ್.ಎಸ್ ಬೆಳಗಾವಿ ಸಂಚಾಲಕ ಗಣೇಶ ಮೇತ್ರಿ ಮಾತನಾಡಿ, ಸರ್ಕಾರವು ಹಲವಾರು ರೀತಿ ವಿರೋಧದ ನಡುವೆಯೂ ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿರುವ ಸಿದ್ದರಾಮಯ್ಯನವರು ಮತ್ತು ಸಂಪುಟದ ಸಚಿವರಿಗೆ ಕೃತಜ್ಞತೆ ಸಲ್ಲಿಸಿದರು. 2012ರ ಡಿ.11ರಂದು ಬೆಳಗಾವಿ ಸುವರ್ಣಸೌಧದ ಅಧಿವೇಶನದಲ್ಲಿ ಜಗದೀಶ್ ಶೆಟ್ಟರ ಸಿಎಂ ಇದ್ದಾಗ ಸರ್ಕಾರ ಹೋರಾಟಗಾರರ ಮೇಲೆ ರಕ್ತ ಹರಿಸಿ ಮಾರಣಾಂತಿಕ ಹಲ್ಲೆ ನಡೆಸಿದ್ದು, ಸಮಾಜದಲ್ಲಿ ಶಾಶ್ವತ ಪರಿಣಾಮ ಬೀರಿದ ದಾರುಣ ಘಟನೆ ಸ್ಮರಿಸಿದರು. ಒಳಮೀಸಲಾತಿ ಜಾರಿಗೆ ತರುವ ಕಾಂಗ್ರೆಸ್ ಸರ್ಕಾರದ ನಿರ್ಧಾರವು ಪಂಚಮ ಸಮುದಾಯಗಳಿಗೆ ದೀಪಾವಳಿ ಉಡುಗೊರೆಯಾಗಿದ್ದು, ಬಹಳ ಹಿಂದಿನಿಂದಲೂ ಕೊನೆಯ ಅಂಚಿನಲ್ಲಿರುವವರಿಗೆ ಭರವಸೆ ಮತ್ತು ಸಬಲೀಕರಣ ತಂದಿದೆ ಎಂದರು.
ನಗರಸಭೆ ಸದಸ್ಯರಾದ ಸುರೇಶ ಕಾಂಬಳೆ, ಭೀಮಸಿ ಮೇತ್ರಿ, ಚಲವಾದಿ ಸಮಾಜದ ರವಿ ಕಾಂಬಳೆ, ರವಿ ಕಂದಗ ನೂರು, ಹರಳಯ್ಯ ಸಮಾಜದ ಶಂಕರ ಮಿರ್ಜಿ, ಅಶೋಕ ಕಾಂಬಳೆ, ಡೋರ ಕಕ್ಕಯ್ಯ ಸಮಾಜದ ಸಂತೋಷ ಶೇರಖಾನೆ, ಮಾದಿಗ ಸಮಾಜದ ಪ್ರಕಾಶ ತಳಗೇರಿ, ಸದಾಶಿವ ಮೇತ್ರಿ, ಮಾದೇವ ಮಾದರ, ಸಂಜು ಗಸ್ತಿ, ಎಸ್ .ಎಲ್. ಪೂಜಾರಿ , ಶಿವು ಮ್ಯಾಗೇರಿ, ಮುತ್ತು ಮೇತ್ರಿ , ಪ್ರಭು ಮೇತ್ರಿ ಸೇರಿದಂತೆ ದಲಿತ ಸಂಘಟನೆಗಳ ಮುಖಂಡರು, ಗಣೇಶ ಮೇತ್ರಿ ಅವರೊಂದಿಗೆ ಜಗಜ್ಯೋತಿ ಬಸವಣ್ಣ ಮತ್ತು ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಸರ್ಕಲ್ ನಲ್ಲಿ ಸೇರಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಚಿವ ಸಂಪುಟದ ಸಚಿವರಿಗೆ ಅಭಿನಂದನೆ ಸಲ್ಲಿಸಿದರು. ಪ್ರಮುಖ ಬೀದಿಗಳಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಪರ ಸಂಪುಟದ ಸಚಿವರಿಗೆ ಜಯ ಘೋಷಣೆ ಕೂಗಿದರು.