ರಾಯರ ಆರಾಧನೆ: ವಿಜೃಂಭಣೆಯ ರಥೋತ್ಸವ

| Published : Aug 23 2024, 01:16 AM IST

ಸಾರಾಂಶ

ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವ ನಿಮಿತ್ತ ಗುರುವಾರ ನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಆವರಣದಲ್ಲಿ ಆರಾಧನೆಯ ಮೂರನೇ ದಿನ ರಥೋತ್ಸವ ವಿಜೃಂಭಣೆಯಿಂದ ಜರುಗಿತು.

ಕನ್ನಡಪ್ರಭ ವಾರ್ತೆ ಕೊಪ್ಪಳ

ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವ ನಿಮಿತ್ತ ಗುರುವಾರ ನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಆವರಣದಲ್ಲಿ ಆರಾಧನೆಯ ಮೂರನೇ ದಿನ ರಥೋತ್ಸವ ವಿಜೃಂಭಣೆಯಿಂದ ಜರುಗಿತು.

ಮಠದ ಆವರಣದಲ್ಲಿ ಸೇರಿದ್ದ ಜನಸ್ತೋಮ ಶ್ರೀ ರಾಘವೇಂದ್ರಸ್ವಾಮಿಗಳ ಜಯ ಘೋಷಣೆ ಕೂಗಿದರು.

ರಥಕ್ಕೆ ಹೂಗಳಿಂದ ಅಲಂಕಾರ ಮಾಡಿದ್ದರು. ರಾಯರ ಮಠದ ಎದುರಿನ ಆಂಜನೇಯನ ದೇವಸ್ಥಾನದ ಮೂರ್ತಿಗೂ ವೈವಿಧ್ಯಮಯ ಹೂಗಳಿಂದ ಅಲಂಕರಿಸಲಾಗಿತ್ತು.

ರಥೋತ್ಸವ ನಡೆಯುವ ವೇಳೆಗೆ ಭಕ್ತರು ರಾಘವೇಂದ್ರ ಸ್ವಾಮಿಗಳ ಹಾಗೂ ದಾಸರ ಹಾಡು ಹಾಡಿದರು. ಅನೇಕ ಮಕ್ಕಳು ರಥೋತ್ಸವದ ಸಮಯದಲ್ಲಿಯೇ ಕೋಲಾಟಕ್ಕೆ ಹೆಜ್ಜೆ ಹಾಕಿ ಖುಷಿ ಪಟ್ಟರು.

ಬೆಳಗ್ಗೆಯೇ ಸುಪ್ರಭಾತ, ಅಷ್ಟೋತ್ತರ, ಪಂಚಾಮೃತ ಅಭಿಷೇಕ, ಮದ್ಭಾಗವತ ಪ್ರವಚನ, ನೈವೇದ್ಯ, ಹಸ್ತೋದಕ, ಅಲಂಕಾರ ಮತ್ತು ತೀರ್ಥಪ್ರಸಾದ ವಿತರಣೆ ಸಾಂಘವಾಗಿ ನಡೆಯಿತು.

ಬೆಂಗಳೂರಿನ ರವೀಂದ್ರ ಸೊರಗಾವಿ ಅವರಿಂದ ಭಕ್ತಿ ಸಂಗೀತ, ಪಂಡಿತ ಪುರಸ್ಕಾರ, ರಾಘವೇಂದ್ರ ವಿಜಯ ಪ್ರವಚನ ಮಂಗಲ ಮಹೋತ್ಸವ, ಗುಡೆಬೆಲ್ಲೂರಿನ ವೆಂಕಟ ನರಸಿಂಹಾಚಾರ್ಯ ಅವರಿಂದ ಪ್ರವಚನ ಸೇರಿದಂತೆ ಅನೇಕ ಕಾರ್ಯಕ್ರಮಗಳು ಜರುಗಿದವು.

ಇಂದು ಭಕ್ತಿ ಸಂಗೀತ:

ಶುಕ್ರವಾರ ಮೈಸೂರಿನ ರಾಮಚಂದ್ರಾಚಾರ್ಯ ಅವರಿಂದ ಭಕ್ತಿ ಸಂಗೀತ ಜರುಗಲಿದೆ. ಮಠದ ಆವರಣದಲ್ಲಿ ಆ. 26ರಂದು ಕೃಷ್ಣ ಜಯಂತಿ ಅಂಗವಾಗಿ ಸಂಜೆ 6.30ಕ್ಕೆ ಹುಬ್ಬಳ್ಳಿಯ ಶ್ರೀಕಾಂತ ಬಾಕಳೆ ಮತ್ತು ರಾತ್ರಿ 9 ಗಂಟೆಗೆ ರಘುಪ್ರೇಮಾಚಾರ್ಯ ಮುಳುಗುಂದ ಅವರಿಂದ ಪ್ರವಚನ ನಡೆಯಲಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.

26ರಂದು ಕೊಪ್ಪಳದಲ್ಲಿ ಶ್ರೀಕೃಷ್ಣ ಜಯಂತಿ:

ಕೊಪ್ಪಳ ಜಿಲ್ಲಾಡಳಿತದಿಂದ ಶ್ರೀಕೃಷ್ಣ ಜಯಂತಿಯನ್ನು ಆ. 26ರಂದು ಬೆಳಗ್ಗೆ 10 ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್. ತಂಗಡಗಿ ಕಾರ್ಯಕ್ರಮ ಉದ್ಘಾಟಿಸುವರು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ್ ಮರಬನಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.