ಪತ್ರಕರ್ತರು ವೃತ್ತಿ ಜೊತೆಗೆ ನಾಟಕ ಕಲೆ ಬಗ್ಗೆ ಅಭಿರುಚಿ ಬೆಳೆಸಿಕೊಳ್ಳಬೇಕು: ಹಿರಿಯ ಪತ್ರಕರ್ತ ಅಬ್ರಹಾಂ ಡಿ ಸಿಲ್ವ

| Published : Aug 23 2024, 01:15 AM IST

ಪತ್ರಕರ್ತರು ವೃತ್ತಿ ಜೊತೆಗೆ ನಾಟಕ ಕಲೆ ಬಗ್ಗೆ ಅಭಿರುಚಿ ಬೆಳೆಸಿಕೊಳ್ಳಬೇಕು: ಹಿರಿಯ ಪತ್ರಕರ್ತ ಅಬ್ರಹಾಂ ಡಿ ಸಿಲ್ವ
Share this Article
  • FB
  • TW
  • Linkdin
  • Email

ಸಾರಾಂಶ

ಪತ್ರಕರ್ತರು ವೃತ್ತಿ ಜೀವನದ ಜೊತೆಗೆ ನಾಟಕ ಮತ್ತು ಕಲೆ ಬಗ್ಗೆ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಅಬ್ರಹಾಂ ಡಿ ಸಿಲ್ವ ಅ‍ವರು ತಿಳಿಸಿದರು. ಚಾಮರಾಜನಗರದಲ್ಲಿ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ ಪತ್ರಕರ್ತರು ವೃತ್ತಿ ಜೀವನದ ಜೊತೆಗೆ ನಾಟಕ ಮತ್ತು ಕಲೆ ಬಗ್ಗೆ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಅಬ್ರಹಾಂ ಡಿ ಸಿಲ್ವ ಅ‍ವರು ತಿಳಿಸಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಸಂಘದ ವತಿಯಿಂದ ಗುರುವಾರ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವಿಕರಿಸಿ ಅವರು ಮಾತನಾಡಿದರು.

ನಾನು ಕಾಲೇಜು ದಿನಗಳಲ್ಲಿ 5-6 ನಾಟಕಗಳಲ್ಲಿ ಅಭಿನಯಿಸಿದ್ದರಿಂದ ನಾಟಕದ ಬಗ್ಗೆ ಅಭಿರುಚಿ ಬೆಳೆಯಿತು. ನಂತರ ಹಲವು ನಾಟಕಗಳಲ್ಲಿ ಅಭಿನಯಿಸಲು ಸಾಧ್ಯವಾಯಿತು ಎಂದರು. 1973ರಲ್ಲಿ ಚಾಮರಾಜನಗರದಲ್ಲಿ ನಾಟಕ ಸಂಸ್ಥೆಯನ್ನು ಹಲವು ಸ್ನೇಹಿತರು ಸೇರಿ ಕಟ್ಟಿದ್ದು, ನಾವು ಕಟ್ಟಿದ ಶಾಂತಲ ಕಲಾವಿದರ ನಾಟಕ ಸಂಸ್ಥೆಯೇ ಚಾಮರಾಜನಗರದಲ್ಲಿ ಮೊದಲ ನಾಟಕ ಸಂಸ್ಥೆಯಾಗಿದ್ದು ಈಗ 50 ವರ್ಷ ಪೂರೈಸಿದೆ. ಶಾಂತಲಾ ಕಲಾವಿದರ ಸಂಘ ಕಟ್ಟಿ ಬೆಳಸಿದ ಪರಿಣಾಮ ಚಾಮರಾಜನಗರದಲ್ಲಿ ಹಲವು ಸಂಘಗಳು ಹುಟ್ಟಿ ಕಲೆ ಸಂಸ್ಕೃತಿ ಬೆಳೆಯಲು ಕಾರಣವಾಯಿತು. ನಮ್ಮ ನಾಟಕ ಸಂಸ್ಥೆಯ ಇಬ್ಬರಿಗೆ ನಾಟಕ ಅಕಾಡೆಮಿ ಪ್ರಶಸ್ತಿ ಲಭಿಸಿದೆ ಎಂದರು.

ಚಾಮರಾಜನಗರ ಜಿಲ್ಲಾ ಕೇಂದ್ರವಾಗಿ 25 ವರ್ಷ ಪೂರೈಸಿದ್ದರೂ ಸುಸಜ್ಜಿತ ರಂಗ ಮಂದಿರ ನಿರ್ಮಾಣವಾಗಿಲ್ಲ, ರಂಗಮಂದಿರದಲ್ಲಿ ನಾಟಕ ಮಾಡುವುದಕ್ಕೆ ಯಾವುದೇ ಸೌಲಭ್ಯವಿಲ್ಲ ಸರ್ಕಾರ ಈಗಿರುವ ರಂಗಮಂದಿರವನ್ನು ರಂಗ ಕಲೆಗಳ ಪ್ರದರ್ಶನಕ್ಕೆ ಅನುಕೂಲವಾಗುವಂತೆ ಮಾಡಲು ಆಸಕ್ತಿ ವಹಿಸಬೇಕಿದೆ ಎಂದು ಆಗ್ರಹಿಸಿದರು.

ನಾನು ಮೈಸೂರು ಮಿತ್ರ ಮೂಲಕ ವೃತ್ತಿ ಪ್ರವೇಶಿಸಿ, ಆಂದೋಲನ ನಂತರ ರೇಷ್ಮೆನಾಡು ಪತ್ರಿಕೆಯಲ್ಲಿ ಮೂರು ದಶಕ ಕೆಲಸ ನಿರ್ವಹಿಸುತ್ತಾ ಬಂದಿದ್ದೇನೆ. ಸಣ್ಣ ಪತ್ರಿಕೆಯಲ್ಲಿ ಕೆಲಸ ಮಾಡಿದ ನನಗೆ 2009ರಲ್ಲಿ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸಿಕ್ಕಿತು. ಇದೀಗ ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ದೊರಕಿರುವುದು ಸಂತೋಷ ತಂದಿದೆ ಎಂದರು.

ಪತ್ರಕರ್ತರು ಒಗ್ಗಟ್ಟು ಉಳಿಸಿಕೊಂಡು ಹೋಗಬೇಕು. ನಾನು ಸಂಘದ ಅಧ್ಯಕ್ಷನಾಗಿದ್ದಾಗ ಜಿಲ್ಲಾಧಿಕಾರಿ ಅಮರನಾರಾಯಣ ಹಾಗೂ ಎಸ್ಪಿ ರಾಜೇಂದ್ರ ಪ್ರಸಾದ್‌ ಅವರು ಸಂಘದ ಕಟ್ಟಡ ನಿರ್ಮಾಣ ಮಾಡಲು ಸಹಕಾರ ನೀಡಿದರು ಎಂದು ಸ್ಮರಿಸಿಕೊಂಡರು. ಪತ್ರಕರ್ತರ ಭವನದ ಮೇಲ್ಭಾಗದಲ್ಲಿ ಗ್ರಂಥಾಲಯ ನಿರ್ಮಾಣ ಮಾಡುವಂತೆ ಸಲಹೆ ನೀಡಿದರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದೇವರಾಜು ಕಪ್ಪಸೋಗೆ ಮಾತನಾಡಿ, ಹಿರಿಯ ಪತ್ರಕರ್ತ ಅಬ್ರಹಾಂ ಡಿ ಸಿಲ್ವ ಅ‍ವರಿಗೆ 2024-25ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಸಿಕ್ಕಿರುವುದು ತುಂಬಾ ಸಂತೋಷ ತಂದಿದೆ. ಅವರು ಪತ್ರಿಕಾ ರಂಗದ ಜೊತೆಗೆ ಕ್ರೀಡೆ, ಕಲೆ, ಸಾಹಿತ್ಯ, ನಾಟಕ ಮತ್ತು ಹೋರಾಟಗಳಲ್ಲೂ ತೊಡಗಿಸಿಕೊಳ್ಳುವ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಅವರಿಗೆ ಇನ್ನೂ ಹೆಚ್ಚಿನ ಪ್ರಶಸ್ತಿಗಳು ಲಭಿಸಲಿ ಎಂದು ಹಾರೈಸಿದರು.

ಸಮಾರಂಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿಣಿ ಸಮಿತಿ ಸದಸ್ಯ ನಂದೀಶ್‌ ನಿರೂಪಿಸಿದರು. ಹಿರಿಯ ಪತ್ರಕರ್ತ ಬನಶಂಕರ ಆರಾಧ್ಯ ಸ್ವಾಗತಿಸಿದರು. ಆರ್‌.ಎನ್. ಸಿದ್ದಲಿಂಗಸ್ವಾಮಿ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಲಕ್ಕೂರು ಪ್ರಸಾದ್‌ ಮತ್ತು ಪತ್ರಕರ್ತರು ಇದ್ದರು.

22ಸಿಎಚ್ಎನ್‌10

ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಪತ್ರಕರ್ತ ಅಬ್ರಹಾಂ ಡಿ ಸಿಲ್ವ ಅವರನ್ನು

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಗುರುವಾರ ಅಭಿನಂದಿಸಲಾಯಿತು.