ಸಾರಾಂಶ
ಬೆಂಗಳೂರು : ರಾಜ್ಯ ಸರ್ಕಾರದ ವಿರುದ್ಧ ಪ್ರಾಸಿಕ್ಯೂಷನ್ ಅಸ್ತ್ರ ಪ್ರಯೋಗಿಸುತ್ತಿರುವ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಆಗ್ರಹಿಸಿ ರಾಷ್ಟ್ರಪತಿ ಬಳಿಗೆ ನಿಯೋಗ ಕೊಂಡೊಯ್ಯಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಒತ್ತಾಯಿಸಿದೆ.
ಈ ಒತ್ತಾಸೆ ಹಾಗೂ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಷ್ಟ್ರಪತಿಯವರ ಬಳಿಗೆ ನಿಯೋಗ ಒಯ್ಯಬೇಕು ಎಂಬ ನಿಮ್ಮ ಆಗ್ರಹ ಕುರಿತು ಹೈಕಮಾಂಡ್‌ನೊಂದಿಗೆ ಶುಕ್ರವಾರ ಚರ್ಚಿಸುತ್ತೇನೆ. ಹೈಕಮಾಂಡ್ ಸಲಹೆಯಂತೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಇದಕ್ಕೂ ಮುನ್ನ ರಾಜ್ಯಪಾಲರು ಮುಖ್ಯಮಂತ್ರಿಯವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿಸಿರುವುದನ್ನು ಖಂಡಿಸಿ ಶಾಸಕರು ಸರ್ವಾನುಮತ ನಿರ್ಣಯ ಕೈಗೊಂಡರು. ಜೊತೆಗೆ ಪ್ರಾಸಿಕ್ಯೂಷನ್ ವಿಚಾರದಲ್ಲಿ ವಿವೇಚನಾರಹಿತ ನಿರ್ಧಾರ ಹಾಗೂ ತಾರತಮ್ಯ ಧೋರಣೆ ಅನುಸರಿಸಿರುವ ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳುವಂತೆ ರಾಷ್ಟ್ರಪತಿಗಳ ಬಳಿಗೆ ನಿಯೋಗ ತೆರಳಿ ಒತ್ತಡ ಹಾಕೋಣ ಎಂದು ಶಾಸಕರೆಲ್ಲರೂ ಒಮ್ಮತದ ಆಗ್ರಹ ವ್ಯಕ್ತಪಡಿಸಿದರು.