ಸಾರಾಂಶ
ಹರಿಹರ ನಗರದ ಹೊರವಲಯದಿಂದ ಸಾಗಿರುವ ದೇವರಬೆಳಕೆರೆ (ಡಿ.ಬಿ.ಕೆರೆ) ಪಿಕ್‌ಅಪ್ ಜಲಾಶಯ ಕಾಲುವೆಯಲ್ಲಿ ಹೂಳು ತುಂಬಿದೆ. ಇದರಿಂದಾಗಿ ನೀರಿದ್ದರೂ ರೈತರ ಜಮೀನುಗಳಿಗೆ ಹರಿಯದ ದುಸ್ಥಿತಿ ಎದುರಾಗಿದೆ.
- ಸ್ವಂತ ಖರ್ಚಿನಲ್ಲಿ 3 ಕಿ.ಮೀ. ಹೂಳೆತ್ತಿಸಿದ್ದರೂ ಕಾಣದ ನೀರುನ ಸುಳಿವು - - - ಕನ್ನಡಪ್ರಭ ವಾರ್ತೆ ಹರಿಹರ
ನಗರದ ಹೊರವಲಯದಿಂದ ಸಾಗಿರುವ ದೇವರಬೆಳಕೆರೆ (ಡಿ.ಬಿ.ಕೆರೆ) ಪಿಕ್‌ಅಪ್ ಜಲಾಶಯ ಕಾಲುವೆಯಲ್ಲಿ ಹೂಳು ತುಂಬಿದೆ. ಇದರಿಂದಾಗಿ ನೀರಿದ್ದರೂ ರೈತರ ಜಮೀನುಗಳಿಗೆ ಹರಿಯದ ದುಸ್ಥಿತಿ ಎದುರಾಗಿದೆ.ಈ ಬಾರಿ ಉತ್ತಮ ಮಳೆ ಆಗುತ್ತಿದೆ. ಇದರಿಂದ ಡಿ.ಬಿ.ಕೆರೆ ಜಲಾಶಯ ಮೈದುಂಬಿ ಹರಿಯುತ್ತಿದೆ. ಕಾಲುವೆಗಳಿಗೂ ನೀರು ಹರಿಸಲಾಗುತ್ತಿದೆ. ನಗರದ ಅಮರಾವತಿ ಬಳಿ ಇರುವ ಕಾಲುವೆಗೂ ಜಲಾಶಯದ ನೀರು ಹರಿಸಲಾಗುತ್ತಿದೆ.
ಕಡ್ಲೆಗೊಂದಿಯಿಂದ ಶೇರಾಪುರ, ಮಹಜೇನಹಳ್ಳಿ, ಅಮರಾವತಿ, ಗುತ್ತೂರಿನಿಂದ ಮುಂದೆ ಸಾಗುವ ಈ ಕಾಲುವೆಯಲ್ಲಿ ಕಡ್ಲೆಗೊಂದಿಯಿಂದ ಮುಂದಿನವರೆಗೂ ನೀರು ಸರಾಗವಾಗಿ ಹರಿಯುತ್ತಿದೆ. ಆ ಭಾಗದ ರೈತರು ನೀರನ್ನು ತಮ್ಮ ಜಮೀನುಗಳಿಗೆ ಹರಿಸುತ್ತಿದ್ದಾರೆ. ಆದರೆ, ನಂತರದಿಂದ ಶುರುವಾಗಿರುವ ಕಾಲುವೆಯಲ್ಲಿ ಹೂಳಿನಿಂದಾಗಿ ನೀರು ಹರಿಯುತ್ತಿಲ್ಲ. ಶೇರಾಪುರ, ಮಹಜೇನಹಳ್ಳಿ, ಅಮರಾವತಿ ಹಾಗೂ ಮುಂದಿನ ಗ್ರಾಮಗಳ ವ್ಯಾಪ್ತಿಯ ಗ್ರಾಮಗಳ ನೂರಾರು ಎಕರೆ ಪ್ರದೇಶದ ಜಮೀನುಗಳಿಗೆ ನೀರಿದ್ದೂ ಸಿಗದಂತಾಗಿದೆ.3 ಕಿ.ಮೀ. ಹೂಳು ತೆರವು:
ಮೆಕ್ಕೆಜೋಳ ಸೇರಿದಂತೆ ನಾನಾ ಬೆಳೆಗಳನ್ನು ಬೆಳೆದಿರುವ ರೈತರು ಕಾಲುವೆಯಲ್ಲಿ ನೀರು ಹರಿಯದಿರುವುದನ್ನು ಕಂಡು ನೀರಾವರಿ ಇಲಾಖೆ ಅಧಿಕಾರಿಗಳ ಗಮನ ಸೆಳೆದರೂ ಉಪಯೋಗವಾಗಿರಲಿಲ್ಲ. ಈ ಹಿನ್ನೆಲೆ ಸೋಮವಾರದಿಂದ ರೈತರೇ ಸ್ವಂತ ಹಣ ಹಾಕಿ, ಹಿಟಾಚಿ ಯಂತ್ರದ ಮೂಲಕ ಕಾಮಗಾರಿ ನಡೆಸುತ್ತಿದ್ದಾರೆ. ಈಗಾಗಲೇ ಅಂದಾಜು ೩ ಕಿ.ಮೀ.ವರೆಗೆ ಹೂಳು ತೆಗೆಸಿದ್ದಾರೆ. ಆದರೂ ನೀರು ಬಂದಿಲ್ಲ. ಇದರಿಂದ ಈಗ ರೈತರು ಹತಾಶರಾಗಿದ್ದಾರೆ. ನಮ್ಮ ನೋವಿಗೆ ಸ್ಪಂದಿಸುವವರು ಯಾರೂ ಇಲ್ಲವೆಂದು ಬೇಸರಗೊಂಡಿದ್ದಾರೆ.ಶೇರಾಪುರ ಭಾಗದಿಂದ ಮೇಲಕ್ಕೆ ಇನ್ನೂ ಮೂರ್ನಾಲ್ಕು ಕಿ.ಮೀ.ವರೆಗಿನ ಕಾಲುವೆಯಲ್ಲಿರುವ ಹೂಳು ತೆಗೆಸಬೇಕಾಗಿದೆ. ಆ ಹೂಳನ್ನು ತೆಗೆಸಲು ನೀರಾವರಿ ಇಲಾಖೆ ಮುಂದಾಗುತ್ತಿಲ್ಲ. ಅನುದಾನ ಇಲ್ಲ ಎಂದು ಕೈಚೆಲ್ಲುತ್ತಿದ್ದಾರೆ. ಈಗಾಗಲೇ ₹೬೦ ಸಾವಿರ ಖರ್ಚಾಗಿದೆ. ಉಳಿದ ಹೂಳನ್ನು ತೆಗೆಸಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುಂದಾಗಬೇಕೆಂದು ಸಂತ್ರಸ್ತ ರೈತರು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ರೈತರಾದ ಗುತ್ತೂರು ಮಂಜುನಾಥ, ಗೌಡರ ಪುಟ್ಟಪ್ಪ, ಅಮರಾವತಿ ಗಂಗಣ್ಣರ ಬಸಪ್ಪ, ಗುತ್ತೂರು ಬಸವರಾಜ್, ಹರಿಹರದ ಕೆಂಚಪ್ಪ, ಅಮರಾವತಿ ಮಧು, ಸೋಮಣ್ಣ, ಚೇರ್ಮನ್ ಬಸಣ್ಣ, ಮಂಜಣ್ಣ ಇದ್ದರು.- - - -೨೨ಎಚ್‌ಆರ್‌ಆರ್೩:
ಹರಿಹರ ಹೊರವಲಯದ ಅಮರಾವತಿ ಬಳಿಯಿರುವ ಡಿ.ಬಿ.ಕೆರೆ ಕಾಲುವೆಯಲ್ಲಿ ಸ್ವಂತ ಖರ್ಚಿನಲ್ಲಿ ಹೂಳು ತೆಗೆಸುತ್ತಿರುವ ರೈತರು.