ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಇಲ್ಲಿನ ಗಾಂಧಿನಗರದಲ್ಲಿರುವ ಆರೋಗ್ಯ ಕೇಂದ್ರದ ಆವರಣವು ಮಳೆಗೆ ಕೆಸರು ಗದ್ದೆಯಂತಾಗಿದ್ದು, ರೋಗಿಗಳು ಆಸ್ಪತ್ರೆಗೆ ಬಂದು ಹೋಗಲು ತೊಂದರೆ ಅನುಭವಿಸುವಂತಾಗಿದೆ ಎಂದು ಸಮಾಜ ಸೇವಕ ಎಂ. ಸೈಫುಲ್ಲಾ ಒತ್ತಾಯಿಸಿದ್ದಾರೆ.ತುರ್ತು ಪರಿಸ್ಥಿತಿಯಿರುವ ರೋಗಿಗಳು ಆಸ್ಪತ್ರೆಗೆ ಬರಬೇಕೆಂದರೆ ಇಲ್ಲಿಗೆ ವಾಹನಗಳೇ ಬರಲಾಗುತ್ತಿಲ್ಲ ಅಷ್ಟರ ಮಟ್ಟಿಗೆ ಆಸ್ಪತ್ರೆಯ ಆವರಣ ಕೆಸರು ಮಯವಾಗಿದೆ. ಇಲ್ಲಿನ ಬೋವಿ ಕಾಲೋನಿ, ಬಸವೇಶ್ವರನಗರ, ಹಿಪ್ಪೆತೋಪು, ಶಾಂತಿ ನಗರ, ಇಂದಿರಾ ನಗರ, ಶ್ರೀರಾಮ ನಗರ, ಕರಿಬಸಪ್ಪ ಕಾಲೋನಿ, ತಮಿಳು ಕಾಲೋನಿ, ಗಾಂಧಿನಗರ ಬಡಾವಣೆಗಳ ಜನರು ಜ್ವರ, ತಲೆನೋವು ಮತ್ತಿತರ ಸಣ್ಣ ಪುಟ್ಟ ಕಾಯಿಲೆಗಳಿಗೆ ಇದೇ ಆಸ್ಪತ್ರೆ ಅವಲಂಬಿಸಿದ್ದಾರೆ.ಆದರೆ ಮಳೆ ಬಂದರೆ ಸಾಕು ಆಸ್ಪತ್ರೆಯ ಆವರಣ ಕೆಸರು ಗದ್ದೆಯಂತಾಗಲಿದೆ. ಆಸ್ಪತ್ರೆ ತೆರೆದರೆ ಸಾಲದು ಅದಕ್ಕೆ ಪೂರಕ ವ್ಯವಸ್ಥೆಯನ್ನು ಕಲ್ಪಿಸಬೇಕು. ರೋಗಿಗಳು ಆಸ್ಪತ್ರೆಗೆ ರೋಗ ಗುಣಮುಖವಾಗಲೆಂದು ಬರುತ್ತಾರೆ. ಆದರೆ ಈ ಆಸ್ಪತ್ರೆಯ ಸುತ್ತಮುತ್ತ ಸ್ವಚ್ಛತೆ ಇಲ್ಲ. ಮಳೆ ನೀರು ಕಲುಷಿತಗೊಂಡು ಸೊಳ್ಳೆಗಳು ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗಗಳ ಭೀತಿ ಉಂಟಾಗಿದ್ದು, ಕೂಡಲೆ ಅಧಿಕಾರಿಗಳು ಆಸ್ಪತ್ರೆಯ ಸುತ್ತ ಸ್ವಚ್ಛತೆ ಕೈಗೊಂಡು, ಆವರಣಕ್ಕೆ ಪಾರ್ಕಿಂಗ್ ಕಲ್ಲುಗಳನ್ನು ಹಾಕಿಸಿಕೊಡಬೇಕು.
ದಿನದ ೨೪ಗಂಟೆ ವೈದ್ಯರ ಸೇವೆಗೆ ಆಗ್ರಹ:ಗಾಂಧಿನಗರ ಭಾಗದಲ್ಲಿ ಸುಮಾರು 30ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿದ್ದು, ಈ ಆಸ್ಪತ್ರೆಯಲ್ಲಿ ಬೆಳಗ್ಗೆಯಿಂದ ಸಂಜೆ 5 ಗಂಟೆಯವರೆಗೆ ಮಾತ್ರ ವೈದ್ಯರು ಹಾಗೂ ನರ್ಸ್‌ಗಳು ಕಾರ್ಯನಿರ್ವಹಿಸುತ್ತಾರೆ. ತುರ್ತು ಚಿಕಿತ್ಸೆಗೆ ಬೇರೆ ಬೇರೆ ಆಸ್ಪತ್ರೆಗಳನ್ನು ಇಲ್ಲಿನ ಜನರು ಅವಲಂಬಿಸುವಂತಾಗಿದೆ. ರಾತ್ರಿ ವೇಳೆ ತುರ್ತು ಪರಿಸ್ಥಿತಿ ಎದುರಾದರೆ ಗಾಂಧಿನಗರದಿಂದ ಬೇರೆ ಆಸ್ಪತ್ರೆಗಳಿಗೆ ಹೋಗಲು ಈ ಭಾಗದಲ್ಲಿ ರಸ್ತೆಗಳೇ ಸರಿಯಾಗಿಲ್ಲ. ಆದ್ದರಿಂದ ಇಲ್ಲಿರುವ ನಗರ ಆರೋಗ್ಯ ಕೇಂದ್ರವನ್ನು ಉನ್ನತ ದರ್ಜೆಗೆ ಏರಿಸಿ ದಿನದ 24 ಗಂಟೆಗಳ ಕಾಲ ವೈದ್ಯಕೀಯ ಸೇವೆ ಸಿಗುವಂತೆ ಮಾಡಬೇಕು.