ಸಾರಾಂಶ
ಕನ್ನಡಪ್ರಭ ವಾರ್ತೆ ದೇವದುರ್ಗ
ಹಾಸ್ಟೆಲ್ ಊಟ ಸೇವಿಸಿ ಸುಮಾರು 70 ಜನ ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿರುವ ಘಟನೆ ಸಮೀಪದ ಅರಕೇರಾ ಪಟ್ಟಣದಲ್ಲಿ ನಡೆದಿದ್ದು, ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿದ್ಯಾರ್ಥಿನಿಯರನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಅರಕೇರಾ ಪಟ್ಟಣದ ಪರಿಶಿಷ್ಟ ಪಂಗಡದ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿನಿಯರು ಸೋಮವಾರ ರಾತ್ರಿ ಚಪಾತಿ, ಅಲಸಂದಿ ಕಾಳು, ಅನ್ನ, ಸಾಂಬಾರ್ ಊಟ ಮಾಡಿದ್ದಾರೆ. ಅದೇ ರೀತಿ ಮಂಗಳವಾರ ಬೆಳಗಿನ ಉಪಹಾರ ಮಂಡಕ್ಕಿ ವಗ್ಗರಣೆ, ಮೊಸರು ಸೇವಿಸಿ ಶಾಲೆಗೆ ಹೋಗಿದ್ದಾರೆ. ಕೆಲ ಸಮಯದ ನಂತರ ವಿದ್ಯಾರ್ಥಿನಿಯರಲ್ಲಿ ವಾಂತಿ, ಭೇದಿ, ತಲೆ ನೋವು, ಹೊಟ್ಟೆ ನೋವು, ಜ್ವರ ಕಾಣಿಸಿಕೊಂಡಿದ್ದು, ತಕ್ಷಣ ಶಾಲಾ ಸಿಬ್ಬಂದಿ ಹಾಗೂ ಸ್ಥಳೀಯರು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಅಸ್ವಸ್ಥಗೊಂಡ ಮಕ್ಕಳು ಕಣ್ಣೀರು ಹಾಕಿ ಆತಂಕಗೊಂಡಿದ್ದಾರೆ. ಘಟನೆ ಮಾಹಿತಿ ಪಡೆದ ಪಾಲಕರು ಆಸ್ಪತ್ರೆಗೆ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಸ್ಟೆಲ್ ವಾರ್ಡ್‌ನ್ ಹಾಗೂ ಸಿಬ್ಬಂದಿ ನಿರ್ಲಕ್ಷ್ಯವೇ ದುರ್ಘಟನೆಗೆ ಕಾರಣವೆಂದು ವಿದ್ಯಾರ್ಥಿನಿಯರು, ಪಾಲಕರು ಆರೋಪಿಸಿದ್ದಾರೆ.
ಘಟನೆಯಿಂದ ತಕ್ಷಣ ಎಚ್ಚೇತ್ತ ಹಾಸ್ಟೆಲ್ ಸಿಬ್ಬಂದಿ ವಸತಿ ನಿಲಯದಲ್ಲಿ ಸ್ವಚ್ಛತಾ ಕಾರ್ಯಕ್ಕೆ ಮುಂದಾದರು. ಹಾಸ್ಟೆಲ್ ಕೊಠಡಿಗಳು, ಆಹಾರ ದಾಸ್ತಾನು ಕೊಠಡಿ, ಭೋಜನಾಲಯ, ಶೌಚಾಲಯ ಸೇರಿ ಸುತ್ತ ಮುತ್ತಲಿನ ಪ್ರದೇಶದಲ್ಲಿ ಬ್ಲೀಚಿಂಗ್ ಪೌಡರ್ ಹಾಕಿ ಸ್ವಚ್ಛತೆ ಮಾಡಿದರು.ವಿದ್ಯಾರ್ಥಿನಿಯರ ಅಸ್ವಸ್ಥಗೊಂಡಿರುವ ಮಾಹಿತಿ ದೊರಕುತ್ತಿದ್ದಂತೆ ಸಹಾಯಕ ಆಯುಕ್ತ ಎಸ್.ಎಸ್ ಸಂಪಗಾವಿ, ಡಿಎಚ್‌ಒ ಡಾ.ಸುರೇಂದ್ರಬಾಬು ಅವರು ಹಾಸ್ಟೆಲ್ ಹಾಗೂ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು. ಇದೇ ವೇಳೆ ನಿರ್ಲಕ್ಷ್ಯ ವಹಿಸಿದ ಸಿಬ್ಬಂದಿ ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಪರಿಶಿಷ್ಠ ವರ್ಗಗಳ ಜಿಲ್ಲಾ ಅಧಿಕಾರಿ ರಾಜೇಂದ್ರ ಜಲ್ದಾರ್, ಡಿಎಚ್ಒ ಡಾ.ಸುರೇಂದ್ರ ಬಾಬು, ತಾಪಂ ಇಒ ಬಾಬು ರಾಠೋಡ, ಟಿಎಚ್ಒ ಡಾ.ಬನದೇಶ, ನಾಡ ತಹಸೀಲ್ದಾರ್ ಮನೋಹರ್ ನಾಯಕ, ಕಂದಾಯ ನಿರೀಕ್ಷಕ ಉಮಾಶಂಕರ ಇತರರಿದ್ದಾರೆ.;Resize=(128,128))
;Resize=(128,128))
;Resize=(128,128))
;Resize=(128,128))