ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ ನಗರದ ರೈಲ್ವೆ ನಿಲ್ದಾಣದಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಆರಂಭವಾದ ಮೇಲ್ದರ್ಜೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವುದರಿಂದ ಪ್ರಯಾಣಿಕರು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.ಪ್ರತಿದಿನ ಸಾವಿರಾರು ಪ್ರಯಾಣಿಕರು ಸಂಚರಿಸುವ ಅರಸೀಕೆರೆ ಜಂಕ್ಷನ್ ನಿಲ್ದಾಣದಲ್ಲಿ ನೂರಾರು ರೈಲುಗಳ ಓಡಾಟವಿದೆ. ಆದರೆ ನಿಲ್ದಾಣದ ಪ್ರವೇಶ ದಾರಿಯೇ ಮಳೆ ಬಿದ್ದರೆ ಕೆರೆಯಂತಾಗುತ್ತಿದ್ದು, ನೀರು ನಿಂತು ಜನರು ಹಾದು ಹೋಗಲು ತುಂಬಾ ಕಷ್ಟವಾಗುತ್ತಿದೆ. ಸ್ಥಳೀಯರು ನಿಲ್ದಾಣ ತಲುಪಲು ಈಜುವ ಪರಿಸ್ಥಿತಿ ಎದುರಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ನೂರಾರು ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಮೇಲ್ದರ್ಜೆ ಕಾಮಗಾರಿಯು ತ್ವರಿತಗತಿಯಲ್ಲಿ ಮುಗಿದರೆ ಮಾತ್ರ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಆದರೆ ಕಾಮಗಾರಿ ಪೂರ್ಣಗೊಳ್ಳುವ ತನಕ ಕನಿಷ್ಠ ನಿಲ್ದಾಣದ ದಾರಿಯನ್ನು ಸರಿಪಡಿಸಿ ತಾತ್ಕಾಲಿಕ ವ್ಯವಸ್ಥೆ ಮಾಡಬೇಕೆಂದು ಪ್ರಯಾಣಿಕರು ಆಗ್ರಹಿಸುತ್ತಿದ್ದಾರೆ.ನಗರದ ವಾಸಿ ಹಾಗೂ ಸಿವಿಲ್ ಕಂಟ್ರ್ಯಾಕ್ಟರ್ ಸುಹಾಸ್ ಪ್ರತಿಕ್ರಿಯಿಸಿ, ಅರಸೀಕೆರೆ ಜಂಕ್ಷನ್ ಕರ್ನಾಟಕದ ಪ್ರಮುಖ ರೈಲ್ವೆ ಸಂಪರ್ಕ ಕೇಂದ್ರವಾಗಿರುವುದರಿಂದ, ಇಲ್ಲಿನ ಅಭಿವೃದ್ಧಿ ಕಾಮಗಾರಿಗಳು ರಾಜ್ಯದ ಸಾರಿಗೆ ವ್ಯವಸ್ಥೆಯ ಮೇಲೆಯೂ ನೇರವಾಗಿ ಪ್ರಭಾವ ಬೀರುತ್ತವೆ. ಆದ್ದರಿಂದ ಈ ಕಾಮಗಾರಿಯನ್ನು ಶೀಘ್ರಗತಿಯಲ್ಲಿ ಮುಗಿಸಲು ಸಂಬಂಧಿತ ಇಲಾಖೆ ಗಂಭೀರತೆ ತೋರಬೇಕು ಎಂದು ತಿಳಿಸಿದ್ದಾರೆ.