ಮಣ್ಣು ನೀರಿನ ಸಮರ್ಪಕ ನಿರ್ವಹಣೆ ಮತ್ತು ವೈಜ್ಞಾನಿಕ ಕೃಷಿ ಪದ್ಧತಿಗಳ ಸಂಯೋಜನೆಯಿಂದ ದಾಳಿಂಬೆ ಬೆಳೆಯಲ್ಲಿ ಉತ್ತಮ ಆದಾಯ ಸಾಧ್ಯವಿದ್ದು, ಇದಕ್ಕೆ ತಾಲೂಕು ಅತ್ಯಂತ ಸೂಕ್ತ ಪ್ರದೇಶವಾಗಿದೆ ಎಂದು ದಾಳಿಂಬೆ ಬೆಳೆಯ ಸಲಹೆಗಾರ ಹಾಗೂ ಬೇಸಾಯ ಶಾಸ್ತ್ರ ತಜ್ಞ ಅಕ್ಷಯ್ ಹೇಳಿದರು. ತೋಟಗಾರಿಕಾ ಇಲಾಖೆಯ ಅಧಿಕಾರಿ ಸೀಮಾ ಮಾತನಾಡಿ, ದಾಳಿಂಬೆ ಬೆಳೆ ಈಗ ಶ್ರೀಮಂತ ತೋಟಗಾರಿಕಾ ಬೆಳೆಯಾಗಿ ರೂಪಾಂತರಗೊಂಡಿದ್ದು, ಇದಕ್ಕೆ ರೈತರ ಶ್ರಮ ಹಾಗೂ ಬದ್ಧತೆಯೇ ಪ್ರಮುಖ ಕಾರಣವಾಗಿದೆ. ಆಧುನಿಕ ಕೃಷಿ ವಿಧಾನಗಳನ್ನು ಅಳವಡಿಸಿಕೊಂಡು ಉತ್ತಮ ಆದಾಯ ಪಡೆದಿರುವ ಹಲವಾರು ಉದಾಹರಣೆಗಳಿವೆ. ರೈತರು ಒಗ್ಗಟ್ಟಾಗಿ ಕಾರ್ಯನಿರ್ವಹಿಸಿದರೆ ಯಾವುದೇ ಸಾಧನೆ ಸಾಧ್ಯ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಮಣ್ಣು ನೀರಿನ ಸಮರ್ಪಕ ನಿರ್ವಹಣೆ ಮತ್ತು ವೈಜ್ಞಾನಿಕ ಕೃಷಿ ಪದ್ಧತಿಗಳ ಸಂಯೋಜನೆಯಿಂದ ದಾಳಿಂಬೆ ಬೆಳೆಯಲ್ಲಿ ಉತ್ತಮ ಆದಾಯ ಸಾಧ್ಯವಿದ್ದು, ಇದಕ್ಕೆ ತಾಲೂಕು ಅತ್ಯಂತ ಸೂಕ್ತ ಪ್ರದೇಶವಾಗಿದೆ ಎಂದು ದಾಳಿಂಬೆ ಬೆಳೆಯ ಸಲಹೆಗಾರ ಹಾಗೂ ಬೇಸಾಯ ಶಾಸ್ತ್ರ ತಜ್ಞ ಅಕ್ಷಯ್ ಹೇಳಿದರು.ತಾಲ್ಲೂಕಿನ ಬಾಣಾವಾರ ಪಟ್ಟಣದಲ್ಲಿ ಆಯೋಜಿಸಿದ್ದ ಪ್ರಗತಿಪರ ದಾಳಿಂಬೆ ರೈತರ ಸನ್ಮಾನ ಸಮಾರಂಭ ಹಾಗೂ ಸಮರ್ಥ್ ರೈತ ಮಿತ್ರ ಆಗ್ರೋ ಏಜೆನ್ಸಿಯ ನೂತನ ಶಾಖಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಾಳಿಂಬೆ ಬೆಳೆಯಲ್ಲಿ ಲಾಭದ ಅವಕಾಶಗಳಿವೆ. ಆದರೆ ರೋಗ ಹಾಗೂ ಕೀಟಗಳ ನಿಯಂತ್ರಣಕ್ಕೆ ಸಮಯೋಚಿತ ಜೈವಿಕ ಮತ್ತು ರಾಸಯನಿಕ ಕ್ರಮಗಳನ್ನು ಅನುಸರಿಸುವುದು ಅಗತ್ಯ. ಜೊತೆಗೆ ಖರ್ಚು ಕಡಿಮೆ ಮಾಡುವ ಕೃಷಿ ವಿಧಾನಗಳನ್ನು ಅಳವಡಿಸಿಕೊಂಡರೆ ರೈತರು ಉತ್ತಮ ಲಾಭ ಗಳಿಸಬಹುದು ಎಂದು ಸಲಹೆ ನೀಡಿದರು.ಬಾಣಾವಾರ ಹೋಬಳಿಯ ರೈತರಿಗೆ ದಾಳಿಂಬೆ ಬೆಳೆಯ ಕುರಿತು ಸಮಗ್ರ ಮಾಹಿತಿ, ತಾಂತ್ರಿಕ ಮಾರ್ಗದರ್ಶನ ಹಾಗೂ ಅಗತ್ಯ ಸಲಹೆಗಳನ್ನು ನೀಡುವ ಉದ್ದೇಶದಿಂದ ಈ ಹೊಸ ಶಾಖೆ ಆರಂಭಿಸಲಾಗಿದೆ. ವೈಜ್ಞಾನಿಕ ಪದ್ಧತಿಯಲ್ಲಿ ದಾಳಿಂಬೆ ಬೆಳೆಯುವ ಮೂಲಕ ರೈತರು ತಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಿಕೊಳ್ಳಬೇಕು ಎಂದರು.ತೋಟಗಾರಿಕಾ ಇಲಾಖೆಯ ಅಧಿಕಾರಿ ಸೀಮಾ ಮಾತನಾಡಿ, ದಾಳಿಂಬೆ ಬೆಳೆ ಈಗ ಶ್ರೀಮಂತ ತೋಟಗಾರಿಕಾ ಬೆಳೆಯಾಗಿ ರೂಪಾಂತರಗೊಂಡಿದ್ದು, ಇದಕ್ಕೆ ರೈತರ ಶ್ರಮ ಹಾಗೂ ಬದ್ಧತೆಯೇ ಪ್ರಮುಖ ಕಾರಣವಾಗಿದೆ. ಆಧುನಿಕ ಕೃಷಿ ವಿಧಾನಗಳನ್ನು ಅಳವಡಿಸಿಕೊಂಡು ಉತ್ತಮ ಆದಾಯ ಪಡೆದಿರುವ ಹಲವಾರು ಉದಾಹರಣೆಗಳಿವೆ. ರೈತರು ಒಗ್ಗಟ್ಟಾಗಿ ಕಾರ್ಯನಿರ್ವಹಿಸಿದರೆ ಯಾವುದೇ ಸಾಧನೆ ಸಾಧ್ಯ ಎಂದು ಹೇಳಿದರು. ತಮ್ಮಡಿಹಳ್ಳಿ ಕುಪ್ಪೂರು ವಿರಕ್ತ ಮಠದ ಅಭಿನವ ಮಲ್ಲಿಕಾರ್ಜುನ ದೇಶಿ ಕೇಂದ್ರ ಸ್ವಾಮೀಜಿ ಮಾತನಾಡಿ, ಸರ್ಕಾರ ರೈತರಿಗೆ ಪ್ರೋತ್ಸಾಹ ಮತ್ತು ಸಹಾಯಧನ ನೀಡುವುದರ ಜೊತೆಗೆ ಬೆಳೆಗಳಿಗೆ ಬೆಂಬಲ ಬೆಲೆ ಹಾಗೂ ಸಮರ್ಪಕ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಆಹಾರ ಉತ್ಪಾದನೆ ಕುಂಠಿತವಾಗಿ ಸಮಾಜವು ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಭಾಗಗಳಲ್ಲಿ ದಾಳಿಂಬೆ ಬೆಳೆದು ಯಶಸ್ಸು ಕಂಡ ಪ್ರಗತಿಪರ ರೈತರನ್ನು ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬೇಲೂರು ಶಾಸಕ ಹುಲ್ಲೇಹಳ್ಳಿ ಸುರೇಶ್, ಚಿಕ್ಕಮಗಳೂರು ಮಾಜಿ ಶಾಸಕ ಸಿ.ಟಿ. ರವಿ, ಜೆಡಿಎಸ್ ಮುಖಂಡ ಎನ್.ಆರ್‌. ಸಂತೋಷ್ ಕುಮಾರ್, ಕೃಷಿ ಅಧಿಕಾರಿ ಶಿವಕುಮಾರ್, ಬಿಜೆಪಿ ಮುಖಂಡ ಜಿವಿಟಿ ಬಸವರಾಜು, ಹಾಸನ ಕೃಷಿ ವಿದ್ಯಾಲಯದ ಕೆ.ಎನ್. ಮುನಿಸ್ವಾಮಿ ಗೌಡ, ಬಾಣಾವಾರ ಗ್ರಾಮ ಪಂಚಾಯಿತಿ ಸದಸ್ಯ ಬಿ.ಆರ್‌. ಸುರೇಶ್, ಚಿಕ್ಕನಾಯಕನಹಳ್ಳಿ ಸಹಾಯಕ ಕೃಷಿ ಅಧಿಕಾರಿ ಸೋಮಶೇಖರ್, ರವಿಕುಮಾರ್‌, ಪರಮಶಿವ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.