ಸಾರಾಂಶ
ಕೃಷ್ಣ ಲಮಾಣಿ
ಹೊಸಪೇಟೆ : ವಿಜಯನಗರ ಜಿಲ್ಲೆಯ ಅಮರಾವತಿಯಲ್ಲಿ ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್ಸ್ ಲಿ.ಸಂಸ್ಥೆ ವತಿಯಿಂದ ಹೊಸಪೇಟೆ ಟ್ರಕ್ ಟರ್ಮಿನಲ್ ನಿರ್ಮಾಣವಾಗಿದ್ದು, ಸೋಮವಾರ ಲೋಕಾರ್ಪಣೆ ಆಗುತ್ತಿದೆ.
ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಈ ಟ್ರಕ್ ಟರ್ಮಿನಲ್ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್, ಶಾಸಕ ಎಚ್.ಆರ್.ಗವಿಯಪ್ಪ, ಸಂಸದ ಈ. ತುಕಾರಾಂ, ಶಾಸಕರು ಹಾಗೂ ಜನಪ್ರತಿನಿಧಿಗಳು ಕೂಡ ಭಾಗವಹಿಸಲಿದ್ದಾರೆ.
ಟ್ರಕ್ ಟರ್ಮಿಲ್ ಸ್ವರೂಪ:
1980ರಲ್ಲಿ ಕರ್ನಾಟಕ ಟ್ರಕ್ ಟರ್ಮಿನಲ್ಸ್ ಲಿ.ಕಂಪನಿಯನ್ನು ಸರ್ಕಾರ ಸ್ಥಾಪನೆ ಮಾಡಿದ್ದು, 1991ರಲ್ಲಿ ದೇವರಾಜ ಅರಸು ಅವರ ಸ್ಮರಣಾರ್ಥ ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್ಸ್ ಲಿಮಿಟೆಡ್ ಎಂದು ಬದಲಾಯಿಸಿದೆ. ಹೊಸಪೇಟೆಯ ಅಮರಾವತಿಯಲ್ಲಿ 37.26 ಎಕರೆ ಜಾಗದಲ್ಲಿ ಹೊಸಪೇಟೆ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿತ್ತು. ಈಗ ₹37.10 ಕೋಟಿ ವೆಚ್ಚದಲ್ಲಿ 20 ಎಕರೆ ಜಾಗದಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣ ಮಾಡಲಾಗಿದೆ.
120 ಬೆಡ್ ಡಾರ್ಮಿಟರಿ:
ಟರ್ಮಿನಲ್‌ನಲ್ಲಿ 120 ಚಾಲಕರು, ಕ್ಲೀನರ್‌ಗಳು ವಾಸ್ತವ್ಯ ಹೂಡಲು 120 ಬೆಡ್‌ಗಳ ಡಾರ್ಮಿಟರಿ ನಿರ್ಮಾಣ ಮಾಡಲಾಗಿದೆ. ಡಾರ್ಮಿಟರಿಯಲ್ಲಿ ಶೌಚಾಲಯ, ಸ್ನಾನಗೃಹ, ಕೊಠಡಿಗಳು ಕೂಡ ಇವೆ. ಈ ಕಟ್ಟಡದಲ್ಲೇ ಕ್ಯಾಂಟಿನ್ ವ್ಯವಸ್ಥೆ ಕೂಡ ಮಾಡಲಾಗಿದೆ.400 ಲಾರಿಗಳ ನಿಲುಗಡೆ: ಈ ಟರ್ಮಿನಲ್ 400 ಲಾರಿಗಳ ನಿಲುಗಡೆ ಸಾಮರ್ಥ್ಯ ಹೊಂದಿದೆ. ದೇಶದ ಯಾವುದೇ ಭಾಗದಿಂದ ಬರುವ ಲಾರಿಗಳನ್ನು ಇಲ್ಲಿ ಚಾಲಕರು, ಕ್ಲೀನರ್‌ಗಳು ನಿಲ್ಲಿಸಬಹುದು. ಇದರಿಂದ ಚಾಲಕರಿಗೂ ವಾಸ್ತವ್ಯಕ್ಕೆ ಅನುಕೂಲ ಆಗಲಿದೆ. ಜತೆಗೆ, ಈ ಟರ್ಮಿನಲ್ ಬಳಿ ವೈದ್ಯಕೀಯ ಸೌಲಭ್ಯ ಕೂಡ ದೊರೆಯಲಿದೆ. ಅಲ್ಲದೇ, ಈಗ ಜಿಲ್ಲಾಸ್ಪತ್ರೆ ಕಟ್ಟಡ ಕೂಡ ಟರ್ಮಿನಲ್‌ನಿಂದ 5 ಕಿ.ಮೀ. ಅಂತರದಲ್ಲಿ ನಿರ್ಮಾಣ ಆಗುತ್ತಿದೆ.
39 ಏಜೆಂಟ್ ಕೊಠಡಿಗಳು, 9 ಗ್ಯಾರೇಜ್ ಶಾಪ್ ನಿರ್ಮಿಸಲಾಗಿದೆ. 100 ವಾಣಿಜ್ಯ ನಿವೇಶನ, ಎರಡು ಪೆಟ್ರೋಲ್ ಬಂಕ್‌ಗಳು, ಎರಡು ಶೌಚಾಲಯ ಬ್ಲಾಕ್ ನಿರ್ಮಿಸಲಾಗಿದೆ. ಜತೆಗೆ, 22 ಉಗ್ರಾಣ ಪ್ಲಾಟ್ ಕೂಡ ನಿರ್ಮಿಸಲಾಗಿದೆ.
₹85 ಕೋಟಿ ಪ್ರಸ್ತಾವನೆ:
ಹೊಸಪೇಟೆ ಟ್ರಕ್ ಟರ್ಮಿನಲ್‌ನಲ್ಲಿ ಇನ್ನುಳಿದ 17.26 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸಲು ₹85 ಕೋಟಿ ಮೊತ್ತದ ಪ್ರಸ್ತಾವನೆಯನ್ನು ದೇವರಾಜ ಅರಸು ಟ್ರಕ್ ಟರ್ಮಿನಲ್ಸ್ ಲಿ. ಸಂಸ್ಥೆ ಸರ್ಕಾರಕ್ಕೆ ಸಲ್ಲಿಸಿದೆ. ಈ ಹಣ ಮಂಜೂರಾದರೆ ಮತ್ತೆ 265 ಟ್ರಕ್ ಗಳ ನಿಲುಗಡೆಗೆ ನಿಲ್ದಾಣ, ಉದ್ಯಾನ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಲು ಕೂಡ ಪ್ಲಾನ್ ಮಾಡಲಾಗಿದೆ ಎಂದು ದೇವರಾಜ ಅರಸು ಟ್ರಕ್ ಟರ್ಮಿನಲ್ಸ್ ಲಿ. ಸಂಸ್ಥೆಯ ಕಾರ್ಯನಿರ್ವಾಹಕ ಎಂಜಿನಿಯರ್ ಗಿರಿಗೌಡ ಎನ್.ಜಿ. ''''ಕನ್ನಡಪ್ರಭ''''ಕ್ಕೆ ತಿಳಿಸಿದರು.ಫುಡ್ ಪಾರ್ಕ್ ಪ್ಲಾನ್:
ಲಾರಿ ಚಾಲಕರು, ಕ್ಲೀನರ್‌ಗಳಿಗಾಗಿ ಫುಡ್ ಪಾರ್ಕ್ ನಿರ್ಮಾಣ ಮಾಡಲು ಕೂಡ ಯೋಜಿಸಲಾಗುತ್ತಿದೆ. ಇದಕ್ಕಾಗಿ ಜಾಗ ಕೂಡ ಒದಗಿಸಲು ದೇವರಾಜ ಅರಸು ಟ್ರಕ್ ಟರ್ಮಿನಲ್ ಲಿ. ಸಂಸ್ಥೆ ಮುಂದಾಗಿದೆ.
ಬೆಂಗಳೂರಿನ ಯಶವಂತಪುರ, ಮೈಸೂರು, ಧಾರವಾಡದ ಬೇಲೂರಿನಲ್ಲಿ ಟ್ರಕ್ ಟರ್ಮಿನಲ್ ಈಗಾಗಲೇ ಸ್ಥಾಪಿಸಲಾಗಿದೆ. ಬೆಂಗಳೂರಿನ ದಾಸನಪುರ, ಉತ್ತರ ಕನ್ನಡದ ದಾಂಡೇಲಿ, ಹುಬ್ಬಳ್ಳಿಯ ಅಂಚಟಗೇರಿ, ಚಾಮರಾಜನಗರದ ಗುಂಡ್ಲುಪೇಟೆ, ರಾಯಚೂರಿನ ಯರಮರಸ್‌ನಲ್ಲೂ ಟ್ರಕ್ ಟರ್ಮಿನಲ್ ಶೀಘ್ರವೇ ಪ್ರಾರಂಭವಾಗಲಿವೆ.
ಹೊಸಪೇಟೆ ಟ್ರಕ್ ಟರ್ಮಿನಲ್ ನಿರ್ಮಾಣದಿಂದ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ, ಮಧ್ಯ ಕರ್ನಾಟಕದ ಲಾರಿ ಚಾಲಕರು, ಕ್ಲೀನರ್‌ಗಳಿಗೆ ಅನುಕೂಲ ಆಗಲಿದೆ. ಲಾರಿಗಳ ಮಾಲೀಕರು ಕೂಡ ತಮ್ಮ ಲಾರಿಗಳನ್ನು ಸುಸಜ್ಜಿತ ಸೌಲಭ್ಯವುಳ್ಳ ಟರ್ಮಿನಲ್‌ನಲ್ಲಿ ನಿಲುಗಡೆ ಮಾಡಬಹುದು.
- ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ.
ಹೊಸಪೇಟೆಯ ಅಮರಾವತಿಯಲ್ಲಿ 37.26 ಎಕರೆ ಭೂಸ್ವಾಧೀನ ಮಾಡಿಕೊಂಡು 20 ಎಕರೆ ಪ್ರದೇಶದಲ್ಲಿ ಟ್ರಕ್ ಟರ್ಮಿನಲ್ ಅಭಿವೃದ್ಧಿಪಡಿಸಲಾಗಿದೆ. ಸುಸಜ್ಜಿತ ಡಾರ್ಮಿಟರಿ ನಿರ್ಮಾಣ ಮಾಡಲಾಗಿದೆ. 400 ಲಾರಿಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಉಳಿದ ಜಾಗವನ್ನು ಮುಂದಿನ ದಿನಗಳಲ್ಲಿ ಅಭಿವೃದ್ಧಿಪಡಿಸಲಾಗುವುದು.
- ಸಿ.ಎನ್. ಶಿವಪ್ರಕಾಶ, ವ್ಯವಸ್ಥಾಪಕ ನಿರ್ದೇಶಕ, ಡಿ. ದೇವರಾಜ ಅರಸು ಟ್ರಕ್ ಟರ್ಮಿನಲ್ಸ್ ಲಿ. ಸಂಸ್ಥೆ