ವಿಜಯನಗರ ಜಿಲ್ಲೆ ಕ್ಷಯರೋಗ ಮುಕ್ತ ಮಾಡೋಣ: ಜಿಲ್ಲಾಧಿಕಾರಿ ದಿವಾಕರ

| Published : Mar 26 2025, 01:39 AM IST

ವಿಜಯನಗರ ಜಿಲ್ಲೆ ಕ್ಷಯರೋಗ ಮುಕ್ತ ಮಾಡೋಣ: ಜಿಲ್ಲಾಧಿಕಾರಿ ದಿವಾಕರ
Share this Article
  • FB
  • TW
  • Linkdin
  • Email

ಸಾರಾಂಶ

ಕ್ಷಯರೋಗಕ್ಕೆ ಹೆದರುವ ಅವಶ್ಯಕತೆ ಇಲ್ಲ. ವೈದ್ಯರು ಹೇಳಿದ ರೀತಿಯಲ್ಲಿ ಸರಿಯಾದ ಚಿಕಿತ್ಸೆ ಪಡೆದರೆ, ಕ್ಷಯರೋಗವನ್ನು ಜಿಲ್ಲೆಯಿಂದ ಸಂಪೂರ್ಣ ನಿರ್ಮೂಲನೆ ಮಾಡಬಹುದು.

ವಿಶ್ವ ಕ್ಷಯರೋಗ ದಿನಾಚರಣೆಗೆ ಚಾಲನೆ

ಕನ್ನಡಪ್ರಭ ವಾರ್ತೆ ಹೊಸಪೇಟೆ

ಕ್ಷಯರೋಗಕ್ಕೆ ಹೆದರುವ ಅವಶ್ಯಕತೆ ಇಲ್ಲ. ವೈದ್ಯರು ಹೇಳಿದ ರೀತಿಯಲ್ಲಿ ಸರಿಯಾದ ಚಿಕಿತ್ಸೆ ಪಡೆದರೆ, ಕ್ಷಯರೋಗವನ್ನು ಜಿಲ್ಲೆಯಿಂದ ಸಂಪೂರ್ಣ ನಿರ್ಮೂಲನೆ ಮಾಡಬಹುದು. ಜಿಲ್ಲೆಯನ್ನು ಕ್ಷಯರೋಗ ಮುಕ್ತ ಮಾಡೋಣ ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಹೇಳಿದರು.

ವಿಜಯನಗರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಘಟಕದಿಂದ ನಗರದ ಒಳಾಂಗಣ ಕ್ರೀಡಾಂಗಣ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಕ್ಷಯರೋಗ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಜಿಲ್ಲೆಯ ನಾಲ್ಕು ಗ್ರಾಪಂಗಳು ಸಂಪೂರ್ಣ ಮುಕ್ತಗೊಳಿಸಿರುವ ಜತೆಗೆ ಉಳಿದ ಗ್ರಾಪಂಗಳು ಈ ನಿಟ್ಟಿನಲ್ಲಿ ಶ್ರಮಿಸಬೇಕು. ಅದೇ ರೀತಿ ಜಿಲ್ಲೆಯ ಎಂಟು ಸ್ಥಳೀಯ ಸಂಸ್ಥೆಗಳಾದ ಪಪಂ, ಪುರಸಭೆ ಹಾಗೂ ನಗರಸಭೆ ಟಿಬಿ ಮುಕ್ತವಾಗಲಿ. ಇದರಲ್ಲಿ ಹೊಸಪೇಟೆ ನಗರಸಭೆಯೇ ಮೊದಲಿಗೆ ಟಿಬಿ ಮುಕ್ತವಾಗಲಿ. ಒಟ್ಟಾರೆ ಟಿಬಿ ಮುಕ್ತ ಮಾಡುವುದೇ ನಮ್ಮ ಧ್ಯೇಯ. ಇದಕ್ಕೆ ಎಲ್ಲರ ಸಹಕಾರ ಬೇಕು ಎಂದರು.

ಈ ಹಿಂದೆ ಟಿಬಿ ಭಯಾನಕ ರೋಗ ಎಂಬ ಭಾವನೆ ಇತ್ತು. ಆದರೆ, ಈಗ ಸರ್ಕಾರದ ಪ್ರಯತ್ನದಿಂದ ಕಡಿಮೆಯಾಗುತ್ತಿದೆ. ನಮ್ಮ ರಾಜ್ಯದಲ್ಲಿ ನಿಯಂತ್ರಣದಲ್ಲಿದೆ. ನಮ್ಮ ಜಿಲ್ಲೆಯಲ್ಲಿ 1205 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ 750 ಎಚ್‌ಐವಿ ಪಾಸಿಟಿವ್ ಇದೆ. 500 ಜನರು ಇತರರಿದ್ದಾರೆ. ಇಮ್ಯುನಿಟಿ ಕಡಿಮೆ ಇದ್ದವರಲ್ಲಿ ಬರುತ್ತಿದೆ. ಪೋಷಕಾಂಶ ಹೆಚ್ಚಳ ಮಾಡಿಕೊಂಡು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು. ಈ ರೋಗ ಲಕ್ಷಣ ಕಂಡುಬಂದರೆ ನಿರ್ಲಕ್ಷಿಸದೇ ಅಗತ್ಯ ಚಿಕಿತ್ಸೆ ಪಡೆದುಕೊಳ್ಳಬೇಕು. ಸರ್ಕಾರದಿಂದ ಉಚಿತ ಚಿಕಿತ್ಸೆ ನೀಡಲಾಗುತ್ತದೆ ಎಂದರು.

ಆರೋಗ್ಯ ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ಗ್ರಾಮವಾರು ಪರಿಶೀಲನೆ ಮಾಡಿ, ಜನರಿಗೆ ಮಾಹಿತಿ ನೀಡಬೇಕು. ಗುಣಮುಖರಾಗುವವರ ಸಂಖ್ಯೆ ಹೆಚ್ಚಾಗಿದ್ದು, ಆರೋಗ್ಯ ಇಲಾಖೆಗೆ ಎಲ್ಲರೂ ಸಹಕಾರ ನೀಡುವ ಮೂಲಕ ಕ್ಷಯಮುಕ್ತ ಜಿಲ್ಲೆ ಮಾಡಲು ಎಲ್ಲರೂ ಪಣ ತೊಡಬೇಕು ಎಂದರು.

ಹುಡಾ ಅಧ್ಯಕ್ಷ ಇಮಾಮ್ ನಿಯಾಜಿ ಮಾತನಾಡಿ, ಕ್ಷಯರೋಗ ನಿಯಂತ್ರಣ ಮಾಡಲು ಸರ್ಕಾರ ವಿವಿಧ ಕ್ರಮ ಕೈಗೊಂಡಿದೆ. ಪ್ರತಿ ಹಳ್ಳಿ, ಪಟ್ಟಣ, ನಗರಗಳಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಾರ್ವಜನಿಕರು ಸಹಕಾರ ನೀಡಬೇಕು. ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ನಗರಸಭೆ ಅಧ್ಯಕ್ಷ ಎನ್. ರೂಪೇಶ್ ಕುಮಾರ್ ಮಾತನಾಡಿ, ರೋಗ ಹರಡುವುದನ್ನು ತಡೆಯಬೇಕು. ಜಿಲ್ಲಾಧಿಕಾರಿ ಹೇಳಿದಂತೆ ನಗರಸಭೆಯನ್ನು ಟಿಬಿ ಮುಕ್ತಗೊಳಿಸಲು ಸ್ಲಂಗಳಿಗೆ ಅಗತ್ಯ ಸೌಕರ್ಯ ಕಲ್ಪಿಸಿ, ನಗರವನ್ನು ಕ್ಷಯಮುಕ್ತಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು. ನಗರಸಭೆ ಅದಕ್ಕಾಗಿ ಶ್ರಮಿಸಲಿದೆ ಎಂದರು.

ಡಿಎಚ್‌ಒ ಡಾ. ಎಲ್.ಆರ್. ಶಂಕರನಾಯ್ಕ ಮಾತನಾಡಿ, ಗ್ರಾಪಂಗಳಿಂದ ಟಿಬಿ ಮುಕ್ತಗೊಳಿಸಲು ಸಹಕಾರ ಬೇಕು. ಎಲ್ಲ ಪಂಚಾಯಿತಿಗಳನ್ನು ಟಿಬಿ ಮುಕ್ತಗೊಳಿಸಲು ಶ್ರಮಿಸಲಾಗುವುದು. ಮನೆಯಲ್ಲಿ ಟಿಬಿ ಒಬ್ಬರಿಗೆ ಬಂದರೆ ಉಳಿದವರಿಗೆ ಹರಡುವ ಸಾಧ್ಯತೆ ಇರುತ್ತದೆ. ರೋಗ ಲಕ್ಷಣಗಳು ಕಂಡ ಕೂಡಲೇ ನಿರ್ಲಕ್ಷ್ಯ ಮಾಡದೆ ಸಮೀಪದ ಆಸ್ಪತ್ರೆಗಳಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ದೃಢಪಟ್ಟರೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. ಬೇಗ ಗುರುತಿಸಿದರೆ ಹರಡುವಿಕೆ ತಡೆಯಬಹುದು. ಇದರಿಂದ ನಿಯಂತ್ರಣ ಮಾಡಲು ಸಾಧ್ಯ ಎಂದರು.

ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಡಿ. ಭಾಸ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ 2024ರಲ್ಲಿ 2304 ಪ್ರಕರಣಗಳನ್ನು ಪತ್ತೆ ಹಚ್ಚಿದ್ದು, 1886 ಜನ ಶೇ. 82ರಷ್ಟು ಗುಣಮುಖರಾಗಿದ್ದಾರೆ. 174 ಜನ ಮೃತಪಟ್ಟಿದ್ದಾರೆ ಎಂದರು.

ಗ್ರಾಪಂಗಳಿಗೆ ಪುರಸ್ಕಾರ:

ಹೊಸಪೇಟೆ ತಾಲೂಕಿನ ಸೀತಾರಾಂ ತಾಂಡಾ, ಹೂವಿನಹಡಗಲಿ ತಾಲೂಕಿನ ಹ್ಯಾರಡ ಹಾಗೂ ಹಗರಿಬೊಮ್ಮನಹಳ್ಳಿ ತಾಲೂಕಿನ ಹನಸಿ ಮತ್ತು ಮಾಲವಿ ಗ್ರಾಪಂಗಳಿಗೆ ಟಿಬಿ ಮುಕ್ತ ಗ್ರಾಪಂ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.

ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಬಿ. ಜಂಬಯ್ಯ, ಹಿರಿಯ ವೈದ್ಯ ಡಾ. ಮೃತ್ಯುಂಜಯ ವಸ್ತ್ರದ, ಡಾ. ಸತೀಶ್ಚಂದ್ರ, ಡಾ. ರಾಧಿಕಾ, ಡಾ. ಷಣ್ಮುಖ ನಾಯ್ಕ, ಟಿಎಚ್‌ಒ ಡಾ. ಬಸವರಾಜ, ಡಾ. ಸ್ವಪ್ನಾ ಕಟ್ಟಿ, ಡಾ. ಸೋಮಶೇಖರ, ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ. ದೊಡ್ಡಮನಿ ಮತ್ತಿತರರಿದ್ದರು.