ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಸವಜಯಮೃತ್ಯುಂಜಯ ಸ್ವಾಮೀಜಿಗೆ ವಿಷಪ್ರಾಶನ ಆರೋಪ ಕುರಿತು ಅರವಿಂದ ಬೆಲ್ಲದ ನನಗೆ ಕರೆ ಮಾಡಿದ್ದರು. ಕರೆ ಮಾಡಿ ಕ್ಷಮೆಯಾಚನೆ ಮಾಡಿದ್ದಾರೆ. ಆದರೆ ಬಹಿರಂಗ ಕ್ಷಮೆಯಾಚನೆ ಮಾಡಬೇಕು. ಸುದ್ದಿಗೋಷ್ಠಿ ಕರೆದು ಕ್ಷಮೆ ಹೇಳಬೇಕು ಎಂದು ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಆಗ್ರಹಿಸಿದರು.ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರವಿಂದ ಬೆಲ್ಲದ ಅವರು ನನಗೆ ಕರೆ ಮಾಡಿದ್ದರು. ಇಲ್ಲಪ್ಪ ನಾನು ತಪ್ಪು ಮಾಡಿಬಿಟ್ಟೆ. ಅಜ್ಜಾರಿಗೆ (ಸ್ವಾಮೀಜಿಗೆ) ವಿಷಪ್ರಾಷನ ಎಂದು ತಪ್ಪು ಕಲ್ಪನೆಯಿಂದ ಹೇಳಿಬಿಟ್ಟೆ. ಕ್ಷಮೆಯಿರಲಿ ಅಂದರು. ಕ್ಷಮೆ ಕೇಳಿದ್ದಾರೆ ಬೇಕಾದರೆ ಅವರನ್ನೇ ಕೇಳಿ. ಈ ಬಗ್ಗೆ ನನ್ನ ಬಳಿ ಫೋನ್ ರಿಕಾರ್ಡ್ ಇದೆ ಎಂದು ಮೊಬೈಲ್ ಕಾಲ್ ಡಿಟೇಲ್ಸ್ ಅನ್ನು ಕಾಶಪ್ಪನವರ ತೋರಿಸಿದರು.ಬಹಿರಂಗ ಕ್ಷಮೆಯಾಚನೆ ಮಾಡಲಿ:
ನೀವು ಉದ್ದೇಶಪೂರ್ವಕವಾಗಿ ಆರೋಪ ಹೊರಿಸಿದ್ದಿರಿ. ಅಂದು ಆಸ್ಪತ್ರೆಗೆ ಬಂದ ಮೇಲೆ ನೀವು ಸುದ್ದಿಗೋಷ್ಠಿ ಮಾಡಿ ಹೋಗಿದ್ದೀರಿ, ವಿಷಪ್ರಾಷನ ಬಗ್ಗೆ ನೀವು ಆವತ್ತೆ ಹೇಳಬೇಕಿತ್ತು. ಆವತ್ತು ಗುರುಗಳು ಆರೋಪ ಮಾಡಿದ್ರಾ? ಯತ್ನಾಳ್ ಮಾಡಿಲ್ವಲ್ಲಾ, ಸಿ.ಸಿ. ಪಾಟೀಲ ಮಾಡಿಲ್ವಲ್ಲಾ? ಅರವಿಂದ ಬೆಲ್ಲದ ಏಕೆ ಮಾಡಿದ್ರು? ಅರವಿಂದ ಬೆಲ್ಲದ ಬಹಿರಂಗ ಕ್ಷಮೆಯಾಚನೆ ಮಾಡಬೇಕು. ರಾಜ್ಯದ ತುಂಬ ನನ್ನ ಮೇಲೆ ಆರೋಪ ಹೊರಿಸಿದ್ದೀರಿ. ಸುಳ್ಳು ಆರೋಪ ಎಂದು ಎಲ್ಲರಿಗೂ ಗೊತ್ತಾಗಬೇಕಲ್ವಾ? ವಿಷಪ್ರಾಷನ ಅಂತೆ ಏನ್ರಿ ಆಪಾದನೆ ಮಾಡೋದು, ಇದು ನಮ್ಮ ಧರ್ಮದಲ್ಲಿ ಇದೆಯಾ ಎಂದು ಪ್ರಶ್ನಿಸಿದರು.ಇಂತಹ ಕೆಟ್ಟ ಹುಳುಗಳು, ಕೆಟ್ಟ ಬುದ್ಧಿಗಳನ್ನು ನೋಡಿ ಹೇಳ್ತಿದಿನಿ, ಇವರ ಡಿ.ಎನ್.ಎ ಟೆಸ್ಟ್ ಮಾಡಬೇಕು. ಮೋಸ್ಟ್ಲಿ ಇವರು ನಮ್ಮ ಧರ್ಮದವರೇ ಅಲ್ಲ. ಲಿಂಗಾಯತ ಧರ್ಮದಲ್ಲಿ ಜನಿಸೋಕೆ ಅಯೋಗ್ಯರು ಎಂದ ಕಾಶಪ್ಪನವರ, ಸ್ವಾಮೀಜಿಗೆ ವಿಷಪ್ರಾಷನ ಎಂಬುದು ಬಿಜೆಪಿಯವರ ಕುತಂತ್ರ. ನನ್ನನ್ನು ಹೊತ್ತು ನಿಲ್ಲಿಸಬೇಕು ಎಂದು ಆರೋಪ ಮಾಡಿದ್ದಾರೆ. ಆದರೆ ಇವರು ರಾಜ್ಯದ ಜನರಿಗೆ ಹೊತ್ತು (ಬೇಸರವಾಗಿ) ನಿಂತಿದ್ದಾರೆ ಎಂದು ಆರೋಪಿಸಿದರು.
ಸುಮ್ಮನೆ ವಿನಾಕಾರಣ ಆರೋಪ ಮಾಡುವ ನೀವು ನನ್ನ ಒಂದು ಕೂದಲು ಎಳೆಯಷ್ಟು ಅಲುಗಾಡಿಸೋಕೆ ಆಗಲ್ಲ. ಮಿಸ್ಟರ್ ಯತ್ನಾಳ್, ಮಿಸ್ಟರ್ ಸಿ.ಸಿ. ಪಾಟೀಲ, ಮಿಸ್ಟರ್ ಬೆಲ್ಲದ, ನಿಮಗೆ ಏನು ಕಿತ್ಕೊಳ್ಳೋಕೆ ಆಗೋದಿಲ್ಲ. ನಮಗೂ ಕಾನೂನು ಅರಿವಿದೆ. ಬಾಯಿಗೆ ಬಂದಂಗೆ ಮಾತಾಡಿದರೆ ಬಗ್ಗತಾನೆ ಎಂದು ನೀವು ತಿಳಕೊಂಡಿರಬಹುದು. ನಾನು ಅಖಂಡ ವಿಜಯಪುರ ಜಿಲ್ಲೆಯಲ್ಲಿ ಜನಿಸಿದವ, ನಿಮ್ಮ ಅಪ್ಪನಂಗೆ ನನಗೂ ಮಾತಾಡೋಕೆ ಬರುತ್ತದೆ ಎಂದು ಏಕವಚನದಲ್ಲಿ ಹರಿಹಾಯ್ದರು.ಬೆಲ್ಲದ ಅವರು ವಿರೋಧ ಪಕ್ಷದ ಉಪನಾಯಕರಿದ್ದಾರೆ. ತನಿಖೆಗೆ ಸಮಿತಿ ಮಾಡಿ ಎಂದು ಮೊನ್ನೆಯೇ ಹೇಳಿದ್ದೇನೆ. ನನ್ನ ಕೈಯಲ್ಲಿ ಕೆಲಸ ಮಾಡ್ತಿದ್ದ ಜಾಫರ್ ಜಾಗೂ ಮಾಲತೇಶ ಅವರನ್ನು ಮಠ ಕಾಯೋದಕ್ಕೆ ಹಾಕಿದ್ದೆ. ಸಿಸಿ ಕ್ಯಾಮೆರಾ ಇದೆ ಅದನ್ನು ನೋಡಲಿ. ಸ್ವಾಮೀಜಿಗಳು ಚಿಕಿತ್ಸೆ ಪಡೆದಿರುವ ಬಾಗಲಕೋಟೆ ಆಸ್ಪತ್ರೆಯಲ್ಲಿ ಹೋಗಿ ರಿಪೋರ್ಟ್ ಪಡೆದುಕೊಳ್ಳಲಿ. ವಿಷ ಬೆರೆಸಲಾಗಿತ್ತೇ ಏನು ಯಾವ ಕಾರಣಕ್ಕೆ ಅಡ್ಮಿಟ್ ಆಗಿದ್ದರು ಎಂಬುದು ಗೊತ್ತಾಗುತ್ತದೆ ಎಂದು ಹೇಳಿದರು.
ಸ್ವಾಮೀಜಿ ನೋಡೋದಕ್ಕೆ ಆಸ್ಪತ್ರೆಗೆ ಬಂದ ಬಿಜೆಪಿ ಗ್ಯಾಂಗ್, ಸಿ.ಸಿ. ಪಾಟೀಲ, ಅರವಿಂದ ಬೆಲ್ಲದ, ಬಿಜೆಪಿ ಜೊತೆ ಮೈತ್ರಿಯಾದವರು ಶಿವಶಂಕರ, ಇವರನ್ನು ಬಿಟ್ಟರೆ ಯಾರು ಬಂದಿದ್ದಾರೆ. ಆತ (ಸಿ.ಸಿ. ಪಾಟೀಲ) ಒಬ್ಬ ಮಾಜಿ ಮಂತ್ರಿ ಅಂತೆ, ಮೊದಲು ಗೌರವದಿಂದ ಮಾತಾಡಲು ಕಲಿಯಲು ಹೇಳಿ, ಅವನು ಅವನ ಊರಲ್ಲಿ ಗೌಡ ಇರಬಹುದು, ನಮ್ಮೂರಿಗೆ ಏನವ? ಎಂದು ಸಿ.ಸಿ. ಪಾಟೀಲ ವಿರುದ್ಧ ವಾಗ್ದಾಳಿ ನಡೆಸಿದರು.ನನಗೆ ಸ್ವಾಮೀಜಿ ಆಗು ಎಂದು ಯತ್ನಾಳ್ ಹೇಳ್ತಾನೆ, ಹುಬ್ಬಳ್ಳಿ-ಬೆಳಗಾವಿ ಮಧ್ಯೆ ಮಠ ಕಟ್ತೀನಿ ಅಂತಾನೆ. ಇವರ ಬಾಯಿಗೆ ಲಗಾಮಿಲ್ಲ. ಅವರ ಸಂಸ್ಕೃತಿನಾ ಇದು. ಬಾಯಿಗೆ ಬಂದಂಗೆ ಮಾತಾಡೋದು ಬಿಜೆಪಿ ಸಂಸ್ಕೃತಿ ಎಂದು ಆಕ್ರೋಶ ಹೊರಹಾಕಿದರು.
ಪಂಚಮಸಾಲಿ ಪೀಠಕ್ಕೆ ಬೀಗ ಹಾಕಿದ ವಿಚಾರ ಪ್ರಸ್ತಾಪಿಸಿ ಮಠಕ್ಕೆ ಬೀಗ ಇರಲಿಲ್ಲ. ಅಲ್ಲಿ ನಾಯಿ, ಹಂದಿ ಬಂದು ಮಲಗುತ್ತಿದ್ದವು. ಇಸ್ಪೀಟ್ ಜೂಜಾಟ ಆಡುತ್ತಿದ್ದರು. ಸ್ವಾಮೀಜಿಗಳು ಮಠಕ್ಕೆ ಬಂದೇ ಇಲ್ಲ. ಮಠಕ್ಕೆ ಬಾರದೆ ಸ್ವಾಮೀಜಿಗಳು ಹುನಗುಂದ ಬಸವಮಂಟಪದಲ್ಲಿ ಕೂತಿದ್ದಾರೆ. ನನ್ನ ವಿರೋಧಿಗಳನ್ನು ಕೂಡಿಸಿಕೊಂಡು ಬೊಬ್ಬಾಟ ಮಾಡಿ, ಆರೋಪ ಹೊರಿಸಿ ನನ್ನ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದ್ದಾರೆ. ಈ ಸಂಚಿಗೆ ಇವರಪ್ಪನ ಆಣೆಗೂ ನಾನು ಬಗ್ಗೋದಿಲ್ಲ. ನನ್ನ ನಿರ್ಧಾರ, ಧರ್ಮದರ್ಶಿಗಳ ನಿರ್ಧಾರ ಅಂತಿಮ. ನಾವು ಏನು ಮಾತಾಡಿದ್ದೇವೆಯೋ ಅದಕ್ಕೆ ನಾವು ಬದ್ದರಾಗಿರ್ತೀವಿ. ಅದು ಮುಂದೆ ನಡೆಯುತ್ತದೆ ನೋಡ್ತೀರಿ ಎಂದು ಮಾರ್ಮಿಕವಾಗಿ ನುಡಿದರು.ಮಠ ತ್ಯಾಗ ಮಾಡ್ತಿನಿ ಅನ್ನೋರು ಯಾಕೆ ಪೀಠಾಧೀಶರಾದ್ರು:
ಪರ್ಯಾಯ ಸ್ವಾಮೀಜಿ ಪಕ್ಕಾನಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಾಶಪ್ಪನವರ, ನಾವು ಸ್ವಾಮೀಜಿಗೆ ಪೀಠದಲ್ಲಿ ಇದ್ದು ಧಾರ್ಮಿಕ ಚಟುವಟಿಕೆ, ಮಕ್ಕಳಿಗೆ ಸಂಸ್ಕಾರ ಕಲಿಸಿ ಎಂದು ವಿನಂತಿ ಮಾಡಿದ್ದೇವೆ. ಇವರು ಅದೆಲ್ಲ ಬಿಟ್ಟು ಸಂಚಾರ ಪೀಠ ಮಾಡ್ತೀನಿ, ಮಠ ತ್ಯಾಗ ಮಾಡ್ತೀನಿ ಎಂದು ಹೇಳ್ತಾರೆ. ಮಠ ತ್ಯಾಗ ಮಾಡ್ತೀನಿ ಎನ್ನುವವರು ಯಾಕೆ ಪೀಠಾಧೀಶರಾದರು? 2008ರಲ್ಲಿ ನಾವೇ ಇವರನ್ನು ಪೀಠಾಧ್ಯಕ್ಷರನ್ನಾಗಿ ಮಾಡಿದ್ದು. ಸಿ.ಸಿ.ಪಾಟೀಲ ಇರಲಿಲ್ಲ. ಮುರ್ತುಜಾ ಖಾದ್ರಿಯವರನ್ನು ಪೀಠದ ಗುರುಗಳನ್ನು ಮಾಡೋಕೆ ಹೊರಟಿದ್ದಾರೆ ಎಂದು ಯತ್ನಾಳ ಹೇಳಿದ. ಇದೇ ಯತ್ನಾಳ ಮಾತಾಡಿದ್ದ ಗುರುಗಳು ಮರೆತಿದ್ದಾರೆ ಎಂದು ಯತ್ನಾಳ ವಿರುದ್ಧ ಹರಿಹಾಯ್ದರು.ಮಠಕ್ಕೆ ಬೀಗ ಹಾಕಿದಾರೆ ಅಂದ್ರೆ ಅವರ ಮನೆಗೂ ಬೀಗ ಬೀಳುತ್ತೆ ಎಂದು ಯತ್ನಾಳ ಹೇಳಿಕೆಗೆ ಪ್ರತಿಕ್ರಿಯಿಸಿ, ದಯವಿಟ್ಟು ಎಲ್ಲ ಮಠಗಳನ್ನು ಚೆಕ್ ಮಾಡಿ. ದೇವಸ್ಥಾನ ಬೇರೆ, ಮಠ ಬೇರೆ. ದೇವಸ್ಥಾನಕ್ಕೂ ಈಚೆಗೆ ಬೀಗ ಹಾಕ್ತಿದ್ದಾರೆ. ಒಂದು ಮಠಕ್ಕೆ ಒಬ್ಬ ಗುರು ಇರಬೇಕು. ಒಂದು ಮನೆಗೆ ಒಬ್ಬ ಯಜಮಾನ ಇರಬೇಕು. ಗುರುಗಳೇ ಇಲ್ಲದ ಮಠ ಅಂದರೆ ಹೇಗಾಗುತ್ತೆ? ನಾಲ್ಕು ವರ್ಷದಿಂದ ಇವರು ಸರಿಯಾಗಿ ಮಠದಲ್ಲಿ ಇಲ್ಲ. ನಾನು ಟ್ರಸ್ಟ್ ಅಧ್ಯಕ್ಷನಾಗಿ ಕೇಳಬೇಕಲ್ಲ. ನಾನು ಟ್ರಸ್ಟ್ ಅಧ್ಯಕ್ಷ ಆಗಿದ್ದಕ್ಕೆ ಸೌಜನ್ಯಕ್ಕಾದರೂ ಅಭಿನಂದನೆ ಹೇಳಿದಾರಾ ಎಂದು ಅಸಮಧಾನ ಹೊರಹಾಕಿದರು.
2ಡಿ, 2ಸಿ ಮೀಸಲಾತಿ ಕೊಡಿಸಿದ್ರಾ?:ಇತ್ತೀಚೆಗೆ ಮಾಜಿ ಸಚಿವ ಸಿ.ಸಿ.ಪಾಟೀಲ ಆಸ್ಪತ್ರೆಗೆ ಬಂದಾಗ ನನಗೆ ಏಕವಚನದಲ್ಲಿ ಮಾತನಾಡಿದ. ನೋಡೋಣ ಅದರ ಬಗ್ಗೆ ನನ್ನ ಕ್ಷೇತ್ರದ ಜನ ತೀರ್ಮಾನ ಮಾಡ್ತಾರೆ. ಇವನ್ಯಾರು? ಯತ್ನಾಳ್ ಯಾರು? ಎಂದು ಹರಿಹಾಯ್ದ ಅವರು, ಇವರು ಮಂತ್ರಿ ಇದ್ದಾಗ ಪಂಚಮಸಾಲಿ ಸಮುದಾಯಕ್ಕೆ 2 ಡಿ, 2 ಸಿ, ಕೊಡಿಸಿದರಲ್ಲ. ಇವತ್ತು ನಮ್ಮ ಮಕ್ಕಳ ಕೈಗೆ ಸರ್ಟಿಫಿಕೇಟ್ ಸಿಗ್ತಿದೆಯಾ? ಇವರಿಗೆ ಸ್ಪಷ್ಟ ನಿಲುವು ಇಲ್ಲ. ಈಗಲೂ ನಾನು ಇವರನ್ನು ಕೇಳ್ತಿನಿ. ನಿಮಗೆ 2ಡಿ ಬೇಕಾ ? 2ಸಿ ಬೇಕಾ ಎಂದು ಜನರ ಮುಂದೆ ಸ್ಪಷ್ಟಪಡಿಸಿ. ನಾವು 2ಎ ಕೇಳಿಯೇ ಇಲ್ಲ, ಕಾಶಪ್ಪನವರ ಒಬ್ಬನೇ ಕೇಳಿದಾನೆ ಅಂತಾರೆ. ಮೂರು ವರ್ಷ ಯತ್ನಾಳ ಏನ್ ಹೊಯ್ಕೊಂತ ಅಡ್ಡಾಡಿದಾ ಯತ್ನಾಳ 2ಎ ಎಂದು. ಇವತ್ತು ಗುರುಗಳು ಹಿಂದೆ 2ಎ ಮೀಸಲಾತಿ ಎಂದು ಬ್ಯಾನರ್ ಹಾಕೊಂಡು ಕೂರ್ತಾರೆ. ಸ್ವಾಮೀಜಿಗಳು ಒಂದು ಪಕ್ಷದ ಪರ ಇರಬಾರದು, ಮಠದಲ್ಲಿ ಇರಬೇಕು. ಧಾರ್ಮಿಕ ಚಟುವಟಿಕೆ ಏನು ನಡೆಯಬೇಕು ಅದನ್ನು ಮಾಡಬೇಕು ಎಂದು ಹೇಳಿದರು.
ನನ್ನನ್ನು ಕೇಳಗೆ ಇಳಿಸೋಕು ಟ್ರಸ್ಟ್ ಗೆ ಹಕ್ಕಿದೆ:ಕಾಶಪ್ಪನವರ-ಪಂಚಮಸಾಲಿ ಶ್ರೀಗಳ ಮಧ್ಯೆ ಸಂಧಾನ ಮಾಡುತ್ತೇವೆ ಎಂದು ಹರಿಹರ ಮಾಜಿ ಶಾಸಕ ಎಚ್.ಎಸ್. ಶಿವಶಂಕರ ಹೇಳಿಕೆಗೆ ಪ್ರತಿಕ್ರಿಯಿಸಿ, ಟ್ರಸ್ಟ್ ಅಡಿಯಲ್ಲಿ ಪೀಠ ಆಗಿದ್ದು, ನಮ್ಮ ಹಿರಿಯರಾದ ಪ್ರಭಣ್ಣ ಹುಣಸೀಕಟ್ಟಿ ಸಂಸ್ಥಾಪಕ ಅಧ್ಯಕ್ಷರು. ನೀಲಕಂಠ ಅಸೂಟಿ ಸೇರಿದಂತೆ 50-60 ಜನ ಸದಸ್ಯರು ಇದ್ದೇವೆ. ಅವರೆಲ್ಲರ ನಿರ್ಣಯ ಮುಖ್ಯ. ಕೇವಲ ಅಧ್ಯಕ್ಷ ಇದ್ದೇನೆ ಎಂದು ಇದು ನನ್ನ ನಿರ್ಣಯವಲ್ಲ. ನಾಳೆ ಅವರು ನನ್ನನ್ನೇ ತೆಗೆಯಬಹುದು. ಅಧ್ಯಕ್ಷ ಸ್ಥಾನದಿಂದ ಇಳಿಸೋಕೆ ಅವರಿಗೆ ಹಕ್ಕಿದೆ. ಅವರ ನಿರ್ಧಾರವನ್ನು ಅಧ್ಯಕ್ಷನಾಗಿ ನಾನು ಮಾಧ್ಯಮದ ಮುಂದೆ ಪ್ರಕಟಗೊಳಿಸಿದ್ದೇನಷ್ಟೇ ಎಂದರು.ಈ ನಿರ್ಣಯ ಅಲ್ಲೇ ಆಗಬೇಕು. ಸಿ.ಸಿ. ಪಾಟೀಲ ಟ್ರಸ್ಟ್ ಗೆ ಸಂಬಂಧವಿಲ್ಲ. ಯತ್ನಾಳ, ಬೆಲ್ಲದ ಯಾರೂ ಸಂಬಂಧವಿಲ್ಲ. ಯಾವ ಟ್ರಸ್ಟ್ ,ಯಾವ ಮಾಡಿದಾನೆ ಅಂತ ಕೇಳ್ತಾರೆ. ಇವರಪ್ಪನ ಮನೆದು ತಂದು ಹಾಕಿದಾರಾ? ರೊಕ್ಕ ಹಾಕಿದವರು ನಾವು. ಯಾರೋ ಕೊಡಿಸಿದಾರೆ, ದಾನ ಮಾಡಿದಾರೆ, ನಾ ಒಪ್ಪಿಕೊಳ್ತೇನೆ. ಮುರುಗೇಶ ನಿರಾಣಿ ಅವರು ಪೀಠಕ್ಕೆ ಜಾಗ ದಾನ ಮಾಡಿದಾರೆ. ಅದನ್ನು ನಾನು ಒಪ್ಪಿಕೊಳ್ತೇನೆ ಎಂದು ಹೇಳಿದರು.