ಮಡಿಕೇರಿ: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಗರದ ಗಾಂಧಿ ಭವನದಲ್ಲಿ ಗುರುವಾರ ಅರೆಭಾಷೆ ರಸಪ್ರಶ್ನೆ ಸ್ಪರ್ಧೆ ನಡೆಯಿತು.

ಮಡಿಕೇರಿ: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಅರೆಭಾಷೆ ಗೌಡ ವಿಕಾಸ ವೇದಿಕೆ (ಸಾಮಾಜಿಕ ಮಾಧ್ಯಮ ವಿಭಾಗ) ಸಹಕಾರದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಗರದ ಗಾಂಧಿ ಭವನದಲ್ಲಿ ಗುರುವಾರ ಅರೆಭಾಷೆ ರಸಪ್ರಶ್ನೆ ಸ್ಪರ್ಧೆ ನಡೆಯಿತು.

ಅರೆಭಾಷೆಯಲ್ಲಿ ಹಲವು ಪ್ರಶ್ನೆಕೇಳುವ ಮೂಲಕ ಅರೆಭಾಷೆ ಮತ್ತು ಕನ್ನಡದ ಶಬ್ದಕೋಶದ ಪದಗಳನ್ನು ಉತ್ತರಿಸುವ ಮೂಲಕ ಮೂವರು ವಿದ್ಯಾರ್ಥಿಗಳು ನಗದು ಬಹುಮಾನ ಪಡೆದರು.

ಅರೆಭಾಷೆ ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮದಲ್ಲಿ ಬೆಂಗಳೂರು, ಕರಿಕೆ, ಸುಳ್ಯ, ಪೆರಾಜೆ, ಸಂಪಾಜೆ, ಕೊಯನಾಡು, ಭಾಗಮಂಡಲ. ಚೇರಂಬಾಣೆ, ಮೂರ್ನಾಡು, ಮದೆನಾಡು, ಮೇಕೇರಿ, ಮಡಿಕೇರಿಯ ವಿವಿಧ ಶಾಲೆಗಳಿಂದ 35 ವಿದ್ಯಾರ್ಥಿಗಳು ಭಾಗವಹಿಸಿ ಅರೆಭಾಷೆ ರಸಪ್ರಶ್ನೆ ಪರೀಕ್ಷೆ ಬರೆದರು. ಇವರಲ್ಲಿ 8 ವಿದ್ಯಾರ್ಥಿಗಳು 40 ಅಂಕಕ್ಕೆ 38 ಅಂಕವನ್ನು ಇಬ್ಬರು, 37 ಅಂಕವನ್ನು ಮೂವರು ಮತ್ತು 35 ಅಂಕವನ್ನು ಇಬ್ಬರು ಪಡೆದು ರಸಪ್ರಶ್ನೆ ಸುತ್ತಿಗೆ ಆಯ್ಕೆಯಾಗಿದ್ದರು.

ಪ್ರಥಮ ಸ್ಥಾನ ಪಡೆದ ಚೇರಂಬಾಣೆಯ ರಾಜರಾಜೇಶ್ವರಿ ಶಾಲೆಯ ಲಕ್ಷಣ ಕಾಳೇರಮ್ಮಣ, ದ್ವಿತೀಯ ಸ್ಥಾನ ಪಡೆದ ಪೆರಾಜೆಯ ವಿದ್ಯಾರ್ಥಿ ಕಾರ್ತಿಕ್, ತೃತೀಯ ಸ್ಥಾನ ಪಡೆದ ನಗರದ ಸಂತ ಜೊಸೆಫರ ಶಾಲೆಯ ಎಲಿನಾ ಅವರಿಗೆ ಕ್ರಮವಾಗಿ 15 ಸಾವಿರ, 10 ಸಾವಿರ ಮತ್ತು 5 ಸಾವಿರ ನಗದು ಬಹುಮಾನವನ್ನು ಅರೆಭಾಷೆ ಗೌಡ ವಿಕಾಸ ವೇದಿಕೆ ನಿರ್ದೇಶಕರಾದ ಪ್ರಹ್ಲಾದ್ ಪೊಕ್ಕುಳಂಡ್ರ ಅವರು ವೈಯಕ್ತಿಕವಾಗಿ ನೀಡಿದರು, ಜತೆಗೆ ಪ್ರಶಸ್ತಿ ಪತ್ರ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಅವರು, ಅರೆಭಾಷೆ ಸಾಹಿತ್ಯ, ಸಂಸ್ಕೃತಿ, ಸಂಶೋಧನೆ ಮತ್ತು ಅರೆಭಾಷೆಯಲ್ಲಿ ಹಲವು ಉತ್ತಮ ಕೃತಿಗಳನ್ನು ಪ್ರಕಟಿಸುವ ಮೂಲಕ ಅರೆಭಾಷೆ ಬೆಳವಣಿಗೆಗೆ ಶ್ರಮಿಸಲಾಗುತ್ತಿದೆ. ಆ ನಿಟ್ಟಿನಲ್ಲಿ ಅಕಾಡೆಮಿ ಸಹಕಾರದಲ್ಲಿ ಅರೆಭಾಷೆ ಗೌಡ ವಿಕಾಸ ವೇದಿಕೆ ವತಿಯಿಂದ ಅರೆಭಾಷೆ ರಸಪ್ರಶ್ನೆ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಅರೆಭಾಷೆ ಗೌಡ ವಿಕಾಸ ವೇದಿಕೆ ನಿರ್ದೇಶಕ ಪ್ರಹ್ಲಾದ್ ಪೊಕ್ಕುಳಂಡ, ಭಾಗಮಂಡಲ ಕಾವೇರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ದಿವಾಕರ ಕುಂದಲ್ಪಾಡಿ, ಸಾಹಿತಿ ಬೈತಡ್ಕ ಜಾನಕಿ ಬೆಳ್ಯಪ್ಪ, ಹಾಕತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ತೆಕ್ಕಡೆ ಕುಮಾರಸ್ವಾಮಿ ಮಾತನಾಡಿದರು.

ಅಕಾಡೆಮಿ ಸದಸ್ಯರಾದ ಲತಾ ಪ್ರಸಾದ್ ಕುದ್ಪಾಜೆ, ಮೋಹನ್ ಪೊನ್ನಚ್ಚನ, ಕನ್ನಡ ಸಾಹಿತ್ಯ ಪರಿಷತ್ತಿನ‌ ಸಂಘಟನಾ ಕಾರ್ಯದರ್ಶಿ ಪ್ರೇಮ ರಾಘವಯ್ಯ, ಕಲ್ಪನಾ ಹೊಸಗದ್ದೆ ಇತರರು ಇದ್ದರು.

ಕಾವ್ಯಾನಂದ ಕೋಳಿಬೈಲು ಸ್ವಾಗತಿಸಿದರು, ಚೈತ್ರ ಕುದುಕುಳಿ ನಿರೂಪಿಸಿದರು, ಖುಷಿ ಪ್ರಾರ್ಥಿಸಿದರು, ರಿಜಿಸ್ಟ್ರಾರ್ ಚಿನ್ನಸ್ವಾಮಿ ವಂದಿಸಿದರು.