ಅಡಕೆಗೆ ಕೊಳೆರೋಗ: ರೈತರಿಗೆ ಸಂಕಷ್ಟ

| Published : Aug 03 2024, 12:30 AM IST

ಸಾರಾಂಶ

ಮುಂಡಗೋಡ ತಾಲೂಕಿನ ಬೆಡಸಗಾಂವ ಗ್ರಾಪಂ ವ್ಯಾಪ್ತಿಯಲ್ಲಿ ಬಹುತೇಕ ಅಡಕೆ ಫಸಲು ಬಂದಿದ್ದು, ಇನ್ನೇನು ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರಿಗೆ ಬೆಳೆ ಉದುರಿ ಬೀಳುತ್ತಿರುವುದು ಆಘಾತವನ್ನುಂಟು ಮಾಡಿದೆ.

ಸಂತೋಷ ದೈವಜ್ಞ

ಮುಂಡಗೋಡ: ಸುಮಾರು ೧ ತಿಂಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ, ಅತಿವೃಷ್ಟಿಯಿಂದಾಗಿ ತಾಲೂಕಿನ ಬಹುತೇಕ ಭಾಗದ ಅಡಕೆ ಬೆಳೆಗೆ ಕೊಳೆ ರೋಗದಿಂದ ಫಸಲು ಉದುರಿ ಬೀಳುತ್ತಿದ್ದು, ರೈತರು ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ.

ವಾಣಿಜ್ಯ ಬೆಳೆ ಎಂದು ನಂಬಿಕೊಂಡು ಇಲ್ಲಿಯ ರೈತರು ಸಾಕಷ್ಟು ಪ್ರಮಾಣದಲ್ಲಿ ಅಡಕೆ ಬೆಳೆಯುತ್ತಿದ್ದಾರೆ. ಆದರೆ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆ ತೇವಾಂಶ ಹೆಚ್ಚಿದ ಪರಿಣಾಮ ಅಡಕೆ ಬೆಳೆ ಕೊಳೆರೋಗಕ್ಕೆ ತುತ್ತಾಗಿ ಫಸಲು ಉದುರಿ ಬೀಳುತ್ತಿದೆ. ರೈತರು ಹಾನಿ ಅನುಭವಿಸುವಂತಾಗಿದೆ. ದಿನೇ ದಿನೇ ಅಡಕೆ ಫಸಲು ಉದುರಿ ಬೀಳುತ್ತಿರುವುದರಿಂದ ಕಂಗೆಟ್ಟಿರುವ ರೈತರು, ೨- ೩ ಬಾರಿ ಸುಣ್ಣ ಸಿಂಪಡಿಸುವುದು ಸೇರಿದಂತೆ ಔಷಧೋಪಚಾರ ಮಾಡಿದರೂ ರೋಗ ನಿಯಂತ್ರಣಕ್ಕೆ ಬಾರದೆ ಇರುವುದರಿಂದ ಕಂಗಾಲಾಗಿದ್ದಾರೆ.

ತಾಲೂಕಿನ ಬೆಡಸಗಾಂವ ಗ್ರಾಪಂ ವ್ಯಾಪ್ತಿಯಲ್ಲಿ ಬಹುತೇಕ ಅಡಕೆ ಫಸಲು ಬಂದಿದ್ದು, ಇನ್ನೇನು ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರಿಗೆ ಬೆಳೆ ಉದುರಿ ಬೀಳುತ್ತಿರುವುದು ಆಘಾತವನ್ನುಂಟು ಮಾಡಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತದೆ ಎಂಬ ಆತಂಕ ರೈತರಲ್ಲಿ ಮನೆ ಮಾಡಿದೆ. ಬೆಳೆಹಾನಿಗೊಳಗಾಗುತ್ತಿರುವುದರಿಂದ ಸಾಲ ಮಾಡಿಕೊಂಡು ಅಡಕೆ ಬೆಳೆದಿರುವವರು ಚಿಂತಾಕ್ರಾಂತರಾಗಿದ್ದಾರೆ.

ಬೆಡಸಗಾಂವ ಭಾಗದ ಗೌರಿ ನಾಯ್ಕ, ಫಕ್ಕೀರಪ್ಪ ನಾಯ್ಕ, ಶ್ರೀಪಾದ ಹೆಗಡೆ, ಶ್ರೀನಿವಾಸ ನಾಯ್ಕ, ಅಶೋಕ ನಾಯ್ಕ, ಲಕ್ಷ್ಮಣ ನಾಯ್ಕ, ಪರಮೇಶ್ವರ ನಾಯ್ಕ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದ ಅಡಕೆ ಬೆಳೆ ಕೊಳೆ ರೋಗದಿಂದ ಉದುರಿ ಬೀಳುತ್ತಿರುವುದರಿಂದ ಭಾರಿ ನಷ್ಟ ಅನುಭವಿಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಬೇಕೆಂಬುದು ರೈತರ ಆಗ್ರಹವಾಗಿದೆ.

ಸೂಕ್ತ ಸಲಹೆ: ತೋಟದ ಬಸಿಗಾಲುವೆಗಳು ಹೂಳು ತುಂಬಿಕೊಂಡು ನೀರು ಸಂಗ್ರಹವಾಗಿದ್ದರಿಂದ ಕೆಲವೆಡೆ ಅಡಕೆ ಉದುರುತ್ತಿರುವುದು ತಮ್ಮ ಗಮನಕ್ಕೆ ಬಂದಿದ್ದು, ತೋಟಗಾರಿಕೆ ಇಲಾಖೆ ಹಾಗೂ ಸ್ಥಳಿಯ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸುವ ಕಾರ್ಯ ಆರಂಭಿಸಿದ್ದು, ಪರಿಹಾರ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ, ಕೊಳೆರೋಗ ನಿಯಂತ್ರಣಕ್ಕೆ ಔಷಧೋಪಚಾರ ಮಾಡುವಂತೆ ರೈತರಿಗೆ ಸೂಕ್ತ ಸಲಹೆ ನೀಡಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಕೃಷ್ಣ ಕುಳ್ಳೂರ ತಿಳಿಸಿದರು.

ಪರಿಹಾರ ನೀಡಿ: ಮಳೆ ಹೆಚ್ಚಾದ ಕಾರಣ ಕೊಳೆರೋಗದಿಂದ ಅಡಕೆ ಬೆಳೆ ಉದುರಿ ಬೀಳುತ್ತಿದ್ದು, ತೀವ್ರ ನಷ್ಟವಾಗುತ್ತಿದೆ. ಏನೇ ಔಷಧೋಪಚಾರ, ಮುಂಜಾಗ್ರತಾ ಕ್ರಮ ಕೈಗೊಂಡರೂ ಪ್ರಯೋಜನವಾಗುತ್ತಿಲ್ಲ. ಇದರಿಂದಾಗಿ ಏನು ಮಾಡಬೇಕೆಂಬುದು ತಿಳಿಯದಂತಾಗಿದೆ. ಈ ಹಾನಿಯನ್ನು ಪ್ರಕೃತಿವಿಕೋಪ ಎಂದು ಪರಿಗಣಿಸಿ ಸೂಕ್ತ ಪರಿಹಾರ ಒದಗಿಸಬೇಕು ಎಂದು ರೈತ ಮುಖಂಡ ದೇವೇಂದ್ರ ನಾಯ್ಕ ತಿಳಿಸಿದರು.