ಸಾರಾಂಶ
ವ್ಯಾಪಾರಸ್ಥರು ಟೆಂಡರ್ ಹಾಕುವಾಗ ನಜರ್ ಚುಕ್ಕಾಗಿ ಆದ ಸಂದರ್ಭದಲ್ಲಿ ವ್ಯಾಪಾರಸ್ಥರು, ರೈತರು, ದಲಾಲರು ಸೇರಿಕೊಂಡು ಚರ್ಚೆ ಮಾಡಿ ಮಾಡಲಾಗುತ್ತಿದೆ. ರೈತರಿಗೆ, ವ್ಯಾಪಾರಸ್ಥರಿಗೆ ಮೋಸ ಆಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ಗೋಪಾಲಕೃಷ್ಣ ವೈದ್ಯ ತಿಳಿಸಿದರು.
ಶಿರಸಿ: ಯಲ್ಲಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಿಬ್ಬಂದಿಗಳಿಂದ ಅಡಕೆ ಬೆಳೆಗಾರರಿಗೆ ವಂಚನೆ ನಡೆದಿದ್ದು, ಎಪಿಎಂಸಿಯವರು ಮಾಡಿರುವ ತಪ್ಪಿಗೆ ಟಿಎಸ್‌ಎಸ್‌ಅನ್ನು ದೂರುತ್ತಿದ್ದಾರೆ. ಇದರ ಕುರಿತು ದಾಖಲೆಯನ್ನಿಟ್ಟು ಎಪಿಎಂಸಿ ಸಿಬ್ಬಂದಿ ಮೇಲೆ ನಾನು ಆರೋಪ ಮಾಡುತ್ತಿದ್ದೇನೆ ಎಂದು ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೈತರನ್ನು ಬಿಟ್ಟು ನಾವು ಟೆಂಡರ್ ಮೊತ್ತವನ್ನು ಬದಲು ಮಾಡುವುದಿಲ್ಲ. ಟೆಂಡರ್ ಬರೆಯಬೇಕಾದರೆ ನಜರ್‌ಜುಕ್ಕಾಗಿ ಕೆಲವು ಬಾರಿ ತಪ್ಪಾಗುತ್ತದೆ. ಅದನ್ನು ತಿದ್ದುಪಡಿ ಮಾಡಬೇಕಾದರೆ ರೈತರ ಗಮನಕ್ಕೆ ತರದೇ ದಲಾಲಿ ಸಂಸ್ಥೆಯಾದ ನಾವು ಮಾಡುವುದಿಲ್ಲ. ವ್ಯಾಪಾರಸ್ಥರು ಟೆಂಡರ್ ಹಾಕುವಾಗ ನಜರ್ ಚುಕ್ಕಾಗಿ ಆದ ಸಂದರ್ಭದಲ್ಲಿ ವ್ಯಾಪಾರಸ್ಥರು, ರೈತರು, ದಲಾಲರು ಸೇರಿಕೊಂಡು ಚರ್ಚೆ ಮಾಡಿ ಮಾಡಲಾಗುತ್ತಿದೆ. ರೈತರಿಗೆ, ವ್ಯಾಪಾರಸ್ಥರಿಗೆ ಮೋಸ ಆಗದಂತೆ ನೋಡಿಕೊಳ್ಳಲಾಗುತ್ತದೆ ಎಂದರು.ಶಿರಸಿ ಮತ್ತು ಸಿದ್ದಾಪುರದಲ್ಲಿ ಇದೇ ವ್ಯವಸ್ಥೆಯಲ್ಲಿ ನಡೆದುಕೊಂಡು ಬಂದಿದೆ. ಈ ಘಟನೆ ನಡೆದ ನಂತರ ನಾವು ವಿವರಣೆ ಪಡೆಯಲು ಹೊರಟ ನಂತರ ಯಲ್ಲಾಪುರ ಎಪಿಎಂಸಿಯಲ್ಲಿ ಇದೇ ವ್ಯವಸ್ಥೆಯಲ್ಲಿ ನಡೆದುಕೊಂಡು ಬರುತ್ತಿದೆ ಎಂದು ಈಗ ತಿಳಿದಿದೆ. ಟೆಂಡರ್ ಮೊತ್ತದಲ್ಲಿ ತಿದ್ದುಪಡಿ ಮಾಡಲಾಗುತ್ತಿದೆ ಎಂದು ಆಡಳಿತ ಮಂಡಳಿಯ ಗಮನಕ್ಕೆ ಯಾಕೆ ತಂದಿಲ್ಲ ಎಂದು ಟಿಎಸ್‌ಎಸ್‌ನ ಸಿಬ್ಬಂದಿಗೆ ನೋಟಿಸ್ ಜಾರಿ ಮಾಡಿ ವಿವರಣೆ ಕೇಳಿದ್ದೇವೆ ಎಂದರು.
ಶಿರಸಿ, ಸಿದ್ದಾಪುರದಲ್ಲಿ ಯಾವ ರೀತಿಯಲ್ಲಿ ಇ ಟೆಂಡರ್ ಮೂಲಕ ಅಡಕೆ ವ್ಯಾಪಾರ ನಡೆಯುತ್ತದೆಯೋ ಅದೇ ರೀತಿ ಯಲ್ಲಾಪುರದಲ್ಲಿಯೂ ಇ ಟೆಂಡರ್ ಮೂಲಕ ನಡೆಯುತ್ತದೆ. ಬಿಳೂರಿನ ಇಬ್ಬರು ರೈತರಾದ ಮಂಜುನಾಥ ನಾಯ್ಕ, ಈರಪ್ಪ ನಾಯ್ಕ ಅಡಕೆ ಮಾರಾಟ ಮಾಡಿದಾಗ ಟೆಂಡರ್ ಆದ ಮೊತ್ತವನ್ನು ತಿದ್ದುಪಡಿ ಮಾಡಿ ಎರಡನೆಯ ಟೆಂಡರ್‌ಗೆ ವಿಕ್ರಿ ಮಾಡಿದ್ದಾರೆ. ಎಪಿಎಂಸಿ ಸಿಬ್ಬಂದಿ ಬದಲಾವಣೆ ಮಾಡಲು ಟಿಎಸ್‌ಎಸ್‌ನ ಸಿಬ್ಬಂದಿಗೆ ತಿಳಿಸಿದ್ದಾರೆ. ಆಗ ತಿದ್ದುಪಡಿ ಮಾಡಲಾಗಿದ್ದು, ಇದರ ಕುರಿತು ಆಡಳಿತ ಮಂಡಳಿಯ ಗಮನಕ್ಕೆ ಯಾಕೆ ತಂದಿಲ್ಲ ಎಂದು ಸಿಬ್ಬಂದಿಯನ್ನು ಕೇಳಿದಾಗ ಯಲ್ಲಾಪುರ ಎಪಿಎಂಸಿಯಲ್ಲಿ ಬಹಳ ವರ್ಷದಿಂದ ಇದೇ ವ್ಯವಸ್ಥೆಯಲ್ಲಿ ನಡೆಯುತ್ತಿದೆ. ಕೇವಲ ನಮ್ಮ ಸಂಘವೊಂದೇ ಅಲ್ಲ. ಎಲ್ಲ ಸಂಘಗಳಲ್ಲಿಯೂ ಇದೇ ರೀತಿ ನಡೆಯುತ್ತಿದೆ ಎಂದಾಗ ಸಿಬ್ಬಂದಿಗೆ ನೋಟಿಸ್ ಜಾರಿ ಮಾಡಿದ್ದೇವೆ ಎಂದರು.ತಿದ್ದುಪಡಿ ಟೆಂಡರ್ ಅಳಿಸಿದ ಎಪಿಎಂಸಿ ಅಧಿಕಾರಿಗಳು
ಪ್ರತಿದಿನ ಅಡಕೆ ದರಪಟ್ಟಿಯನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆರ್‌ಇಎಂಎಸ್ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಬೇಕಾಗುತ್ತದೆ. ಅಡಕೆ ಟೆಂಡರ್ ಮೊತ್ತದಲ್ಲಿ ತಿದ್ದುಪಡಿ ಮಾಡಿ ರೈತರಿಗೆ ಮೋಸ ಮಾಡಿರುವ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆ ಆರ್‌ಇಎಂಎಸ್ ವೆಬ್‌ಸೈಟ್‌ನಲ್ಲಿ ತಿದ್ದಿರುವ ಮಾಹಿತಿ ಸಿಗುತ್ತಿಲ್ಲ. ಅದನ್ನು ಅಲ್ಲಿಂದ ತೆಗೆದು ಹಾಕಿದ್ದಾರೆ. ವೆಬ್‌ಸೈಟ್‌ನಿಂದ ಮಾಹಿತಿ ತೆಗೆದು ಹಾಕಿ, ಕ್ರಿಮಿನಲ್ ಅಪರಾಧ ಮಾಡಿದ್ದಾರೆ ಎಂದು ಗೋಪಾಲಕೃಷ್ಣ ವೈದ್ಯ ಆರೋಪಿಸಿದರು.