ಸಾರಾಂಶ
ಮಂಗಳೂರು : ವಿಶ್ವ ಆರೋಗ್ಯ ಸಂಸ್ಥೆಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಅಡಕೆ ಕ್ಯಾನ್ಸರ್‌ಕಾರಕ ಎಂದು ಮತ್ತೆ ಮಹತ್ವದ ವರದಿ ನೀಡಿರುವುದು ಬೆಳೆಗಾರರಲ್ಲಿ ವ್ಯಾಪಕ ತಲ್ಲಣಕ್ಕೆ ಕಾರಣವಾಗಿದೆ. ಇದೇ ವೇಳೆ ಅಡಕೆ ಕ್ಯಾನ್ಸರ್‌ಕಾರಕ ಅಲ್ಲ, ಆರೋಗ್ಯಕ್ಕೆ ಹಾನಿ ಇಲ್ಲ ಎಂದು ಅಡಕೆ ಮಾರುಕಟ್ಟೆ ತಜ್ಞರು, ಅಡಕೆ ಸಂಶೋಧನಾ ಕೇಂದ್ರಗಳು ನಡೆಸಿದ ಅಧ್ಯಯನ ವರದಿ ವಿಶ್ವ ಆರೋಗ್ಯ ಸಂಸ್ಥೆಯನ್ನು ತಲುಪದೇ ಆಗದಿರುವುದರ ಬಗ್ಗೆ ಜಾಲತಾಣಗಳಲ್ಲಿ ಬಿರುಸಿನ ಚರ್ಚೆ ನಡೆಯುತ್ತಿದೆ.
2013ರಲ್ಲಿ ಅಡಕೆ ಕ್ಯಾನ್ಸರ್‌ಕಾರಕ, ಅದನ್ನು ನಿಷೇಧಿಸುವ ಮಾತು ಕೇಳಿಬಂದಾಗ ಕರಾವಳಿ, ಮಲೆನಾಡಿನಲ್ಲಿ ಹಲವು ಪ್ರತಿಭಟನೆ, ಸಂವಾದಗಳೂ ನಡೆದಿದ್ದವು. ಕೃಷಿಮಾರುಕಟ್ಟೆ ತಜ್ಞರು ಕೂಡ ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ಲೇಖನಗಳನ್ನೇ ಬರೆದಿದ್ದರು. ವೀಳ್ಯದೆಲೆಯನ್ನು ಬಳಸಿ ಅಡಕೆಯನ್ನು ಸೇರಿಸಿ ಮಾಡುವ ತಾಂಬೂಲ ಕ್ಯಾನ್ಸರ್ ನಿವಾರಣೆಗೆ ಉತ್ತಮ ಔಷಧ ಎಂಬ ಅಧ್ಯಯನಗಳ ವರದಿಯನ್ನು ಕೃಷಿಮಾರುಕಟ್ಟೆ ತಜ್ಞ ಡಾ.ವಿಘ್ನೇಶ್ವರ ವರ್ಮುಡಿ ಉಲ್ಲೇಖಿಸಿದ್ದರು.
2014ರಲ್ಲಿ ಬೆಳೆಗಾರರ ಒತ್ತಡಕ್ಕೆ ಮಣಿದು ರಾಜ್ಯ ಸರ್ಕಾರ ಕೂಡ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಾಧಕ ಬಾಧಕಗಳ ಚರ್ಚೆಗೆ ಸಭೆ ಏರ್ಪಡಿಸಿತ್ತು.
ಅಡಕೆ ಬೆಳೆಯ ಮೇಲಿನ ನಿಷೇಧದ ತೂಗುಗತ್ತಿ ಹಿನ್ನೆಲೆಯಲ್ಲಿ ಡಾ.ವಿಘ್ನೇಶ್ವರ ವರ್ಮುಡಿ ಅವರ 1986ರಿಂದಲೇ ಅಡಕೆ ಮತ್ತು ಇತರೆ ಕೃಷಿ ಉತ್ಪನ್ನಗಳ ಬಗ್ಗೆ ಅಧ್ಯಯನ ನಡೆಸಿ 1 ಸಾವಿರಕ್ಕೂ ಹೆಚ್ಚು ಸಂಶೋಧನಾ ಪ್ರಬಂಧ ಮಂಡಿಸಿದ್ದರು. ಇವರ ಸಂಶೋಧನಾ ಉಲ್ಲೇಖಗಳನ್ನು ಸರ್ಕಾರ ಮಾತ್ರವಲ್ಲ ಸುಪ್ರೀಂ ಕೋರ್ಟ್ ಕೂಡ ಪರಿಗಣನೆಗೆ ತೆಗೆದುಕೊಂಡಿದೆ. ಅಡಕೆ ಕ್ಯಾನ್ಸರ್‌ಕಾರಕ ಅಲ್ಲ ಎನ್ನುವ ಬಗ್ಗೆ ಈಗಾಗಲೇ ಇರುವ ಸಾಕಷ್ಟು ಪುರಾವೆಗಳನ್ನು ವಿಶ್ವ ಆರೋಗ್ಯ ಸಂಸ್ಥೆ ವರೆಗೆ ತಲುಪಿಸುವ, ಅಲ್ಲಿ ಸಮರ್ಥವಾಗಿ ಹೇಳುವ ಅಗತ್ಯತೆಯನ್ನು ಬೆಳೆಗಾರರು, ಮಾರುಕಟ್ಟೆ ತಜ್ಞರು ವ್ಯಕ್ತಪಡಿಸುತ್ತಾರೆ.
ಅಂತಾರಾಜ್ಯ ಸಹಕಾರ ಸಂಸ್ಥೆ ಕ್ಯಾಂಪ್ಕೋ ನಿಯೋಗ ಕೂಡ ಇತ್ತೀಚೆಗೆ ಅಡಕೆ ಕ್ಯಾನ್ಸರ್‌ಕಾರಕ ಅಲ್ಲ ಎನ್ನುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ಮಾಜಿ ಅಧಿಕಾರಿಯೊಬ್ಬರಿಗೆ ವರದಿ ಸಲ್ಲಿಸಿ ಮನವರಿಕೆ ಮಾಡುವ ಪ್ರಯತ್ನ ನಡೆಸಿತ್ತು.