ಮೂಡುಗೋಡು ಗ್ರಾಮದಲ್ಲಿ ಗೋದಾಮಿನಿಂದ ಮತ್ತೆ ಅಡಕೆ ಕಳವು

| Published : May 23 2024, 01:01 AM IST

ಸಾರಾಂಶ

ಗ್ರಾಮದ ಜಯಕುಮಾರ್ ಎಂಬವರು ಮನೆ ಪಕ್ಕದಲ್ಲಿ ಅಡಕೆ ಗೋದಾಮು ನಿರ್ಮಿಸಿಕೊಂಡು ತಾವು ಬೆಳೆದ ಸುಮಾರು ೨೦೦ ಕ್ವಿಂಟಾಲ್ ಸಿಪ್ಪೆ ಅಡಿಕೆ, ೧೦ ಕ್ವಿಂಟಾಲ್ ಕೆಂಪು ಅಡಿಕೆ ಹಾಗೂ ೧೭ಕ್ವಿಂಟಾಲ್ ಗೇರು ಬೀಜವನ್ನು ಸಂಗ್ರಹಿಸಿದ್ದರು. ಮಂಗಳವಾರ ಬೆಳಗ್ಗೆ ಗೋದಾಮಿಗೆ ತೆರಳಿದಾಗ ಕಳವು ಆಗಿರುವುದು ಬೆಳಕಿಗೆ ಬಂದಿದೆ. ಕಳ್ಳರು ಗೋದಾಮಿನ ಬೀಗ ಮುರಿದು ಗೋದಾಮಿನಲ್ಲಿದ್ದ ೩.೫ ಲಕ್ಷ ರು., ಮೌಲ್ಯದ ಸುಮಾರು ೧೪ ಕ್ವಿಂಟಾಲ್ ಒಣ ಸಿಪ್ಪೆ ಗೋಟು ಅಡಕೆಯನ್ನು ಕಳ್ಳತನ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಸೊರಬ

ತಾಲೂಕಿನ ಮೂಡುಗೋಡು ಗ್ರಾಮದ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ ಸುಮಾರು ₹೩.೫ ಲಕ್ಷ ಮೌಲ್ಯದ ಅಡಕೆಯನ್ನು ಕಳ್ಳರು ಕಳವು ನಡೆಸಿರುವ ಘಟನೆ ಮಂಗಳವಾರ ಬೆಳಗಿನ ಜಾವ ನಡೆದಿದೆ.

ಗ್ರಾಮದ ಜಯಕುಮಾರ್ ಎಂಬವರು ಮನೆ ಪಕ್ಕದಲ್ಲಿ ಅಡಕೆ ಗೋದಾಮು ನಿರ್ಮಿಸಿಕೊಂಡು ತಾವು ಬೆಳೆದ ಸುಮಾರು ೨೦೦ ಕ್ವಿಂಟಾಲ್ ಸಿಪ್ಪೆ ಅಡಿಕೆ, ೧೦ ಕ್ವಿಂಟಾಲ್ ಕೆಂಪು ಅಡಿಕೆ ಹಾಗೂ ೧೭ಕ್ವಿಂಟಾಲ್ ಗೇರು ಬೀಜವನ್ನು ಸಂಗ್ರಹಿಸಿದ್ದರು. ಮಂಗಳವಾರ ಬೆಳಗ್ಗೆ ಗೋದಾಮಿಗೆ ತೆರಳಿದಾಗ ಕಳವು ಆಗಿರುವುದು ಬೆಳಕಿಗೆ ಬಂದಿದೆ. ಕಳ್ಳರು ಗೋದಾಮಿನ ಬೀಗ ಮುರಿದು ಗೋದಾಮಿನಲ್ಲಿದ್ದ ೩.೫ ಲಕ್ಷ ರು., ಮೌಲ್ಯದ ಸುಮಾರು ೧೪ ಕ್ವಿಂಟಾಲ್ ಒಣ ಸಿಪ್ಪೆ ಗೋಟು ಅಡಕೆಯನ್ನು ಕಳ್ಳತನ ಮಾಡಿದ್ದಾರೆ.

ಈ ಮೊದಲು ಮೇ ೯ರಂದು ಮೂಡುಗೋಡು ಗ್ರಾಮದ ಇದೇ ಗೋದಾಮಿನಿಂದ 3ಲಕ್ಷ ರು., ಮೌಲ್ಯದ ಸುಮಾರು ೧೫ ಕ್ವಿಂಟಾಲ್ ಒಣ ಸಿಪ್ಪೆ ಗೋಟು ಅಡಿಕೆ, ೨.೪ ಲಕ್ಷ ರು., ಮೌಲ್ಯದ ಸುಮಾರು ೬ ಕ್ವಿಂಟಾಲ್ ಕೆಂಪು ಅಡಿಕೆ, ೧.೨ ಲಕ್ಷ ರು., ಮೌಲ್ಯದ ೧೦ ಕ್ವಿಂಟಾಲ್ ಗೇರು ಬೀಜ ಸೇರಿದಂತೆ ಒಟ್ಟು₹ 7.5 ಮೌಲ್ಯದ ವಸ್ತುಗಳು ಕಳ್ಳತನವಾಗಿತ್ತು.

ಜಯಕುಮಾರ್ ನೀಡಿದ ದೂರಿನ ಅನ್ವಯ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಸಿಪಿಐ ರಮೇಶ್ ರಾವ್, ಪಿಎಸ್‌ಐ ನಾಗರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಳ್ಳರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.