ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ವೀರ ಮರಣವನ್ನಪ್ಪಿದ ಅರ್ಜುನ ಆನೆ ಹೆಸರಿನಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು. ದಬ್ಬಳ್ಳಿಕಟ್ಟೆ ಅರಣ್ಯ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಅರ್ಜುನನ ಸ್ಮಾರಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು
ಸಕಲೇಶಪುರ : ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ವೀರ ಮರಣವನ್ನಪ್ಪಿದ ಅರ್ಜುನ ಆನೆ ಹೆಸರಿನಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.
ಅರ್ಜುನನ ಸ್ಮಾರಕವನ್ನು ಲೋಕಾರ್ಪಣೆ
ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ದಬ್ಬಳ್ಳಿಕಟ್ಟೆ ಅರಣ್ಯ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಅರ್ಜುನನ ಸ್ಮಾರಕವನ್ನು ಬುಧವಾರ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಶೌರ್ಯಕ್ಕೆ ಹೆಸರಾದ ಅರ್ಜುನ ಆನೆ ದಾಖಲೆಯ ೮ ಬಾರಿ ಚಿನ್ನದ ಅಂಬಾರಿ ಹೊರುವ ಮೂಲಕ 7 ಕೋಟಿ ಕನ್ನಡಿಗರ ಪ್ರೀತಿಗೆ ಪಾತ್ರವಾಗಿತ್ತು. ಇದಲ್ಲದೆ ರಾಜ್ಯದ ಎಲ್ಲೇ ವನ್ಯಪ್ರಾಣಿಗಳ ಸೆರೆಹಿಡಿಯುವ ಕಾರ್ಯಚರಣೆ ಆರಂಭಿಸುವ ಮುನ್ನ ಅರ್ಜುನ ಆನೆ ಹೆಸರು ಮೊದಲಿರುತ್ತಿತ್ತು. ಶೌರ್ಯಕ್ಕೆ ಹೆಸರಾಗಿದ್ದ ಅರ್ಜುನ ಕೇವಲ ಕಾಡಾನೆ ಕಾರ್ಯಾಚರಣೆ ಮಾತ್ರವಲ್ಲದೆ ಹುಲಿ ಕಾರ್ಯಾಚರಣೆಯಲ್ಲೂ ಪಾಲ್ಗೊಳ್ಳುವ ಮೂಲಕ ರಾಜ್ಯದ ಜನರ ಮನೆ ಮಾತಾಗಿತ್ತು. ಇಂತಹ ಆನೆ ದುರದೃಷ್ಟವಶಾತ್ ಕಾಡಾನೆ ಕಾರ್ಯಾಚರಣೆಯಲ್ಲಿ ಮೃತಪಟ್ಟಿದ್ದು ಬೇಸರದ ವಿಚಾರ ಎಂದರು.
ಅರ್ಜುನ ಮೃತಪಟ್ಟ ವೇಳೆ ಸಮಾಧಿಗೆ ಭೇಟಿ
ಅರ್ಜುನ ಮೃತಪಟ್ಟ ವೇಳೆ ಸಮಾಧಿಗೆ ಭೇಟಿಗೆ ನೀಡಿ ಗೌರವ ಸಲ್ಲಿಸಿ ಸ್ಮಾರಕ ನಿರ್ಮಾಣದ ಭರವಸೆ ನೀಡಿದ್ದೆ. ಇದರಂತೆ ಸ್ಮಾರಕ ನಿರ್ಮಾಣ ಮಾಡಲಾಗಿದೆ. ಇನ್ನೂ ಕೆಲವು ಮೂಲಭೂತ ಸೌಕರ್ಯದ ಬೇಡಿಕೆ ಇದ್ದು ಹಂತಹಂತವಾಗಿ ಕಲ್ಪಿಸಲಾಗುವುದು. ಕಾಡಾನೆಗಳಿಂದ ಸ್ಮಾರಕ ಹಾನಿಗೊಳಗಾಗದಂತೆ ರಕ್ಷಿಸಲು ರೈಲ್ವೆ ಬ್ಯಾರಿಕೇಡ್ ಸೇರಿದಂತೆ ಹಲವು ಮಾರ್ಗಗಳನ್ನು ರೂಪಿಸಲಾಗುತ್ತಿದೆ ಎಂದು ಸಚಿವ ಖಂಡ್ರೆ ಹೇಳಿದರು.
ಸಚಿವ ಕೃಷ್ಣಬೈರೇಗೌಡ, ಸಂಸದ ಶ್ರೇಯಸ್ ಪಟೇಲ್, ಶಾಸಕರಾದ ಸೀಮೆಂಟ್ ಮಂಜು, ಶಿವಲಿಂಗೇಗೌಡ ಇದ್ದರು.