ಸಾರಾಂಶ
ಕೊಪ್ಪಳದಲ್ಲಿ ಸೇನಾ ನೇಮಕಾತಿ ರ‍್ಯಾಲಿ ವೀಕ್ಷಿಸಿದ ಹರಿಪಿಳ್ಳೈ
ಕನ್ನಡಪ್ರಭ ವಾರ್ತೆ ಕೊಪ್ಪಳಕೊಪ್ಪಳದಲ್ಲಿ ಸೇನಾ ನೇಮಕಾತಿ ರ‍್ಯಾಲಿ ಸುಸೂತ್ರವಾಗಿ ನಡೆಯಲು ಸಹಕಾರ ನೀಡಿದ ಕೊಪ್ಪಳ ಜಿಲ್ಲಾಡಳಿತ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳ ಕಾರ್ಯ ಶ್ಲಾಘನೀಯ ಎಂದು ಸೇನಾ ನೇಮಕಾತಿ ವಿಭಾಗದ ಬೆಂಗಳೂರು ಎಡಿಜಿ ಮೇಜರ್ ಜನರಲ್ ಹರಿಪಿಳ್ಳೈ ಹೇಳಿದರು.
ಅವರು ಶುಕ್ರವಾರ ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸೇನಾ ನೇಮಕಾತಿ ರ‍್ಯಾಲಿ ವೀಕ್ಷಿಸಿದ ಆನಂತರ ಕೊಪ್ಪಳ ಜಿಲ್ಲಾಡಳಿತದ ವಿವಿಧ ಇಲಾಖೆಯ ಅಧಿಕಾರಿಗಳನ್ನು ಜಿಲ್ಲಾ ಕ್ರೀಡಾಂಗಣದಲ್ಲಿ ಭಾರತೀಯ ಸೇನೆಯ ವತಿಯಿಂದ ಸನ್ಮಾನಿಸಿ ಮಾತನಾಡಿದರು.ಬೆಳಗಾವಿ ವಿಭಾಗದಲ್ಲಿ ನಡೆದ ದೊಡ್ಡ ಮಟ್ಟದ ಈ ರ‍್ಯಾಲಿ ಯಶಸ್ವಿಯಾಗಲು ತಮ್ಮೆಲ್ಲರ ಸಹಕಾರ ಕಾರಣವಾಗಿದೆ. ನಮ್ಮ ಪ್ರಯತ್ನ ನಿಜವಾದ ಪ್ರತಿಭಾವಂತರಿಗೆ ತಲುಪಬೇಕು. ತಾಲೂಕು ಹಾಗೂ ಗ್ರಾಮೀಣ ಭಾಗದಲ್ಲಿ ಬಹಳಷ್ಟು ಪ್ರತಿಭಾವಂತ ವಿದ್ಯಾರ್ಥಿಗಳಿದ್ದು, ಅಂಥವರಿಗೆ ನಾವು ಪ್ರೋತ್ಸಾಹ ನೀಡಬೇಕಿದೆ ಎಂದರು.
ಬೆಳಗಾವಿ ನೇಮಕಾತಿ ವಿಭಾಗದ ಎಆರ್‌ಒ ಕರ್ನಲ್ ಎ.ಕೆ. ಉಪಾಧ್ಯಾಯ ಮಾತನಾಡಿ, ಆರಂಭದ ಮೊದಲ ಸಭೆಯಿಂದಲೂ ಜಿಲ್ಲಾಡಳಿತ ನಮಗೆ ಉತ್ತಮ ಸಹಕಾರ ನೀಡಿದೆ. ನ. 26ರಂದು ಆರಂಭವಾದ ರ‍್ಯಾಲಿ ಡಿ. 8ಕ್ಕೆ ಮುಗಿಯಲಿದೆ. ಬೆಳಗಾವಿ ವಿಭಾಗದ ಬೀದರ, ಕಲಬುರಗಿ, ಯಾದಗಿರಿ, ಕೊಪ್ಪಳ ಹಾಗೂ ಇತರ 6 ಜಿಲ್ಲೆಗಳ 30 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಅದರಲ್ಲಿ 9130 ಅಭ್ಯರ್ಥಿಗಳು ಈ ಪರೀಕ್ಷೆಯಲ್ಲಿ ಪಾಸಾಗಿ ರ‍್ಯಾಲಿಗೆ ಬಂದಿದ್ದಾರೆ. ಅದರಲ್ಲಿ 7186 ಅಭ್ಯರ್ಥಿಗಳು ರನ್ನಿಂಗ್‌ನಲ್ಲಿ ಪಾಸಾಗಿದ್ದಾರೆ. ಮೆಡಿಕಲ್‌ನಲ್ಲಿ 2380 ಅಭ್ಯರ್ಥಿಗಳು ಪಾಸಾಗಿದ್ದು, 1878 ಅಭ್ಯರ್ಥಿಗಳು ಮೆಡಿಕಲ್ ರಿವ್ಯೂಗೆ ಹೋಗಿದ್ದಾರೆ. ಆಯ್ಕೆಯಾದ ಅಂತಿಮ ಅಭ್ಯರ್ಥಿಗಳ ಮಾಹಿತಿ ಡಿ. 8ರಂದು ತಿಳಿಯಲಿದೆ ಎಂದು ಹೇಳಿದರು.ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆ ಮಾತನಾಡಿ, ರ‍್ಯಾಲಿಯಿಂದ ಈ ಭಾಗದ ವಿದ್ಯಾರ್ಥಿಗಳಿಗೆ ಉದ್ಯೋಗ ದೊರೆಯುವ ಜತೆಗೆ ಸೇನೆ ಸೇರಲು ಪ್ರೇರಣೆ ನೀಡಿದಂತಾಗಿದೆ ಎಂದು ಹೇಳಿದರು.
ವಿವಿಧ ಇಲಾಖೆಯ ಅಧಿಕಾರಿಗಳನ್ನು ಸೇನಾಧಿಕಾರಿಗಳು ಸನ್ಮಾನಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹೇಮಂತ್ ಕುಮಾರ್, ಸಹಾಯಕ ಆಯುಕ್ತ ಮಹೇಶ್ ಮಾಲಗತ್ತಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಅಸಿಸ್ಟೆಂಟ್ ರಿಕ್ರೂಟಿಂಗ್ ಆಫೀಸರ್ ಸುಬೇದಾರ ಮೇಜರ್ ದಿನೇಶ್ ಲೋಹಿಯಾ ಹಾಗೂ ಸೇನೆಯ ಇತರ ಅಧಿಕಾರಿ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.