ಸೇನೆ ಶಿಸ್ತು, ಬದ್ಧತೆ ಕಲಿಸುತ್ತೆ: ಸೈನಿಕ ಶಿವಮೂರ್ತಿ

| Published : Aug 06 2024, 12:33 AM IST / Updated: Aug 06 2024, 12:34 AM IST

ಸಾರಾಂಶ

ಸೊರಬ ತಾಲೂಕಿನ ಹೆಸರಿ ಗ್ರಾಮದ ಶಿವಮೂರ್ತಿ ಭಾರತೀಯ ಸೇನೆಯಲ್ಲಿ ಸೈನಿಕನಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಗ್ರಾಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಗ್ರಾಮಸ್ಥರು ಮೆರವಣಿಗೆ ಮೂಲಕ ಸ್ವಾಗತಿಸಿದರು.

ಕನ್ನಡಪ್ರಭ ವಾರ್ತೆ ಸೊರಬ

ಭಾರತೀಯ ಸೇನಾ ಪಡೆ ದೇಶಾಭಿಮಾನ ಬೆಳೆಸುವುದರ ಜತೆಗೆ ಬದುಕಿನಲ್ಲಿ ಶಿಸ್ತು ಮತ್ತು ಬದ್ಧತೆಯನ್ನು ಕಲಿಸುತ್ತದೆ. ಆದ್ದರಿಂದ ಪ್ರತಿ ಮನೆಯ ಒಬ್ಬ ಯುವಕ ಸೈನಿಕರಾಗುವುದರೊಂದಿಗೆ ದೇಶ ಕಾಯುವ ಯೋಧನಾಗಬೇಕು ಎಂದು ಸೈನಿಕ ಶಿವಮೂರ್ತಿ ಹೆಸರಿ ಕರೆ ನೀಡಿದರು.

ಭಾರತೀಯ ಸೇನೆಯಲ್ಲಿ ಸೈನಿಕನಾಗಿ ೨೨ ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಭಾನುವಾರ ರಾತ್ರಿ ತಮ್ಮ ಸ್ವಗ್ರಾಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಗ್ರಾಮಸ್ಥರ ಮೆರವಣಿಗೆ, ಅದ್ಧೂರಿ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಾವು ಕಳೆದ ೨೨ ವರ್ಷಗಳಿಂದ ಜಮ್ಮು ಕಾಶ್ಮೀರ, ದೆಹಲಿ, ಪಶ್ಚಿಮ ಬಂಗಾಲ, ಪಂಜಾಬ್, ಗುಜರಾಜ್ ಹಾಗೂ ಇತರೆ ಸ್ಥಳಗಳಲ್ಲಿ ಸೇವೆ ಸಲ್ಲಿಸಿದ್ದೇನೆ. ಈ ಸಂದರ್ಭದಲ್ಲಿ ಅನುಭವಗಳು ಸಾಕಷ್ಟಿವೆ. ಗ್ರಾಮ ಸೇರಿದಂತೆ ಹಲವು ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಜತೆ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ದೇಶಾಭಿಮಾನ ಬೆಳೆಸಿಕೊಳ್ಳಲು, ಶಿಸ್ತು ಮೈಗೂಡಿಸಿಕೊಳ್ಳಲು ಹಾಗೂ ಸೈನ್ಯಕ್ಕೆ ಸೇರಲು ಮಾರ್ಗದರ್ಶನ ನೀಡಲಾಗುವುದು ಎಂದರು.

ಇಂಡುವಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಯೋಗೇಶ್ ಹೆಸರಿ ಮಾತನಾಡಿ, ದೇಶ ಸೇವೆ ಈಶ ಸೇವೆಯಾಗಿದೆ. ಸೈನಿಕರಾಗಿ ದೇಶದ ಸೇವೆ ಮಾಡಿ ನಿವೃತ್ತಿ ಹೊಂದಿ ಗ್ರಾಮಕ್ಕೆ ಶಿವಮೂರ್ತಿ ಅವರು ಆಗಮಿಸಿದ್ದು ಹಬ್ಬದ ವಾತಾವರಣ ನಿರ್ಮಿಸಿದೆ ಎಂದ ಅವರು ದೇಶ ಹಾಗೂ ದೇಶದ ಜನರ ರಕ್ಷಣೆ ಮಾಡುತ್ತಿರುವ ಸೈನಿಕರಿಗೆ ಸದಾ ಗೌರವ ಸಲ್ಲಬೇಕಿದೆ ಎಂದರು.

ಇಂಡುವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವೇದಮೂರ್ತಿ ಚಿಕ್ಕಸವಿ ಮಾತನಾಡಿ, ಶಿವಮೂರ್ತಿ ಅವರು ಸೈನಿಕರಾಗಿ ೨೨ ವರ್ಷಗಳ ಕಾಲ ಸೇವೆ ಸಲ್ಲಿಸಿ ಊರಿಗೆ ಮರಳಿರುವುದು ಸಂತಸ ತಂದಿದೆ. ಸೈನಿಕರ ಸೇವೆ ಸ್ವಾತಂತ್ರ್ಯ ಹೋರಾಟಗಾರರ ಸೇವೆಗೆ ಸಮನಾದುದು ಎಂದರು.

ಇದಕ್ಕೂ ಮೊದಲು ಮಹಿಳೆಯರು ನಿವೃತ್ತ ಯೋಧ ಶಿವಮೂರ್ತಿ ಅವರಿಗೆ ಆರತಿ ಬೆಳಗುವ ಮೂಲಕ ಸ್ವಾಗತಿಸಿದರು. ಗ್ರಾಮಸ್ಥರು ಮೆರವಣಿಗೆಯಲ್ಲಿ ಕರೆತಂದು ಸನ್ಮಾನಿಸಿದರು. ಅನೇಕ ಮುಖಂಡರು ವೈಯಕ್ತಿಕವಾಗಿ ಸನ್ಮಾನಿಸಿ, ಹೂಗುಚ್ಚ ನೀಡಿದರು. ಯುವಕರು ಶಿವಮೂರ್ತಿ ಅವರಿಂದ ಕೇಕ್ ಕತ್ತರಿಸಿ, ಪರಸ್ಪರ ಹಂಚಿ ಸವಿದು ಸಂಭ್ರಮ ಪಟ್ಟರು.

ಪತ್ನಿ ಅನುಪಮ ಶಿವಮೂರ್ತಿ, ಮಕ್ಕಳಾದ ಮೌಲ್ಯ, ವೃತಿಕ್, ತಾಯಿ ನಿಂಗಮ್ಮ, ಗ್ರಾಮ ಸಮಿತಿ ಅಧ್ಯಕ್ಷ ರಮೇಶ್, ಉದ್ಯಮಿ ವಿಜಯ್ ಹೆಸರಿ, ರಾಜಪ್ಪ,ಇಂಡುವಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಉಮೇಶ್, ನಿಜಲಿಂಗಪ್ಪ, ರವೀಂದ್ರ, ಸುಬ್ರಹ್ಮಣ್ಯ, ಬಸವರಾಜ್, ಶಿವಾನಂದ್, ಧಯಾನಂದಸ್ವಾಮಿ, ಹಿರಿಯಪ್ಪ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.