ಸಾರಾಂಶ
ಬೆಂಗಳೂರು : ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದ ಪೂಂಛ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಮಂಗಳವಾರ ಸಂಜೆ ಸೇನಾ ವಾಹನ 150 ಅಡಿ ಕಮರಿಗೆ ಉರುಳಿ ಬಿದ್ದು ಸಂಭವಿಸಿದ ಅಪಘಾತದಲ್ಲಿ ಕರ್ನಾಟಕದ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಘಟನೆಯಲ್ಲಿ ಒಟ್ಟು ಐವರು ಹುತಾತ್ಮರಾಗಿದ್ದು, ಒಬ್ಬರು ಗಾಯಗೊಂಡಿದ್ದರು.
ಹುತಾತ್ಮ ಯೋಧರನ್ನು ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರದ ಮಹೇಶ್ ನಾಗಪ್ಪ ಮಾರಿಗೊಂಡ (25), ಬೆಳಗಾವಿ ಬಳಿಯ ಸಾಂಬ್ರಾ ಗ್ರಾಮದ ಸುಬೇದಾರ್ ದಯಾನಂದ ತಿರಕಣ್ಣವರ (45) ಹಾಗೂ ಉಡುಪಿ ಜಿಲ್ಲೆ ಕುಂದಾಪುರ ಬಳಿಯ ಕೋಟೇಶ್ವರ ಬಿಜಾಡಿಯ ಅನೂಪ್ ಪೂಜಾರಿ (31) ಎಂದು ಗುರುತಿಸಲಾಗಿದೆ.
11ನೇ ಮರಾಠಾ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಮಹೇಶ್ ನಾಗಪ್ಪ ಮಾರಿಗೊಂಡ, 6 ವರ್ಷಗಳಿಂದ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಮದುವೆಯಾಗಿ ಮೂರು ವರ್ಷವಾಗಿತ್ತು. ಯೋಧನಿಗೆ ತಾಯಿ, ಸಹೋದರಿ, ಪತ್ನಿ ಲಕ್ಷ್ಮೀ, ಸಹೋದರ ಇದ್ದಾರೆ. ಮಹಾಲಿಂಗಪುರ ಪಟ್ಟಣದ ಸಾಯಿಮಂದಿರದ ಹಿಂಭಾಗದಲ್ಲಿರುವ ಅವರ ಮನೆಗೆ ಗುರುವಾರ ಬೆಳಗಾವಿ ಮೂಲಕ ಪಾರ್ಥೀವ ಶರೀರ ಬರಲಿದೆ ಎಂದು ಮೂಲಗಳು ತಿಳಿಸಿವೆ. ವಿಷಯ ತಿಳಿದ ತಕ್ಷಣ ಬಾಗಲಕೋಟೆ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರು ಭೇಟಿ ನೀಡಿ ಮೃತ ಯೋಧ ಮಹೇಶ್ ಅಜ್ಜಿಗೆ ಸಾಂತ್ವನ ಹೇಳಿದರು.
ಕುಂದಾಪುರ ಬೀಜಾಡಿಯ ನಿವಾಸಿ ಚಂದು ಪೂಜಾರಿ-ನಾರಾಯಣ ಪೂಜಾರಿ ದಂಪತಿಯ ಪುತ್ರ ಅನೂಪ್ ಪೂಜಾರಿ (31), ಪತ್ನಿ, 2 ವರ್ಷದ ಪುತ್ರಿ, ತಾಯಿ, ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. 13 ವರ್ಷಗಳ ಹಿಂದೆ ಸೇನೆಗೆ ಸೇರ್ಪಡೆಗೊಂಡಿದ್ದ ಅವರು, ಪ್ರಸ್ತುತ ಮರಾಠ ಲೈಟ್ ಇನ್ಫೆಂಟ್ರಿ ಬೆಟಾಲಿಯನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ತಿಂಗಳು ರಜೆಗೆ ಆಗಮಿಸಿ ಡಿ.15 ರಂದು ನಡೆದ ಕೋಟೇಶ್ವರದ ಕೊಡಿ ಹಬ್ಬದಲ್ಲಿ ಪಾಲ್ಗೊಂಡಿದ್ದರು. ಮಗಳ ಹುಟ್ಟುಹಬ್ಬ ಆಚರಿಸಿ ಬಳಿಕ ಸೇನೆಗೆ ಹಿಂತಿರುಗಿದ್ದರು. ಅನೂಪ್ ಜೊತೆಗಿದ್ದ ಸ್ನೇಹಿತ, ಯೋಧ ಆಂಜನೇಯ ಪಾಟೀಲ್ ತನ್ನ ಸಹೋದರನೊಂದಿಗೆ ತಡರಾತ್ರಿ ಹೊರಟು ಬಂದು ಬೆಳಗ್ಗೆ ಮೃತ ಯೋಧನ ಮನೆಗೆ ಬಂದಿದ್ದಾರೆ.
ಗುರುವಾರ ತೆಕ್ಕಟ್ಟೆಯಿಂದ ಪಾರ್ಥೀವ ಶರೀರವನ್ನು ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿ ಹುಟ್ಟೂರು ಬೀಜಾಡಿಗೆ ಕರೆ ತಂದು, ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ನಡೆಸಲಾಗುತ್ತದೆ. ಅವರು ಕಲಿತ ಬೀಜಾಡಿ ಪಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.