ಸಾರಾಂಶ
-ಕೆಸ್ತೂರಿನಲ್ಲಿ ಕೃಷಿ ಇಲಾಖೆ ವಿಜ್ಞಾನಿಗಳೊಂದಿಗೆ ವಿಸ್ತರಣಾಧಿಕಾರಿಗಳ ಜಂಟಿ ಕ್ಷೇತ್ರ ಭೇಟಿ
-ತೋಟಿ ಕ್ರಮಗಳ ಮಾಹಿತಿಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ರೈತರು ಕೀಟನಾಶಕ ಸಿಂಪಡಿಸದೇ ಬೆಳೆಯುವ ಬೆಳೆಗೂ ಸಹ ಔಷಧಿ ಸಿಂಪಡಿಸುವ ಸಂದಿಗ್ಧ ಪರಿಸ್ಥಿತಿ ಒದಗಿ ಬಂದಿದೆ. ಆದ್ದರಿಂದ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಸಾಂದರ್ಭಿಕ ಶಿಫಾರಸ್ಸಿನಲ್ಲಿ ರೈತರು ಕೈಗೊಳ್ಳಬಹುದಾದ ಹತೋಟಿ ಕ್ರಮಗಳ ಬಗ್ಗೆ ವಿವರಿಸಿದ್ದಾರೆ. ಕೆಲ ಮುಖ್ಯ ವಿಚಾರಗಳ ಬಗ್ಗೆ ಗಮನ ಹರಿಸಿ ಸೈನಿಕ ಹುಳುಗಳನ್ನು ಹತೋಟಿಗೆ ತರಬೇಕು ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ರಾಜೇಶ್ವರಿ ತಿಳಿಸಿದರು.ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ತಾಲೂಕು ಕೃಷಿ ಇಲಾಖೆ ನೇತೃತ್ವದಲ್ಲಿ ಆತ್ಮ ಯೋಜನೆಯಡಿ ವಿಜ್ಞಾನಿಗಳೊಂದಿಗೆ ವಿಸ್ತರಣಾಧಿಕಾರಿಗಳ ಜಂಟಿ ಕ್ಷೇತ್ರ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಗಿ ಮತ್ತು ಮುಸುಕಿನ ಜೋಳ ತಾಲೂಕಿನ ಮುಖ್ಯ ಬೆಳೆಗಳಾಗಿವೆ. ಸದರಿ ಸಾಲಿನಲ್ಲಿ ಉತ್ತಮ ಮಳೆಯಾಗಿದ್ದು ಇದುವರೆಗೂ ತಾಲೂಕಿನಲ್ಲಿ 1441 ಹೆಕ್ಟರ್ ಮುಸುಕಿನ ಜೋಳ ಬಿತ್ತನೆಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಸ್ಪೊಡಾಪ್ಟರಾ ಜಾತಿಗೆ ಸೇರಿದ (ಸ್ಪೊಡಾಪ್ಟರಾ ಪ್ರುಜಿಫೆರಾ) ಸೈನಿಕ ಹುಳು ಬಾಧೆಯು ಮುಸುಕಿನ ಜೋಳ ಬೆಳೆಯಲ್ಲಿ ಹೆಚ್ಚಾಗಿ ಕಂಡು ಬಂದಿದೆ ಎಂದು ಹೇಳಿದರು.
ಮಾಗಿ ಉಳುಮೆ ಮಾಡುವುದು ಅಥವಾ ಆಳವಾದ ಉಳುಮೆ ಮಾಡುವುದರಿಂದ ಮೊಟ್ಟೆ ಅಥವಾ ತತ್ತಿಗಳನ್ನು ನಾಶಗೊಳಿಸಬಹುದು. ಬಿತ್ತನೆ ಸಮಯದಲ್ಲಿ ಸೈನಂಟ್ರಿನೀಲಿಪ್ರೋಲ್, ಥಯಾಮೆಥಾಕ್ಸಾಮ್ ಮಿಶ್ರಣದೊಂದಿಗೆ ಬೀಜೋಪಚಾರ ಮಾಡಿ ಬಿತ್ತನೆ ಮಾಡಬೇಕು. ಬೇವಿನ ಬೀಜದ ಕಷಾಯವನ್ನು ಶೇ.5 ರಂತೆ ಅಥವಾ ಬೇವಿನ ಮೂಲದ ಕೀಟನಾಶಕ ಅಜಡಿರೆಕ್ಟಿನ್ ನೀರಿಗೆ ಮಿಶ್ರಣ ಮಾಡಿ ಸುಳಿಯಲ್ಲಿ ಸಿಂಪಡಣೆ ಮಾಡುವುದರಿಂದ ಮೊಟ್ಟೆ ಮತ್ತು ಮರಿಹುಳುಗಳನ್ನು ನಾಶಪಡಿಸಬಹುದು. ಬಿತ್ತಿದ 15 ದಿನಗಳ ನಂತರ ಹುಳುಗಳು ಕಂಡು ಬಂದಲ್ಲಿ ಎಮಾಮೆಕ್ಟಿನ್ ಬೆಂಜೋಯೇಟ್ ನೀರಿಗೆ ಮಿಶ್ರಣ ಮಾಡಿ ಸಿಂಪಡಣೆ ಮಾಡಬೇಕು. 30 ನಂತರ ಹುಳುಗಳು ಕಂಡು ಬಂದಲ್ಲಿ ಸ್ಪೈನೊಟರಮ್ ಅಥವಾ ಕ್ಲೊರಾಂಟ್ರಿನೀಲಿಪ್ರೋಲ್ ಮಿಶ್ರಣ ಮಾಡಿ ಸಿಂಪಡಣೆ ಮಾಡಬೇಕು. ಬೆಳೆದ ಹುಳುಗಳನ್ನು ಹತೋಟಿಯಲ್ಲಿಡಲು ಗೋದಿ ತೌಡು ಅಥವಾ ಅಕ್ಕಿತೌಡು (ಬೂಸ) ಜೊತೆಗೆ ಬೆಲ್ಲವನ್ನು ಸ್ವಲ್ಪ ನೀರಿನಲ್ಲಿ ಒಂದು ರಾತ್ರಿ ಬೆರೆಸಿಟ್ಟು ಮಾರನೇ ದಿನ ಥೈಯೋಡಿಕಾರ್ಬ್ ಅನ್ನು ಮಿಶ್ರಣ ಮಾಡಿ ಬೆಳೆಯ ಸುಳಿಯಲ್ಲಿ ಉದುರಿಸುವುದು ಸೂಕ್ತವಾಗಿದೆ ಎಂದು ವಿವರಿಸಿದರು.ಕೆಸ್ತೂರು ಗ್ರಾಮದ ರೈತರಾದ ರಮೇಶ್ ಮತ್ತು ವೆಂಕಟಲಕ್ಷ್ಮಮ್ಮ ಅವರ ಮುಸುಕಿನ ಜೋಳದ ತೋಟಕ್ಕೆ ಜಿಲ್ಲೆಯ ಉಪ ಕೃಷಿ ನಿರ್ದೇಶಕ ಗಾಯತ್ರಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಹನುಮಂತರಾಯ, ವಿಜ್ಞಾನಿಗಳಾದ ಡಾ ವೆಂಕಟೇಗೌಡ, ಡಾ.ಈಶ್ವರಪ್ಪ ಹಾಗೂ ಕೃಷಿ ಅಧಿಕಾರಿಗಳು ಭಾಗವಹಿಸಿದ್ದರು.